ಬೆಂಗಳೂರು: ನಗರದ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ವಿದ್ಯಾರ್ಥಿನಿ ಪ್ರಭುದ್ಯಾ ನಿಗೂಢ ಸಾವಿಗೆ ಸಂಬಂಧಿಸಿದಂತೆ ಮೃತಳ ತಾಯಿ ಸೌಮ್ಯ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮಗಳನ್ನು ಕೊಲೆ ಮಾಡಲಾಗಿದೆ. ಮೊಬೈಲ್ ನಾಪತ್ತೆಯಾಗಿದೆ. ಮನೆಯ ಹಿಂದಿನ ಬಾಗಿಲು ಓಪನ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪುತ್ರಿ ಪ್ರಭುದ್ಯಾ ಧೈರ್ಯವಂತೆ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದರೂ ಪೋನ್ ಮಾಡಿ ಮಾಹಿತಿ ನೀಡುತ್ತಿದ್ದರು. ನಿನ್ನೆ ಪಾನ್ ಪುರಿ ತಿನ್ನಲು ಹೋಗುತ್ತಿರುವುದಾಗಿ ಪೋನ್ ಮಾಡಿದ್ದಳು. ನಾನು ಕೆಲಸಕ್ಕೆ ಹೋಗಿದ್ದೆ. ಮಗ ಜಿಮ್‌ಗೆ ಹೋಗಿದ್ದ. ಮನೆಯಲ್ಲಿ ಮಗಳು ಮಾತ್ರ ಇದ್ದಳು. ಈ ವೇಳೆ ಮಗಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ತಾಯಿ ಸೌಮ್ಯ ಆರೋಪಿಸಿದ್ದಾರೆ.
ಇದೀಗ ತಾಯಿ ಸೌಮ್ಯ ಗಂಭೀರ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಪ್ರಭುದ್ಯಾ ಕಲಿಯುತ್ತಿದ್ದ ಶಿಕ್ಷಣ ಸಂಸ್ಥೆ ಹಾಗೂ ಆಪ್ತ ಗೆಳತಿಯರ ಬಳಿ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ತುಂಬ ಕ್ರೂರವಾಗಿ ಹಿಂಸೆ ನೀಡಿ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ತಾಯಿ ಸೌಮ್ಯ ಮಾಧ್ಯಮ ಪ್ರತಿನಿಧಿಗಳ ಮುಂದೆ ಇಂದು ಗೋಳಾಡುತ್ತಿರುವ ದೃಶ್ಯ ಎಂತಹವರನ್ನು ಮನಕರಗಿಸುವಂತಿತ್ತು.
ಇದೀಗ ಪೊಲೀಸರು ಪ್ರಕರಣದ ಸಮಗ್ರ ತನಿಖೆಗೆ ಮುಂದಾಗಿದ್ದಾರೆ.
ಯುವಕನ ಭೀಕರ ಹತ್ಯೆ
ಇನ್ನೊಂದೆಡೆ ದಾವಣಗೆರೆ ತಾಲೂಕಿನ ಓಬಜ್ಜಿಹಳ್ಳಿಯಲ್ಲಿ ಯುವಕನ ಭೀಕರ ಹತ್ಯೆಮಾಡಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನ ಹತ್ಯೆ ಮಾಡಲಾಗಿದೆ. ಮೃತದೇಹವನ್ನು ದುಷ್ಕರ್ಮಿಗಳು ಬಿಸಾಡಿ ಹೋಗಿದ್ದಾರೆ. ದಾವಣಗೆರೆ ಮೂಲದ ಸುದೀಪ್ (24) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪರಿಚಯದವರು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.