ಬೆಂಗಳೂರು: ಪ್ರಜ್ವಲ್ ರೇವಣ್ಣ ವಿರುದ್ಧ ಗಂಭೀರ ಆರೋಪ ಕೇಳಿ ಬಂದ ಬಳಿಕ ಸರ್ಕಾರದ ತನಿಖಾ ಕಾರ್ಯ ವೈಖರಿ ಕುರಿತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಆರ್. ಅಶೋಕ್. ಒಕ್ಕಲಿಗ ನಾಯಕತ್ವ ತಿರುಗಿ ಬೀಳುವ ಆತಂಕ ಕಾಂಗ್ರೆಸ್‌ನ್ನು ಕಾಡುತ್ತಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹತಾಶೆಗೊಂಡಿರುವ ಕಾಂಗ್ರೆಸ್ ಬಿಜೆಪಿ ವಿರುದ್ದ ಆಧಾರರಹಿತ ಆರೋಪ ಹೊರಿಸುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಕೂಡ ಇದೇ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.
ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ಪೆನ್‌ಡ್ರೈವ್ ಹಂಚಿದವರೇ ಕಾಂಗ್ರೆಸ್ ನವರು. ಇದರಲ್ಲಿ ಎರಡು ಮಾತಿಲ್ಲ ಈಗ ತಮ್ಮ ವಿರುದ್ಧದ ಆಪಾದನೆಯನ್ನು ಬಿಜೆಪಿ ಕಡೆ ತಿರುಗಿಸ್ತಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಎಸ್ಐಟಿ ಮೂಲಕ ನಮ್ಮ ಕಡೆ ತನಿಖೆ ತಿರುಗಿಸುವ ಯತ್ನವಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಪಕ್ಷಪಾತಿ ಧೋರಣೆ ತೋರಿಸ್ತಿದ್ದಾರೆ ಎಂದು ಅಶೋಕ್ ಬೆಂಗಳೂರಿನಲ್ಲಿ ಆರೋಪಿಸಿದ್ದಾರೆ.
ಇದರ ಹಿಂದೆ ದೊಡ್ಡ ತಿಮಿಂಗಿಲ ಇದೆ ಅಂತ ಹೆಚ್ಡಿಕೆ ಆರೋಪ ಮಾಡಿದ್ದಾರೆ .ಎಲ್ಲೋ ಒಂದು ಕಡೆ ಇದನ್ನ ಬಿಜೆಪಿ ಕಡೆ ತಿರುಗಿಸಲು ಸಂಚು ನಡೆದಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಮಾಹಿತಿ ಸೋರಿಕೆ ಆರೋಪ
ರಾಜ್ಯದಲ್ಲಿ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯ ಎಲ್ಲ ಮಾಹಿತಿ ಸೋರಿಕೆಯಾಗುತ್ತಿದೆ. ತನಿಖೆಯ ಪ್ರತಿ ಹಂತದ ಮಾಹಿತಿ ಕಾಂಗ್ರೆಸ್ ಕೈ ಸೇರುತ್ತಿದೆ. ಇದಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಪ್ರಕರಣದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕಾದರೆ ಸಿಬಿಐಗೆ ತನಿಖೆ ವಹಿಸಲಿ ಎಂದು ಅಶೋಕ್ ಆಗ್ರಹಿಸಿದ್ದಾರೆ.
ಹಾಸನದಲ್ಲಿ ಕೇವಲ ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಬಂಧಿಸಲಾಗಿದೆ. ವಿಡಿಯೋ ಇದೆ ಎಂಬ ಆರೋಪ ಹೊರಿಸಲಾಗಿದೆ. ಹಾಸನ ಕಾಂಗ್ರೆಸ್ ಕಾರ್ಯಕರ್ತರ ಬಳಿಯೂ ವಿಡಿಯೋ ಮತ್ತು ಪೆನ್‌ಡ್ರೈವ್ ಇದೆ .ಕಾಂಗ್ರೆಸ್ ಕಾರ್ಯಕರ್ತರ ಮೊಬೈಲ್ ಗಳನ್ನೂ ಚೆಕ್ ಮಾಡಲಿ. ಯಾಕೆ ಕಾಂಗ್ರೆಸ್ ಕಾರ್ಯಕರ್ತರ ವಿಚಾರಣೆ ಮಾಡಿಲ್ಲ. ಇದೆಲ್ಲ ದೊಡ್ಡ ಪ್ರೀಪ್ಲಾನ್ ಮಾಡಿಯೇ ಕಾಂಗ್ರೆಸ್ ಮಾಡುತ್ತಿದೆ ಎಂದು ಅಶೋಕ್ ಆರೋಪಿಸಿದ್ದಾರೆ. ದೇವೇಗೌಡರ ಕುಟುಂಬ ಕುರಿತು ಡಿಸಿಎಂ ಶಿವಕುಮಾರ್ ಅವರ ಅನುಕುಂಪದ ಮಾತುಗಳನ್ನು ಅಶೋಕ್ ಲೇವಡಿ ಮಾಡಿದ್ದಾರೆ. ಡಿಕೆಶಿ ಕಿಂಡಲ್ ಮಾಡುತ್ತಿದ್ದಾರೆ ಎಂದು ಅಶೋಕ್ ಕುಟುಕಿದ್ದಾರೆ.
ಪ್ರಕರಣದಲ್ಲಿ ದೊಡ್ಡ ತಿಮಿಂಗಿಲದ ಪಾತ್ರದ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಮಾತನ್ನಾಡಿದ್ದಾರೆ. ಇದರ ಬಗ್ಗೆ ತನಿಖೆಯಾಗಲಿ ಎಂದು ಅಶೋಕ್ ಆಗ್ರಹಿದ್ದಾರೆ.
ಸರಕಾರ ಪತನ ಹೇಳಿಕೆ
ಸರ್ಕಾರ ಪತನ ಕುರಿತಂತೆ ರಾಜ್ಯ ಬಿಜೆಪಿ ಭ್ರಮೆಯಲ್ಲಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಅಶೋಕ್ ವ್ಯಂಗ್ಯವಾಡಿದ್ದಾರೆ. ಮಹಾರಾಷ್ಟ್ದಲ್ಲಿ ಕೂಡ ಮೈತ್ರಿ ಸರ್ಕಾರ ಸುಭದ್ರವಾಗಿತ್ತು. 70ಕ್ಕೂ ಹೆಚ್ಚು ಶಾಸಕರು ಪಕ್ಷಾಂತರ ಮಾಡಿರಲಿಲ್ಲವೇ ಎಂದು ತಿರುಗೇಟು ನೀಡಿದ್ದಾರೆ. ಸರ್ಕಾರ ಉರುಳಿಸುವ ಯತ್ನಕ್ಕೆ ಬಿಜೆಪಿ ಕೈ ಹಾಕದು. ಸರ್ಕಾರ ಒಳಜಗಳದಿಂದ ಬಿದ್ದರೆ ಅದಕ್ಕೆ ಹೊಣೆಯಲ್ಲ ಎಂದು ಅಶೋಕ್ ಹೇಳಿದ್ದಾರೆ. ಈ ಹಿಂದೆ ಯಾವುದೇ ಶಾಸಕರು ರಾಜೀನಾಮೆ ನೀಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. 17 ಶಾಸಕರು ಪಕ್ಷಾಂತರ ಮಾಡಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಪೆನ್ ಡ್ರೈವ್ ರಾಜಕೀಯ ಹೋರಾಟ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಬಿಜೆಪಿ ಕಾಂಗ್ರೆಸ್ ಮಧ್ಯೆ ರಾಜಕೀಯ ಟಾಕ್ ವಾರ್ ತೀವ್ರಗೊಂಡಿದೆ.