Search

MALLIKARJUNA KHARGE: ಸಂವಿಧಾನ ರಕ್ಷಿಸದಿದ್ದರೆ ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆ- ಮಲ್ಲಿಕಾರ್ಜುನ ಖರ್ಗೆ ಆತಂಕ

ಲಕ್ನೋ: ಸಾರ್ವತ್ರಿಕ ಚುನಾವಣೆಯ ಪ್ರಚಾರದ ಅಬ್ಬರ ಮುಗಿಲು ಮುಟ್ಟುತ್ತಿರುವಂತೆಯೇ ದೇಶದಲ್ಲಿ ಮತ್ತೆ ಸಂವಿಧಾನ ಸದ್ದುಮಾಡುತ್ತಿದೆ. ಉತ್ತರಪ್ರದೇಶ ರಾಜಧಾನಿ ಲಕ್ನೋದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಎಲ್ಲರಿಗೆ ಹಕ್ಕುಗಳು ದೊರೆಯಲಿದೆ. ಸಂವಿಧಾನ ರಕ್ಷಿಸಲು ಎಲ್ಲರೂ ಮುಂದೆ ಬರಬೇಕು. ಸಂವಿಧಾನ ಅಪಾಯ ಎದುರಿಸುತ್ತದೆ. ಸಂವಿಧಾನ ವ್ಯವಸ್ಥೆ ಇಲ್ಲವಾದರೆ ಅದು ಮುಂದೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡಲಿದೆ. ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆ ಸೃಷ್ಟಿಯಾಗಲಿದೆ ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯುದ್ದಕ್ಕೂ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಸಂವಿಧಾನ ಬದಲಾಯಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ನಿರಂತರ ಸ್ಪಷ್ಟನೆ ನೀಡಿದ ಬಳಿಕವೂ ಖರ್ಗೆ ವಾಗ್ದಾಳಿ ನಡೆಸಿರುವುದು ಕುತೂಹಲ ಮೂಡಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂವಿಧಾನ ರಕ್ಷಣೆಯನ್ನು ಮುಖ್ಯವಾಗಿ ಪ್ರಸ್ತಾಪಿಸುತ್ತಿದೆ. ಈ ಮೂಲಕ ಸಂವಿಧಾನ ರಕ್ಷಣೆ ಎಲ್ಲರ ಆದ್ಯ ಕರ್ತವ್ಯ ಎಂಬಂತೆ ಬಿಂಬಿಸಲು ಹೊರಟಿದೆ.
ಬಿಜೆಪಿ ವಿರುದ್ಧದ ಎನ್‌ಡಿಎ ಮೈತ್ರಿಕೂಟ ಮಣಿಸಲು ಖರ್ಗೆ ಇದೀಗ ಸಂವಿಧಾನ ಅಸ್ತ್ರ ಬಳಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಸಂವಿಧಾನ ಬದಲಾಯಿಸಲ್ಲ- ಮೋದಿ
ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಬದಲಾಯಿಸುವ ವಿಚಾರ ಬಿಜೆಪಿ ಮುಂದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದರು. ಬಿಜೆಪಿ ಸಂವಿಧಾನದ ರಕ್ಷಣೆಗೆ ಬದ್ದವಾಗಿದೆ ಎಂದು ಪುನರುಚ್ಚರಿಸಿದ್ದರು. ಇದೀಗ ಕಾಂಗ್ರೆಸ್ ಮತ್ತೊಮ್ಮೆ ಸಂವಿಧಾನ ಹೆಸರಿನಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.
ಸಂವಿಧಾನ ಬದಲಾವಣೆ ಕುರಿತಂತೆ ಹೇಳಿಕೆ ನೀಡಿದ್ದ ಉತ್ತರಕನ್ನಡ ಸಂಸದ ಅನಂತ ಕುಮಾರ್ ಹೆಗಡೆಗೆ ಈ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ಅನಂತ ಕುಮಾರ್ ಹೆಗಡೆಗೆ ಟಿಕೆಟ್ ನೀಡಿದ್ದರೆ ರಾಷ್ಟ್ರಮಟ್ಟದಲ್ಲಿ ಅದು ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಬಿಜೆಪಿ ಚಿಂತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಒತ್ತಡ ಇದ್ದರೂ ಕೂಡ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿತ್ತು.
ಮಾಜಿ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿಗೆ ಬಿಜೆಪಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾನ ಮುಗಿದಿದ್ದು, ಜೂನ್. 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ಡಿಸಿಎಂ ಪ್ರಚಾರ
ಉತ್ತರ ಪ್ರದೇಶ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕೂಡ ತೆರಳಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧಿಸುತ್ತಿರುವ ರಾಯಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಶಿವಕುಮಾರ್ ಪ್ರಚಾರ ನಡೆಸಲಿದ್ದಾರೆ. ಪ್ರಚಾರದ ಮೇಲ್ನೋಟ ವಹಿಸಲಿದ್ದಾರೆ. ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಡಿ ಕೆ ಶಿವಕುಮಾರ್ ಗುರುತಿಸಿಕೊಂಡಿದ್ದಾರೆ.

More News

You cannot copy content of this page