ಹುಬ್ಬಳ್ಳಿ: ರಾಜ್ಯದ ಹುಬ್ಬಳ್ಳಿ ಮಹಾನಗರದಲ್ಲಿ ಮತ್ತೊಂದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿ ಹತ್ಯೆ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಅಂಜಲಿ ಅಂಬಿಗೇರ ಎಂದು ಗುರುತಿಸಲಾಗಿದೆ. ಮನೆಯಲ್ಲಿ ಅಂಜಲಿ ಮಲಗಿದ್ದಾಗ ದಾಳಿ ಮಾಡಿದ್ದ ದುಷ್ಕರ್ಮಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮನೆಗೆ ಚಾಕು ಸಮೇತ ನುಗ್ಗಿದ್ದ ಆರೋಪಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎಸ್. ಪಿ ಬ್ಯಾಕೋಡ್ ಸಹಿತ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಎಲ್ಲಾಪುರ ಓಣಿಯ ಗಿರೀಶ್ ಸಾವಂತ್ ಎಂಬಾತ ಹತ್ಯೆ ನಡೆಸಿದ್ದಾನೆ ಎಂದು ಶಂಕಿಸಲಾಗಿದೆ.
ಪ್ರೀತಿ ನಿರಾಕರಿಸಿದ್ದಕ್ಕೆ ಅಂಜಲಿ ಕೊಲೆ?
ಅಂಜಲಿ ಪ್ರೇಮ ಪ್ರಸ್ತಾಪ ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇಂದು ಬೆಳಗ್ಗಿನ ಜಾವ 5.30ಕ್ಕೆ ಹತ್ಯೆ ನಡೆದಿದೆ. ವಿಶ್ವ ಅಲಿಯಾಸ್ ಗೀರಿಶ್ ಎಂಬಾತ ಕೃತ್ಯ ಎಸಗಿದ್ದಾನೆ ಎಂಬುದು ಮೇಲ್ನೋಟಕ್ಕೆ ಶಂಕಿಸಲಾಗಿದೆ.
ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಧಮ್ಕಿ ಹಾಕಿದ್ದನಂತೆ ವಿಶ್ವ.
ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದ್ರೆ ನಿರಂಜನ ಹಿರೇಮಠ ಮಗಳಿಗೆ ಹೇಗೆ ಆಗಿದೆ ಹಾಗೆ ಮಾಡ್ತೀನಿ ಎಂದು ಕೂಡ ವಿಶ್ವ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.
ಮಗಳ ಹತ್ಯೆ ತಡೆಗಟ್ಟಲು ಮನೆಯವರು ಯತ್ನಿಸಿದ್ದರೂ ವಿಶ್ವ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಹಲವು ಕಳ್ಳತನ ಪ್ರಕರಣದಲ್ಲಿ ವಿಶ್ವ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಬೈಕ್ ಕಳ್ಳತನ ಪ್ರಕರಣದಲ್ಲಿ ವಿಶ್ವ ಆರೋಪಿಯಾಗಿದ್ದಾನೆ.
ಅಂಜಲಿಗೆ ವಿಶ್ವ ಈ ಹಿಂದೆ ಬೆದರಿಕೆ ಹಾಕಿರುವುದನ್ನು ತಾಯಿ ಪೊಲೀಸರ ಗಮನಕ್ಕೆ ತಂದಿದ್ದರು ಎಂದು ವರದಿಯಾಗಿದೆ. ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳದೆ ಅಂಜಲಿ ತಾಯಿಯನ್ನು ಸಮಾಧಾನಮಾಡಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆಗೆ ಕೆಲವು ದಿನ ಬಾಕಿ ಇರುವಂತೆಯೇ ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಎಂಬವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕಾಲೇಜು ಆವರಣದಲ್ಲಿ ಅನ್ಯಕೋಮಿಗೆ ಸೇರಿದ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಘಟನೆಯಿಂದ ಇಡೀ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಘಟನೆ ಖಂಡಿಸಿ ಎಬಿವಿಪಿ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಅಂತಿಮವಾಗಿ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಚುನಾವಣೆ ವೇಳೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ನೇಹಾ ಮನೆಗೆ ಪ್ರತಿದಿನ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಇದೀಗ ಸಿಐಡಿ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.