Search

PRAJWAL REVANNA CASE: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್, ರಾಜ್ಯ ಸರ್ಕಾರಕ್ಕೆ ಸಾಹಿತಿಗಳ ಬಹಿರಂಗ ಪತ್ರ

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಕೇಸ್ ಸಂಬಂಧಪಟ್ಟಂತೆ ರಾಜ್ಯದ 107 ಸಾಹಿತಿಗಳು, ಚಿಂತಕರು, ಹೋರಾಟಗಾರರು ಪತ್ರ ಬರೆದಿದ್ದಾರೆ. ಇಡೀ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಕುರಿತು ಸಾಹಿತಿಗಳು ಮತ್ತು ಇತರರು ಬೇಸರ ವ್ಯಕ್ತಪಡಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ನಡೆದುಕೊಂಡ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲಿ ಪ್ರಮುಖವಾಗಿ 16 ಬೇಡಿಕೆಗಳನ್ನ ಪ್ರಸ್ತಾಪಿಸಲಾಗಿದೆ. ಸುದೀರ್ಘ ಬಹಿರಂಗ ಪತ್ರದಲ್ಲಿ ಸರ್ಕಾರ ಎಲ್ಲಿ ತಪ್ಪಿದೆ ಏನು ಮಾಡಬೇಕು ಎಂದು ಸೂಚಿಸಲಾಗಿದೆ.

ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ ,ಕೆ, ನೀಲಾ, ಕೆ.ಎಸ್ ವಿಮಲಾ, ಕುಂ ವೀರಭದ್ರಪ್ಪ,‌ ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಗಣ್ಯರು ಪತ್ರ ಬರೆದಿದ್ದಾರೆ.

ಪಜ್ಞಾವಂತ ನಾಗರಿಕರ ಬಹಿರಂಗ ಪತ್ರ ಎಂದು ಸಾಹಿತಿಗಳು ಇದಕ್ಕೆ ಹೆಸರಿಟ್ಟಿದ್ದಾರೆ. ಸಂತ್ರಸ್ತರ ಪೋಟೋ, ವಿಡಿಯೋ ದಾಖಲಿಸಿ ಇಟ್ಟುಕೊಂಡಿರುವುದು .ದೂರು ಕೊಡದಂತೆ ಬೆದರಿಸುವುದು, ಅಪಹರಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡ ಬಂದ ಹಗರಣವಿದು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆ ಲಾಭಕ್ಕಾಗಿ ಬಳಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಪ್ರಜಲ್ ತಾತ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಎಲ್ಲರೂ ಪ್ರಜಾಪ್ರಭುತ್ವದ ಎಲ್ಲಾ ಹುದ್ದೆಗಳನ್ನ, ಸವಲತ್ತು ಬಳಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬ ಪ್ರಜಾಪ್ರಭುತ್ವದ ಮುಸುಕಿನೊಳಗೆ ಪ್ರಜಾಪ್ರತಿನಿಧಿಗಳೆಂಬ ಪೋಷಾಕು ಧರಿಸಿದ್ದಾರೆ.

ಪ್ರಕರಣ ಹೊರ ಬಂದ ತಕ್ಷಣ ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಬಾರದಾಗಿತ್ತು ಎಂದು ಪತ್ರದಲ್ಲಿ ಅಭಿಪ್ರಾಯಪಡಲಾಗಿದೆ. ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿರಲೂ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ

ಸಂತ್ರಸ್ತರ ಕುಟುಂಬಗಳು ಮಾನಸಿಕ ಯಾತನೆಗೆ ಗುರಿಯಾಗಿವೆ. ವಿಡಿಯೋಗಳು ಲಕ್ಷಾಂತರ ಜನರಿಗೆ ತಲುಪಿವೆ ಇದರಿಂದ ದುಷ್ಪರಿಣಾಮ ಬೀರಬಹುದಾಗಿದೆ ಎಂದು ಪತ್ರದಲ್ಲಿ ಸಾಹಿತಿಗಳು ಆತಂಕವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಸಾಹಿತಿಗಳ, ಬರಹಗಾರರ ಆಗ್ರಹ ಪಟ್ಟಿ

 • ಆರೋಪಿಯನ್ಮ ಕೂಡಲೇ ಬಂಧಿಸಬೇಕು,ಐಟಿ, ಐಪಿಸಿ ಕಾಯ್ದೆ ಅಡ್ಡಿಯಲ್ಲಿ ಮೊಕದ್ದಮೆ

*ಸಂತಸ್ತಯರು ಭೀತಿಯಿಲ್ಲದೆ ದೂರು ನೀಡುವ ವಾತಾವರಣ ಇರಬೇಕು

 • ತನಿಖೆ ಅಂತ್ಯವಾಗುವ ತನಕ ಹೆಚ್.ಡಿ ರೇವಣ್ಣ ವಿಧಾನಸಭೆ ಸದಸ್ಯತ್ವ ಅಮಾನತು SIT ತನಿಖೆ ಕಾಲಮಿತಿಯೊಳಗೆ ನಡೆಯಬೇಕು
 • ಪ್ರಜ್ವಲ್ ಚಾಲಕ ಕಾರ್ತಿಕ್ ನನ್ನ ಕೂಡಲೇ ಬಂಧಿಸಬೇಕು ದೇವರಾಜೇಗೌಡ ವಿರುದ್ದ ಕೂಡ ಗಂಭೀರ ಪ್ರಕರಣ ದಾಖಲು ಮಾಡಬೇಕು
  ಗುಪ್ತಚರ ಇಲಾಖೆ ವೈಫಲ್ಯ ಎದ್ದು ಕಾಣುತ್ತಿದೆ.
  ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು
  ಇದು ಪತ್ರದಲ್ಲಿ ಸಾಹಿತಿಗಳು ಆಗ್ರಹಿಸಿದ್ದಾರೆ.
  ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಸಾಹಿತಿಗಳು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ. ಕುಮಾರಸ್ವಾಮಿ ದೊಡ್ಡ ತಿಮಿಂಗಿಲದ ಬಗ್ಗೆ ಮಾತನಾಡಿದ್ದಾರೆ. ಅವರ ಬಳಿ ಮಾಹಿತಿ ಇದ್ದರೆ ಅದನ್ನು ಹಂಚಿಕೊಳ್ಳಲಿ. ಎಸ್ಐಟಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ . ಇದರಲ್ಲಿ ಮುಚ್ಚುಮರೆ ಇಲ್ಲ ಎಂದು ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಸಾಹಿತಿಗಳು ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರದಲ್ಲೇನಿದೆ..?

ಮಾನ್ಯರೆ,
ಹಾಸನದ ಸಂಸದ ಪ್ರಜ್ವಲ್ ರೇವಣ್ಣ, ಅವನ ತಂದೆ ಮತ್ತು ಶಾಸಕ ಎಚ್. ಡಿ. ರೇವಣ್ಣ ಅವರುಗಳು ನಡೆಸಿದ್ದಾರೆನ್ನಲಾದ ವಿಕೃತ ಲೈಂಗಿಕ ಸಮೂಹ ಅತ್ಯಾಚಾರ ಹಗರಣವು ಅತ್ಯಂತ ಹೇಯವೂ, ನಾಗರಿಕ ಸಮಾಜ ತಲೆತಗ್ಗಿಸುವಂತಹುದೂ ಆಗಿದೆ. ಈ ಲೈಂಗಿಕ ಕ್ರಿಯೆಗಳನ್ನು ಸುಮಾರು 2900 ವಿಡಿಯೋಗಳು ಮತ್ತು ಫೋಟೋಗಳಲ್ಲಿ ದಾಖಲಿಸಿ ಇಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು, ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವನ್ನು ಮಾಹಿತಿ ಇರುವ ಯಾರೊಬ್ಬರೂ ಕಾನೂನು ಪಾಲಕರಿಗೆ ತಿಳಿಸದೆ ಮುಚ್ಚಿಟ್ಟಿರುವುದು ಘೋರ ಅಪರಾಧವಾಗಿದೆ.

ಜಗತ್ತಿನಲ್ಲಿ ಹಿಂದೆಂದೂ ಕೇಳರಿಯದಂತಹ ಈ ಹಗರಣವನ್ನು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆಯ ಲಾಭಕ್ಕಾಗಿ ಬಳಸುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ರಾಜಕೀಯ ಶಕ್ತಿಗಳ ಈ ಬೇಜವಾಬ್ದಾರಿ ನಡವಳಿಕೆಯು ಮೂಲ ಅಪರಾಧ ಮತ್ತು ಅದರಿಂದ ಆಗಲಿರುವ ಪರಿಣಾಮಗಳನ್ನು ಗೌಣ ಮಾಡುತ್ತಿದೆ.

ಪ್ರಜ್ವಲ್ ರೇವಣ್ಣನ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಇವರುಗಳು ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ಸಂಪುಟ ದರ್ಜೆ ಸಚಿವರು, ರಾಜ್ಯಸಭೆ, ಲೋಕಸಭೆ, ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯತ್ವ- ಹೀಗೆ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು, ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ರಾಜ್ಯದಲ್ಲೇ ಇಂತಹ ಮತ್ತೊಂದು ರಾಜಕೀಯ ಕುಟುಂಬ ಇರಲಿಕ್ಕಿಲ್ಲ. ಇಂಥಹ ಕುಟುಂಬದ ಈ ಹಗರಣವು ನಮ್ಮನ್ನು 19ನೇ ಶತಮಾನದ ಊಳಿಗಮಾನ್ಯ, ಪಾಳೇಗಾರಿ, ಮಹಿಳಾ ವಿರೋಧಿ, ಪಿತೃಪ್ರಧಾನ ಸಮಾಜದ ದಿನಗಳಿಗೆ ಕೊಂಡೊಯ್ಯುತ್ತದೆ. ಈ ಕುರಿತು ಬರುತ್ತಿರುವ ತಳಮೂಲದ ಮಾಧ್ಯಮ ವರದಿಗಳು ಎಚ್. ಡಿ. ರೇವಣ್ಣ, ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬಸ್ಥರು ಪ್ರಜಾಪ್ರಭುತ್ವದ ಮುಸುಕಿನೊಳಗೆ, ಪ್ರಜಾಪ್ರತಿನಿಧಿಗಳೆಂಬ ಧಿರಿಸು ಧರಿಸಿ ನಡೆಸಿರುವ ಪಾಳೇಗಾರಿ ಆಡಳಿತದ ವಿವರಗಳನ್ನು ಬಯಲು ಮಾಡುತ್ತಿವೆ.

ಈ ಹಗರಣ ಬಯಲಾದ ಕೂಡಲೆ ಹಾಸನ ಕ್ಷೇತ್ರದ ಚುನಾವಣೆಯನ್ನು ಸ್ಥಗಿತಗೊಳಿಸದೆ ಆರೋಪಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಒದಗಿಸಿದ್ದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಮಾಡಿದ ಅಪಚಾರವಾಗಿದೆ. ಹಗರಣ ಬಯಲಾದರೂ ಐದು ದಿನಗಳು (ಏಪ್ರಿಲ್ 22ರಿಂದ 26, 2024) ಆರೋಪಿಯು ಸ್ವತಂತ್ರವಾಗಿ ಇರಲು ಬಿಟ್ಟಿದ್ದು, ಅವನ ಚಲನವಲನದ ಮೇಲೆ ಕಣ್ಗಾವಲು ಹಾಕದೆ ಇದ್ದಿದ್ದು ನೋಡಿದರೆ ಈ ಸಮಾಜದಲ್ಲಿ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಮಹಿಳೆಯರು ಸುರಕ್ಷಿತವಾಗಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟು ಹಾಕಿದೆ. ಬೇರೆ ಬೇರೆ ವರ್ಗಗಳು, ವೃತ್ತಿಗಳು, ಪ್ರದೇಶಗಳಿಗೆ ಸೇರಿದ ನೂರಾರು ಜನ ಮಹಿಳೆಯರ ಮೇಲೆ ಜನಪ್ರತಿನಿಧಿಗಳು ನಡೆಸಿರುವ ಈ ಅಪರಾಧದ ಗಹನತೆಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ಸರ್ಕಾರಕ್ಕೆ, ರಾಜಕೀಯ ನಾಯಕರಿಗೆ ಅರ್ಥವಾಗಿಲ್ಲವೇ ಎಂಬ ಅನುಮಾನ ಮೂಡುತ್ತದೆ.

ಈಗ ಪ್ರತಿದಿನದ ಆರೋಪ-ಪ್ರತ್ಯಾರೋಪಗಳು, ಜಾತಿ ಆಧರಿತ ಹೇಳಿಕೆಗಳು, ರಾಜಕೀಯ ನಾಯಕರ ಲಿಂಗತ್ವ ಸೂಕ್ಷ್ಮತೆ ಇಲ್ಲದ ಹೇಳಿಕೆಗಳು, ಸಂತ್ರಸ್ತರನ್ನೇ ಅಪರಾಧಿಗಳಂತೆ ಬಿಂಬಿಸುವ ಸಮೂಹ ಮಾಧ್ಯಮಗಳ ವರದಿಗಳು ಸಾಮಾಜಿಕ ಸ್ವಾಸ್ಥ್ಯ ವನ್ನು, ಮಾನಸಿಕ ನೆಮ್ಮದಿಯನ್ನು ಹಾಳುಮಾಡಿವೆ. ಸಂತ್ರಸ್ತರ ಘನತೆಯನ್ನು ಕುಂದಿಸುತ್ತಿವೆ. ಸಂತ್ರಸ್ತರು ಈಗ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದು ದೂರು ಕೊಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಸರೀಕರ ಎದುರು ಕಾಣಿಸಿಕೊಳ್ಳುವುದು ಕಷ್ಟವಾಗಿದೆ. ಗುರುತು ಬಯಲಾದ ಸಂತ್ರಸ್ತರ ಕುಟುಂಬಗಳು ತೀವ್ರ ಮಾನಸಿಕ ಯಾತನೆಗೆ ಗುರಿಯಾಗಿವೆ. ಕುಟುಂಬ ಸದಸ್ಯರು ಮತ್ತು ಮಕ್ಕಳು ಈ ಪರಿಸ್ಥಿತಿಯನ್ನು ಅರ್ಥೈಸಲಾಗದೆ ಕ್ಷೋಭೆಗೆ ತುತ್ತಾಗಿದ್ದಾರೆ. ಹಲವಾರು ಕುಟುಂಬಗಳು ಮನೆ ಮತ್ತು ಊರು ತೊರೆದಿವೆ ಎನ್ನಲಾಗಿದೆ. ಮೂರ‍್ನಾಲ್ಕು ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸಿದ ವರದಿಗಳು ಕೇಳಿಬಂದಿವೆ.

ಆ ವಿಡಿಯೋಗಳು ಲಕ್ಷಾಂತರ ಜನರನ್ನು ತಲುಪಿರುವುದರಿಂದ ಅವು ಯುವಜನರು, ಕಾಮುಕರು ಮತ್ತು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮ ಘೋರವಾಗಲಿದೆ. ಇದೊಂದು ಗಂಭೀರ ಸಾಮಾಜಿಕ ಮತ್ತು ಮಾನಸಿಕ ಸಮಸ್ಯೆಯಾಗುತ್ತಿದೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಈ ನಾಡಿನ ಜವಾಬ್ದಾರಿಯುತ ನಾಗರಿಕರಾದ ನಾವು ಈ ಕೆಳಗಿನ ಬೇಡಿಕೆಗಳನ್ನು ಆಗ್ರಹಪೂರ್ವಕವಾಗಿ ಮಂಡಿಸುತ್ತಿದ್ದೇವೆ.

 1. ಆರೋಪಿ ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆಮಾಡಿ ಈ ಕೂಡಲೇ ಬಂಧಿಸಬೇಕು. ಐಟಿ ಕಾಯಿದೆ, ಐಪಿಸಿ ಕಾಯಿದೆಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು.
 2. ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣ ಮಾಡಬೇಕು. ರಾಜ್ಯದ ಮುಖ್ಯಸ್ಥರಾಗಿ ತಾವು ಸಂತ್ರಸ್ತ ಮಹಿಳೆಯರನ್ನು ಉದ್ದೇಶಿಸಿ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು. ಸಂತ್ರಸ್ತರಿಗೆ ತೊಂದರೆ ಕೊಡುವ, ದೂರು ನೀಡದಂತೆ ತಡೆಯೊಡ್ಡುವ, ದೂರು ಹಿಂತೆಗೆದುಕೊಳ್ಳುವಂತೆ ಒತ್ತಡ ತರುವ, ಸಂತ್ರಸ್ತರ ಕುರಿತು ಅವಹೇಳನ-ಅಪಪ್ರಚಾರ ಮಾಡುವ, ಸಂತ್ರಸ್ತರ ಮಕ್ಕಳು ಹಾಗೂ ಕುಟುಂಬದವರಿಗೆ ತೊಂದರೆ ನೀಡುವ ಯಾರದೇ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಾವು ಮಾಧ್ಯಮಗಳ ಮೂಲಕ ಪ್ರಕಟಣೆ ನೀಡಬೇಕು. ಈ ಭರವಸೆ ತುಂಬುವ ಹೇಳಿಕೆಯನ್ನು ವಿಡಿಯೋ ಮೂಲಕವೂ ಬಿಡುಗಡೆ ಮಾಡಬೇಕು.
 3. ಹಗರಣ ಕುರಿತು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ನೀವು ಕಡಿವಾಣ ಹಾಕಬೇಕು. ಹಗರಣವನ್ನು ಗಂಭೀರವಾಗಿ ಪರಿಗಣಿಸಿ, ಸಮರ್ಥ ತನಿಖೆಗೆ ಅವಕಾಶ ಮಾಡಿಕೊಡುವಂತೆ ರಾಜಕೀಯ ನಾಯಕರಿಗೆ ಸೂಚನೆ ನೀಡಬೇಕು.
 4. ಎಸ್‌ಐಟಿ ತನಿಖೆಯು ಕಾಯಿದೆಯ ಅನುಸಾರ ಕಾಲಮಿತಿಯೊಳಗೆ ನಡೆಯಬೇಕು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 173ಕ್ಕೆ 2018ರಲ್ಲಿ ತಂದಿರುವ ತಿದ್ದುಪಡಿಯು ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಎರಡು ತಿಂಗಳ ಒಳಗೆ ಮುಗಿಸಬೇಕು ಎನ್ನುತ್ತದೆ. ಹಾಗೂ 60 ದಿನಗಳ ಒಳಗಾಗಿ ತನಿಖೆ ಮುಗಿಯದಿದ್ದಲ್ಲಿ ಆರೋಪಿಯ ಜಾಮೀನು ಪಡೆಯಲು ಅವಕಾಶ ಕಲ್ಪಿಸುತ್ತದೆ. ಹಾಗಾಗಿ ಕಾಲಮಿತಿಯ ತನಿಖೆಯನ್ನು ಪ್ರಕಟಿಸಬೇಕು.
 5. ಈ ಲೈಂಗಿಕ ಕೃತ್ಯಗಳ ಚಿತ್ರೀಕರಣದಲ್ಲಿ ಪ್ರಜ್ವಲ್ ಜೊತೆಗೆ ಭಾಗಿ ಆಗಿರಬಹುದಾದವರನ್ನು ಪತ್ತೆಮಾಡಿ ಮೊಕದ್ದಮೆ ಹೂಡಬೇಕು.
 6. ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹಲವಾರು ತಿಂಗಳುಗಳಿಂದ ಹೇಳುತ್ತಿರುವ ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್‌ನನ್ನು ಕೂಡಲೇ ಬಂಧಿಸಬೇಕು.
 7. ಈ ವಿಡಿಯೋಗಳು ತಮ್ಮ ಬಳಿ ಇದ್ದವೆಂದು ಹೇಳಿದ ಬಿಜೆಪಿ ನಾಯಕ ಬಿ. ದೇವರಾಜೇಗೌಡ ಮತ್ತು ಕಾರ್ತಿಕ್ ವಿರುದ್ದ ಈ ಕೆಳಗಿನ ಕೃತ್ಯಗಳಿಗಾಗಿ ಗಂಭೀರ ಪ್ರಕರಣಗಳನ್ನು ದಾಖಲಿಸಬೇಕು: (1) ಈ ಹಗರಣವನ್ನು ಮುಚ್ಚಿಟ್ಟಿದ್ದಕ್ಕೆ, (2) ಆರೋಪಿಯು ತಪ್ಪಿಸಿಕೊಳ್ಳಲು ಪರೋಕ್ಷವಾಗಿ ಅವಕಾಶ ಮಾಡಿಕೊಟ್ಟಿದ್ದಕ್ಕೆ, (3) ಕಾನೂನು ಪಾಲಕರ ಕೈತಪ್ಪಿಸಿ ವಿಡಿಯೋಗಳು ಸಮಾಜಘಾತುಕರ ಕೈಗೆ ಸಿಗುವಂತೆ ಮಾಡಿದಕ್ಕೆ, (4) ನೂರಾರು ಮಹಿಳೆಯರ ಮತ್ತು ಅವರ ಕುಟುಂಬದವರ ಬದುಕಿನ ಘನತೆಗೆ ಕುಂದು ತಂದಿರುವುದಕ್ಕೆ, (5) ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿದ್ದಕ್ಕೆ (6) ಚುನಾವಣೆಯ ಮೇಲೆ ಈ ಹಗರಣವು ಪ್ರತಿಕೂಲ ಪರಿಣಾಮ ಬೀರುವಂತೆ ಸಂಚು ರೂಪಿಸಿದ್ದಕ್ಕೆ ಸೂಕ್ತ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು
 8. ವಿಡಿಯೋಗಳನ್ನು ಸಾರ್ವಜನಿಕರಿಗೆ ಹಂಚಿದವರ ವಿರುದ್ಧ ಮಾನವಹಕ್ಕುಗಳಿಗೆ ಧಕ್ಕೆ ತಂದಿರುವುದು, ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವುದು, ಚುನಾವಣೆಯನ್ನು ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪದ ಮೇಲೆ ಮೊಕದ್ದಮೆ ಹೂಡಬೇಕು
 9. ವಿಡಿಯೋಗಳ ಕುರಿತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ರಾಜ್ಯ ಅಧ್ಯಕ್ಷರಿಗೆ ಬಿ.ದೇವರಾಜೇಗೌಡ ಬರೆದಿರುವುದಾಗಿ ಹೇಳುತ್ತಿರುವ ಪತ್ರಗಳನ್ನು ಆಧರಿಸಿ, ಆ ಇಬ್ಬರು ರಾಜಕೀಯ ನಾಯಕರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿಲ್ಲದೆ ಇರುವುದಕ್ಕೆ ಅವರುಗಳನ್ನೂ ಸಂಚಿನ ಭಾಗವಾಗಿ ಪರಿಗಣಿಸಬೇಕು.
 10. ಕೆಲವು ವಿಡಿಯೋಗಳು ಐದಾರು ವರ್ಷಗಳಷ್ಟು ಹಳೆಯವು ಎಂದು ಎಚ್ ಡಿ ರೇವಣ್ಣ ಹೇಳಿರುವುದು ವರದಿಯಾಗಿದೆ. ಅಷ್ಟು ವರ್ಷಗಳಿಂದ ನಡೆಯುತ್ತಿರುವ ಈ ಲೈಂಗಿಕ ವಿಕೃತಿಯನ್ನು ಮುಂದುವರೆಯಲು ಬಿಟ್ಟಿರುವುದರಿಂದ ಅವರ ಕುಟುಂಬದ ಎಲ್ಲ ಸದಸ್ಯರನ್ನು ಈ ಕೃತ್ಯದ accomplice ಗಳೆಂದು ಪರಿಗಣಿಸಿ ಅವರ ಮೇಲೆಯೂ ಮೊಕದ್ದಮೆ ಹೂಡಬೇಕು. ತಂದೆ ಮತ್ತು ಮಗ ಇಬ್ಬರೂ ಭಾಗಿಯಾಗಿರುವುದರಿಂದ ಪ್ರಜ್ವಲ್‌ನ ತಾಯಿಯನ್ನೂ ವಿಚಾರಣೆಗೆ ಗುರಿಪಡಿಸಬೇಕು. ಸಂತ್ರಸ್ತರು ಅತ್ಯಾಚಾರ ನಡೆದಿದೆ ಎಂದು ಹೇಳಲಾದ ಮನೆಗಳಲ್ಲಿ ಅರೋಪಿಯ ತಾಯಿಯೂ ನೆಲೆಸಿದ್ದು, ಈ ಕೃತ್ಯ ಮೇಲಿಂದ ಮೇಲೆ ನಡೆದಿರುವುದರಿಂದ ತಾಯಿಯನ್ನು accomplice ಮಾಡಬೇಕು.
 11. ಏಪ್ರಿಲ್ 22, 2024ರಂದು ವಿಡಿಯೋಗಳು ಬಹಿರಂಗವಾಗಿವೆ. ಏಪ್ರಿಲ್ 25ಕ್ಕೆ ರಾಜ್ಯ ಮಹಿಳಾ ಆಯೋಗವು ತನಿಖೆಗೆ ಶಿಫಾರಸ್ಸು ಮಾಡಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಆದರೂ ಏಪ್ರಿಲ್ 27ರಂದು ಆರೋಪಿಯು ದೇಶ ಬಿಟ್ಟು ಪರಾರಿಯಾಗಿರುವುದು ಗೃಹ ಇಲಾಖೆಯ ಮತ್ತು ಇಂಟೆಲಿಜೆನ್ಸ್ ವಿಭಾಗದ ವೈಫಲ್ಯವನ್ನು ತೋರಿಸುತ್ತದೆ. ಆದ್ದರಿಂದ ಈ ಇಲಾಖೆಗಳ ಸಂಬಂಧಿಸಿದ ಅಧಿಕಾರಿಗಳನ್ನು ಈ ಕೂಡಲೇ ವಜಾ ಮಾಡಿ, ವಿಚಾರಣೆ ನಡೆಸಬೇಕು.
 12. ಸುಮಾರು ಒಂದು ವರ್ಷದ ಹಿಂದೆಯೇ ಪ್ರಜ್ವಲ್ ರೇವಣ್ಣ 86 ಮಾಧ್ಯಮ ಸಂಸ್ಥೆಗಳು ಮತ್ತು ಮೂವರು ವ್ಯಕ್ತಿಗಳು ತನ್ನ ವಿರುದ್ಧ ಯಾವುದೇ ಮಾನಹಾನಿಕರ ವರದಿ, ವಿಡಿಯೋ, ಚಿತ್ರ ಪ್ರಸಾರ ಮಾಡಬಾರದೆಂದು ತಡೆಯಾಜ್ಞೆ ಪಡೆದಿದ್ದಾನೆ. ಒಬ್ಬ ಜನಪ್ರತಿನಿಧಿ ಹೀಗೆ ದೀರ್ಘಕಾಲದ ತಡೆಯಾಜ್ಞೆಯನ್ನು ಪಡೆಯುವುದು ಜನರ ಮಾಹಿತಿಯ ಹಕ್ಕಿನ ಉಲ್ಲಂಘನೆಯಾಗುತ್ತದೆ. ಜನಪ್ರತಿನಿಧಿಯು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಜನಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದನ್ನು ತಿಳಿದುಕೊಳ್ಳುವ ಹಕ್ಕು ಎಲ್ಲ ಪ್ರಜೆಗಳಿಗೆ ಇರುತ್ತದೆ. ತನ್ನ ವೈಯಕ್ತಿಕ ವ್ಯವಹಾರಗಳೂ ಕೂಡ ಜನರ ಹಿತಾಸಕ್ತಿಗೆ ಮಾರಕವಾಗದಂತೆ ಇಟ್ಟುಕೊಳ್ಳಬೇಕಾದ್ದು ಜನಪ್ರತಿನಿಧಿಯ ಕರ್ತವ್ಯ. ಹೀಗಿರುವಾಗ ತನ್ನ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಪಡೆದ ಈ ತಡೆಯಾಜ್ಞೆಯಿಂದ ಜನರ ಹಕ್ಕಿನ ಉಲ್ಲಂಘನೆಯಾಗಿದ್ದು ಜನರ ಹಕ್ಕುಗಳ ಸಂರಕ್ಷಕನಾಗಿರುವ (ಕಸ್ಟೋಡಿಯನ್) ರಾಜ್ಯ ಸರ್ಕಾರವು ಈ ಕುರಿತು ಮೊಕದ್ದಮೆ ದಾಖಲಿಸಬೇಕು. ಜನರ ಮಾಹಿತಿಯ ಹಕ್ಕನ್ನು ಎತ್ತಿ ಹಿಡಿಯಬೇಕು.
 13. ಎಚ್ ಡಿ ರೇವಣ್ಣ ಕುಟುಂಬವು ಹಾಸನ ಜಿಲ್ಲೆಯ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ನೇಮಕ ಮಾಡಿಸಿಕೊಂಡು ಅನೇಕ ಭೂವ್ಯವಹಾರಗಳನ್ನು ನಡೆಸುತ್ತಿದೆ ಎಂಬ ಆರೋಪಗಳಿವೆ. ಅಂತಹ ಅಧಿಕಾರಿಗಳು ಅದೇ ಸ್ಥಾನದಲ್ಲಿ ಮುಂದುವರೆದರೆ ನಿಷ್ಪಕ್ಷಪಾತ ತನಿಖೆಗೆ ಅಡ್ಡಿಯಾಗುತ್ತಾರೆ. ಈ ಅಧಿಕಾರಿಗಳನ್ನು ಬಳಸಿಕೊಂಡು ಸಂತ್ರಸ್ತರು ದೂರು ನೀಡದಂತೆ ತಡೆಯುವ ಅಥವಾ ಬೆದರಿಸುವ ಸಾಧ್ಯತೆಗಳಿವೆ. ಆದ್ದರಿಂದ, ಎಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಎಲ್ಲ ಈ ಕೂಡಲೆ ವರ್ಗಾವಣೆ ಮಾಡಬೇಕು.
 14. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಎಚ್ ಡಿ ರೇವಣ್ಣ ಅವರ ವಿಧಾನ ಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು. ಇದು ಇದುವರೆಗೂ ನಡೆದಿಲ್ಲದಿರುವ ಹೇಯ ಪ್ರಕರಣವಾಗಿದ್ದು, ಇದರ ವಿಕೃತಿಯ ಪ್ರಮಾಣ ಮತ್ತು ಸಂತ್ರಸ್ತರ ಸಂಖ್ಯೆ ಬೃಹತ್ತಾಗಿದೆ. ಇಲ್ಲಿ ಸರ್ಕಾರದ ಸವಲತ್ತುಗಳ ದುರ್ಬಳಕೆ ಮತ್ತು ಸ್ಥಾನಮಾನದ ದುರ್ಬಳಕೆ ಗಂಭೀರವಾಗಿದೆ. ಹಾಗಾಗಿ ಇದನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನಿನ ವ್ಯಾಪ್ತಿಯಲ್ಲಿ ಮಾತ್ರ ಪರಿಗಣಿಸದೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕಿದೆ. ಜನಪ್ರತಿನಿಧಿಗಳಲ್ಲಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಂಬಿಕೆಯನ್ನು ಉಳಿಸಲು ಈ ಕ್ರಮ ಅತ್ಯಗತ್ಯವಾಗಿದೆ.
 15. ಈ ಆರೋಪಿಗಳ ನಡೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಆ ನಿಟ್ಟಿನಲ್ಲಿ ಸಂವಿಧಾನಾತ್ಮಕ ಹುದ್ದೆಗೆ ಎಸಗಿದ ಅಪಚಾರಕ್ಕೆ, ಸರ್ಕಾರಿ ಬಂಗ್ಲೆಯನ್ನು ಅಪರಾಧಕ್ಕೆ ಕೃತ್ಯಕ್ಕೆ ಬಳಸಿರುವುದಕ್ಕೆ ಮೊಕದ್ದಮೆ ಹೂಡಬೇಕು ಮತ್ತು ಈ ಕುಟುಂಬಕ್ಕೆ ಒದಗಿಸಲಾಗಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಈ ಕೂಡಲೆ ಹಿಂದಕ್ಕೆ ಪಡೆಯಬೇಕು.
 16. ಈ ಹಗರಣವು ಭುಗಿಲೆದ್ದಿರುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣನ ತಾತ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಅವನ ಚಿಕ್ಕಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮನ್ನು ಈ ಹಗರಣಕ್ಕೆ ತಳಕುಹಾಕುವಂತಹ ಯಾವುದೇ ವರದಿ ಮಾಡಬಾರದೆಂದು ಸಾಮಾಜಿಕ ಮಾಧ್ಯಮಗಳು, ಮುದ್ರಣ, ಟಿವಿ, ಡಿಜಿಟಲ್ ಮಾಧ್ಯಮಗಳ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ ತಂದಿದ್ದಾರೆ. ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜೆಗಳ ಮಾಹಿತಿ ಹಕ್ಕಿನ ಸ್ವಾತಂತ್ರ್ಯ ವನ್ನು ಉಲ್ಲಂಘಿಸುತ್ತದೆ.
  ಒಂದು ಕಡೆ ಮಾಧ್ಯಮಗಳ ಸ್ವತಂತ್ರ ವರದಿಗೆ ತಡೆಹಾಕಿಸಿರುವ ಅರ್ಜಿದಾರರು (ಎಚ್.ಡಿ.ಕುಮಾರಸ್ವಾಮಿ) ಮತ್ತೊಂದು ಕಡೆ ತಾವೇ ಈ ಹಗರಣ ಕುರಿತಾಗಿಯೇ ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ಅಪ್ರಜಾಸತ್ತಾತ್ಮಕ ನಡೆಯಾಗಿದೆ. ಕಾನೂನಿನ ಮೂಲಕ ಏಕಮುಖಿ ವರದಿಗಾರಿಕೆಯನ್ನು ಮಾಡಿಸಲಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ತಡೆಯಾಜ್ಞೆ ತೆರವುಗೊಳಿಸಬೇಕು. ಈ ಇಬ್ಬರು ಅರ್ಜಿದಾರರಿಗೆ ಆರೋಪಿಯು ಹತ್ತಿರದ ಸಂಬಂಧಿಯಾಗಿದ್ದು, ಅವರದೇ ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿಯೂ ಆಗಿದ್ದಾನೆ. ಪ್ರಜೆಗಳ ಹಕ್ಕಿನ ರಕ್ಷಕನಾಗಿರುವ (ಕಸ್ಟೋಡಿಯನ್ ಆಫ್ ಸಿಟಿಜನ್ಸ್ ರೈಟ್ಸ್) ರಾಜ್ಯ ಸರ್ಕಾರವು ಈ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.

ಪ್ರಜಾಪ್ರಭುತ್ವದ ಉಳಿವಿಗೆ, ಪಿತೃಪ್ರಧಾನ ಸಮಾಜದ ನಿರ್ಮೂಲನೆಗೆ, ಸಂವಿಧಾನದತ್ತವಾದ ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ನೀವು ನಮ್ಮ ಆಗ್ರಹಗಳನ್ನು ಪರಿಗಣಿಸಬೇಕು. ಬಹಳ ಎಚ್ಚರಿಕೆಯಿಂದ ಬರೆದಿರುವ ಮೇಲಿನ ಪ್ರತಿಯೊಂದು ಅಂಶಗಳಿಗೂ ಸೂಕ್ತವಾದ ಕಾನೂನು ಕ್ರಮ ಮತ್ತು ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.

ಸಹಿ-
1) ಡಾ ವಿಜಯಾ, ಹಿರಿಯ ಲೇಖಕರು
2) ಡಾ. ಜಿ ರಾಮಕೃಷ್ಣ, ಹಿರಿಯ ಚಿಂತಕರು, ಲೇಖಕರು
3) ವಸುಂಧರಾ ಭೂಪತಿ, ವೈದ್ಯರು, ಲೇಖಕರು
4) ಕೆ ಶರೀಫಾ, ಲೇಖಕರು
5) ಸಬಿಹಾ ಭೂಮಿಗೌಡ, ವಿಶ್ರಾಂತ ಕುಲಪತಿಗಳು,ಅಕ್ಕಮಹಾದೇವಿ ಮಹಿಳಾ ವಿವಿ
6) ಕಾಳೇಗೌಡ ನಾಗವಾರ, ಜಾನಪದ ವಿದ್ವಾಂಸರು, ಮೈಸೂರು
7) ಎಂ ಎಸ್ ಆಶಾದೇವಿ, ಬರಹಗಾರರು
8) ಎಂ ಡಿ ಪಲ್ಲವಿ, ಗಾಯಕಿ, ರಂಗಕರ್ಮಿ
9) ನಾಗೇಶ್ ಹೆಗಡೆ, ಹಿರಿಯ ಪತ್ರಕರ್ತರು
10) ಮೀನಾಕ್ಷಿ ಬಾಳಿ, ಅಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
11) ಕೆ ನೀಲಾ, ಉಪಾಧ್ಯಕ್ಷರು, ಜನವಾದಿ ಮಹಿಖಾ ಸಂಘಟನೆ
12) ಜ್ಯೋತಿ ಎ, ರಾಜ್ಯ ಕಾರ್ಯದರ್ಶಿ, ಎನ್ ಎಫ್ ಐ ಡಬ್ಲ್ಯು
13) ಕೆ ಎಸ್ ವಿಮಲಾ, ಉಪಾಧ್ಯಕ್ಷರು, ಜನವಾದಿ ಮಹಿಳಾ ಸಂಘಟನೆ
14) ಕುಂ ವೀರಭದ್ರಪ್ಪ, ಹಿರಿಯ ಲೇಖಕರು
15) ಮುಜಫರ್ ಅಸ್ಸಾದಿ, ಹಿರಿಯ ಕೊಪ್ಪಳ
16) ನಾ. ದಿವಾಕರ, ಹಿರಿಯ ಬರಹಗಾರರು
17) ಅಗ್ರಹಾರ ಕೃಷ್ಣಮೂರ್ತಿ, ಬರಹಗಾರರು
18) ಜಿ ವಿ ಆನಂದಮೂರ್ತಿ, ಲೇಖಕರು, ತುಮಕೂರು
19) ಬಿ. ಟಿ. ಜಾಹ್ನವಿ, ಲೇಖಕರು, ದಾವಣಗೆರೆ
20) ಎಂ ಆರ್ ಕಮಲ, ಬರಹಗಾರರು
21) ಅಕ್ಷತಾ ಹುಂಚದಕಟ್ಟೆ, ಪ್ರಕಾಶಕರು
22) ಡಾ. ಬಿ ಸಿ ಶೈಲಾ ನಾಗರಾಜ್, ಲೇಖಕಿ, ತುಮಕೂರು
23) ಡಾ. ಲೀಲಾ ಸಂಪಿಗೆ, ಮಹಿಳಾ ಹಕ್ಕು ಚಳವಳಿಗಾರರು
24) ಕೆ. ಫಣಿರಾಜ್, ಕೋಮು ಸೌಹಾರ್ದ ವೇದಿಜೆ, ಉಡುಪಿ
25) ನರೇಂದ್ರ ನಾಯಕ್, ವಿಚಾರವಾದಿ, ಮಂಗಳೂರು
26) ಗೀತಾ ಸುರತ್ಕಲ್, ರಂಗಭೂಮಿ ಕಲಾವಿದೆ
27) ಸಂಜ್ಯೋತಿ, ಉಪನ್ಯಾಸಕರು
28) ದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ
29) ಶ್ರೀಪಾದ ಭಟ್, ಬೆಂಗಳೂರು
30) ಗುರುಪ್ರಸಾದ್ ಡಿ ಎನ್, ಬೆಂಗಳೂರು
31) ಶಶಿ ಸಂಪಳ್ಳಿ, ಪತ್ರಕರ್ತರು
32) ಗುಲಾಬಿ ಬಿಳಿಮಲೆ, ಪತ್ರಕರ್ತರು
33) ಅಖಿಲಾ ವಿದ್ಯಾಸಂದ್ರ, ವಕೀಲರು
34) ಧರ್ಮೇಶ್, ಸಿಐಟಿಯು ಜಿಲ್ಲಾಧ್ಯಕ್ಷರು
35) ಪ್ರಭಾ ಬೆಳವಂಗಲ, ಜನವಾದಿ ಮಹಿಳಾ ಸಂಘಟನೆ
36) ಸತ್ಯಾ ಎಸ್, ಜನವಾದಿ ಮಹಿಳಾ ಸಂಘಟನೆ
37) ಪ್ರಕಾಶ್ ರಾಜ್, ಸಂಚಾಲಕರು, ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ವೇದಿಕೆ
38) ಎನ್ ಗಾಯತ್ರಿ, ಲೇಖಕರು, ಮಹಿಳಾ ಚಳವಳಿಗಾರರು
39) ಡಾ. ಜಯಲಕ್ಷ್ಮಿ. ಸಮಕಾಲಿನ ಮಹಿಳಾ ವೇದಿಕೆ.
40) ಎನ್ ಎಸ್ ಶಂಕರ್, ಹಿರಿಯ ಪತ್ರಕರ್ತರು
41) ದು. ಸರಸ್ವತಿ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ
42) ಬಾನು ಮುಷ್ತಾಕ್, ವಕೀಲರು, ಬರಹಗಾರರು, ಹಾಸನ.
43) ರೂಪ ಹಾಸನ, ಲೇಖಕಿ ಹಾಸನ.
44) ಆರ್.ಪಿ. ವೆಂಕಟೇಶಮೂರ್ತಿ, ಹಿರಿಯ ಪತ್ರಕರ್ತರು, ಹಾಸನ.
45) ಎಚ್.ಕೆ. ಸಂದೇಶ್, ಹಿರಿಯ ದಲಿತ ಮುಖಂಡರು, ಹಾಸನ.
46) ಟಿ.ಆರ್. ವಿಜಯಕುಮಾರ್, ಜಿಲ್ಲಾಧ್ಯಕ್ಷರು ಮಾದಿಗ ದಂಡೋರ ಹಾಸನ ಜಿಲ್ಲೆ.
47) ಎಂ.ಬಿ. ಪುಷ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಐಟಿಯು ಹಾಸನ
48) ಎಚ್.ಆರ್. ನವೀನ್‌ಕುಮಾರ್, ಜಿಲ್ಲಾಧ್ಯಕ್ಷರು ಕೆಪಿಆರ್‌ಎಸ್ ಹಾಸನ
49) ಎಂ.ಜಿ. ಪೃಥ್ವಿ, ಜಿಲ್ಲಾ ಕಾರ್ಯದರ್ಶಿ ಡಿವೈಎಫ಼್‌ಐ
50) ಮಾವಳ್ಳಿ ಶಂಕರ್ , ದಲಿತ ಸಂಘರ್ಷ ಸಮಿತಿ ಮುಖಂಡರು
51) ಗುರುಪ್ರಸಾದ್ ಕೆರಗೋಡು, ದಲಿತ ಸಂಘರ್ಷ ಸಮಿತಿ
52) ಜಿ ಸಿ ಬಯ್ಯಾರೆಡ್ಡಿ ರೈತ ಸಂಘ
53) ವರಲಕ್ಷ್ಮಿ, ರಾಜ್ಯ ಅಧ್ಯಕ್ಷೆ, ಸಿಐಟಿಯು
54) ಸುನಂದ ಜಯರಾಂ ರೈತ ಸಂಘ
55) ನಿರ್ಮಲಾ ಎಂ, ಎಐಪಿಡಬ್ಲ್ಯುಎ ರಾಜ್ಯ ಅಧ್ಯಕ್ಷರು
56) ಕ್ಲಿಫ್ಟನ್ ಡಿ’ ರೊಜಾರಿಯೊ, ಎಐಸಿಸಿಟಿಯು ರಾಜ್ಯ ಅಧ್ಯಕ್ಷರು
57) ಮೈತ್ರೇಯಿ. ಕೆ, ಅಧ್ಯಕ್ಷರು ಎಐಎಲ್‌ಜೆ AILAJ
58) ಸುಶೀಲಾ, ಜನವಾದಿ ಮಹಿಳಾ ಸಂಘಟನೆ
59) ಲತಾ, ಜನವಾದಿ ಮಹಿಳಾ ಸಂಘಟನೆ
60) ಶೋಭ ಮಂಡ್ಯ ಜನವಾದಿ ಮಹಿಖಾ ಸಂಘಟನೆ
61) ಚಂದ್ರಕುಮಾರಿ ಬಳ್ಳಾರಿ, ಜನವಾದಿ ಮಹಿಳಾ ಸಂಘಟನೆ
62) ಇಸಾ ಬೇಗಂ ಬೀದರ್, ಜನವಾದಿ ಮಹಿಳಾ ಸಂಘಟನೆ
63) ಗೀತಾ ಕೋಲಾರ, ಜನವಾದಿ ಮಹಿಳಾ ಸಂಘಟನೆ
64) ಜಯಂತಿ ಶೆಟ್ಟಿ ಜನವಾದಿ ಮಹಿಳಾ ಸಂಘಟನೆ
65) ಪ್ರಮೀಳಾ ಮಂಗಳೂರು, ಜನವಾದಿ ಮಹಿಳಾ ಸಂಘಟನೆ
66) ಶೀಲಾವತಿ, ಜನವಾದಿ ಮಹಿಳಾ ಸಂಘಟನೆ
67) ಸರೋಜ ಉಡುಪಿ , ಜನವಾದಿ ಮಹಿಳಾ ಸಂಘಟನೆ
68) ಅನಸೂಯ ಜನವಾದಿ ಮಹಿಳಾ ಸಂಘಟನೆ
69) ,ಸುರೇಖಾ ಬಿಜಾಪುರ,
70) ವರಲಕ್ಷ್ಮಿ.
71) ಶಕುಂತಲಾ ರಾಯಚೂರು ,
72) ಪದ್ಮಿನಿ ಕಲಬುರಗಿ .
73) ಬಸಮ್ಮ,
74) ಲಲಿತ ,
75) ಪಾರ್ವತಿ
76) ಗೀತಾ ಬೆಂಗಳೂರು
77) ಪ್ರೊ. ಕೆ. ಕಾಳಚನ್ನೇಗೌಡ,
78) ಡಾ. ರತಿ ರಾವ್, ಸಮತಾ ಅಧ್ಯಯನ ಕೇಂದ್ರ, ಮೈಸೂರು
79) ಕೆ.ಆರ್.ಸುಮತಿ. ರಂಗಕರ್ಮಿ
80) ಆರ್.ಲಕ್ಷಣ, ಮೈಸೂರು
81) ಸವಿತಾ ಪ .ಮಲ್ಲೇಶ್, ಮೈಸೂರು
82) ಕೆ ಆರ್ ಸೌಮ್ಯಾ ಬೆಂಗಳೂರು
83) ಗುಂಡಣ್ಣ ಚಿಕ್ಕಮಗಳೂರು
84) ಶ್ರೀನಿವಾಸ ಕಾರ್ಕಳ, ಬರಹಗಾರರು, ಮಂಗಳೂರು
85) ಹುಲಿಕುಂಟೆ ಮೂರ್ತಿ, ಉಪನ್ಯಾಸಕರು
86) ಲೇಖಾ ಅಡವಿ, AISA ರಾಜ್ಯ ಸಂಚಾಲಕರು
87) ನಾವೆದ್ದು ನಿಲ್ಲದಿದ್ದರೆ
88) ಬಸವಲಿಂಗಯ್ಯ, ರಂಗಕರ್ಮಿ, ಮೈಸೂರು
89) ಮಂಜುಳಾ ಹುಲಿಕುಂಟೆ
90) ಲಿಂಗರಾಜು ಮಳವಳ್ಳಿ, ಚಳವಳಿಗಾರರು
91) ಲತಾ ಮಾಲ, ಲೇಖಕರು
92) ಬಸೂ, ಲಡಾಯಿ ಪ್ರಕಾಶನ, ಧಾರವಾಡ
93) ಸಿ ಎಚ್ ಭಾಗ್ಯ, ಲೇಖಕರು
94) ಕೊಟ್ರೇಶ್ ಕೊಟ್ಟೂರು
95) ಕೃಷ್ಣೇಗೌಡ ಟಿ. ಲಿಂಗಯ್ಯ, ಮಂಡ್ಯ
96) ಮಾಧವಿ ಭಂಡಾರಿ, ಲೇಖಕರು, ಶಿರಸಿ
97) ರೇಣುಕಾ, ರಾಜ್ಯ ಕಾರ್ಯದರ್ಶಿ, ಎನ್‌ಎಫ್‌ಐಡಬ್ಲ್ಯು
98) ದಿವ್ಯಾ ಎಸ್ ಬಿರಾದಾರ್, ಎನ್‌ಎಫ್‌ಐಡಬ್ಲ್ಯು
99) ಎನ್ ಮಂಗಳಾ, ರಂಗಕರ್ಮಿ
100) ಜನ್ನಿ, ರಂಗಕರ್ಮಿ, ಮೈಸೂರು
101) ಮಮತಾ ಸಾಗರ್, ಲೇಖಕರು
102) ಡಾ. ಟಿ ಎಚ್ ಲವಕುಮಾರ್, ಉಪನ್ಯಾಸಕರು
103) ಕೆ. ಎಸ್. ಗಿರಿಜಾ, ಉಪನ್ಯಾಸಕರು, ತುಮಕೂರು
104) ದೇವಿಕಾ ಶೆಟ್ಟಿ, ಕರಾವಳಿ ಲೇಖಕಿಯರ ಸಂಘ, ಮಂಗಳೂರು
105) ಅತ್ರಾಡಿ ಅಮೃತಾ ಶೆಟ್ಟಿ, ಲೇಖಕರು, ಚಳವಳಿಗಾರರು
106) ಆರ್ ಚಲಪತಿ, ಬರಹಗಾರರು
107) ಕೆ. ವಿ ನೇತ್ರಾವತಿ
108) ಬಾ ಹ ರಮಾಕುಮಾರಿ
109) ಮೈತ್ರಿ ಬೆಂಗಳೂರು
110) ಕೆ. ವೈ . ನಾರಾಯಣಸ್ವಾಮಿ, ಬೆಂಗಳೂರು
111) ಕೋದಂಡರಾಮ, ಕಲಬುರ್ಗಿ
112) ಮಂಜುಳಾ ತೆಳಗಡೆ
113) ಬೊಳುವಾರು ಮಹಮದ್ ಕುಂಞ
114) ಕೇಶವಶರ್ಮ, ಚಿಂತಕರು, ಬರಹಗಾರರು
115) ಗಿರಿಧರ ಕಾರ್ಕಳ, ಮೈಸೂರು.

 1. ದಿನೇಶ್ ಕುಕ್ಕುಜಡ್ಕ, ಕಾರ್ಟೂನಿಸ್ಟ್, ಸುಳ್ಯ.

#Siddaramaiah #ChiefMinisterofKarnataka

More News

You cannot copy content of this page