ಬೆಂಗಳೂರು: ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಇಂದು ಭಾರತಕ್ಕೆ ಮರಳಲಿದ್ದಾರೆ ಎಂಬ ನಂಬಿಕೆ ಹುಸಿಯಾಗಿದೆ. ಬೆಳಿಗ್ಗೆ ಟಿಕೆಟ್ ರದ್ದುಪಡಿಸಿದ್ದ ಪ್ರಜ್ವಲ್ ರೇವಣ್ಣ ಬಳಿಕ ಮತ್ತೆ ಟಿಕೆಟ್ ಬುಕ್ ಮಾಡಿದ್ದರು.
ಭಾರತೀಯ ಕಾಲಮಾನ ಮಧ್ಯಾಹ್ನ 2ಗಂಟೆಗೆ ಜರ್ಮನಿಯ ಮ್ಯೂನಿಕ್‌ನಿಂದ ಪ್ರಜ್ವಲ್ ರೇವಣ್ಣ ಪ್ರಯಾಣ ಬೆಳಸಲಿದ್ದಾರೆ ಎಂದು ವರದಿಯಾಗಿತ್ತು. ಅಂತಿಮ ಕ್ಷಣದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಪ್ರಯಾಣ ರದ್ದುಪಡಿಸಿದ್ದಾರೆ. ಇದಕ್ಕೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.
ವಿಮಾನದ ಪ್ರಯಾಣಿಕರ ಲಿಸ್ಟ್ ನಲ್ಲಿ ಪ್ರಜ್ವಲ್ ರೇವಣ್ಣ ಹೆಸರು ಕಂಡು ಬಂದಿಲ್ಲ. ಪ್ರಜ್ವಲ್ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿರುವಎಸ್ಐಟಿ ತಂಡ ಇದೀಗ ಮುಂದಿನ ಬೆಳವಣಿಗೆಯತ್ತ ಗಮನ ಹರಿಸಿದೆ.
ಪ್ರಜ್ವಲ್ ರೇವಣ್ಣ ವಿಮಾನಟಿಕೆಟ್ ಬುಕ್ ಮಾಡಲು ಕಾರ್ಡ್ ಬಳಸದೆ ಹಣ ಪಾವತಿ ಮಾಡಿದ್ದಾರೆ ಎಂದು ವರಿದಿಯಾಗಿದೆ. ಯಾಕಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.
ಪ್ರಜ್ವಲ್ ಬಂಧನಕ್ಕೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ವಿದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಅಂತಹ ಬೆಳವಣಿಗೆ ಇದುವರೆಗೆ ಸಂಭವಿಸಿಲ್ಲ.
ಕಳೆದ 18 ದಿನಗಳಿಂದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಮಧ್ಯೆ ತಂದೆ ರೇವಣ್ಣ ಜೈಲುಪಾಲಾಗಿ, ಇದೀಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ರೇವಣ್ಣ ಟೆಂಪಲ್ ರನ್ ನಿರತರಾಗಿದ್ದಾರೆ.
ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡಿರುವ ವಿಚಾರ ಜೆಡಿಎಸ್ ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಪ್ರಜ್ವಲ್ ವಿದೇಶದಿಂದ ಬಂದ ಬಳಿಕ ಪೆನ್ ಡ್ರೈವ್ ಪ್ರಕರಣದ ತನಿಖೆ ನಿರ್ಣಾಯಕ ಹಂತ ತಲುಪುವ ಸಾಧ್ಯತೆ ಇದೆ.
ಈ ಬೆಳವಣಿಗೆಗಳ ಮಧ್ಯೆ ಪ್ರಜ್ವಲ್ ರೇವಣ್ಣ ತಮ್ಮ ವಕೀಲರ ಜೊತೆ ಕಾನೂನು ಸಮಾಲೋಚನೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಹೊರಬಿದಿಲ್ಲ.