ಹುಬ್ಬಳ್ಳಿ: ರಾಜಕೀಯಕ್ಕಾಗಿ ನೇಹಾ ಕೊಲೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ರಾಜಕಾರಣಿಗಳು ಈಗ ಎಲ್ಲಿ ಹೋಗಿದ್ದಾರೆ. ಅಂಜಲಿ ಕುಟುಂಬಕ್ಕೆ ನ್ಯಾಯ ಕೊಡಿಸುವಲ್ಲಿ ರಾಜ್ಯದ ನಾಯಕರು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಮೃತಳಾದ ಅಂಜಲಿ ಅಂಬಿಗೇರ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಪೊಲೀಸರ ವೈಫಲ್ಯ ನಿಜಕ್ಕೂ ಈ ಒಂದು ಕೊಲೆಗೆ ಕಾರಣವಾಗಿದೆ. ಓದಲು ಹೋಗುವ ಯುವತಿ ಪೊಲೀಸ್ ಠಾಣೆಗೆ ಹೋಗಿ ದೂರನ್ನು ನೀಡಿದರೂ ನಿರ್ಲಕ್ಷ್ಯ ಮಾಡಿರುವುದು ನಿಜಕ್ಕೂ ಖಂಡನೀಯವಾಗಿದೆ ಎಂದರು.
ಚುನಾವಣೆಗಾಗಿ ನೇಹಾ ಕೊಲೆಯನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ರಾಜಕೀಯ ನಾಯಕರು ಈಗ ಇಂತಹ ಬಡ ಕುಟುಂಬದ ನೆರವಿಗೆ ಬಾರದೇ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಬಗ್ಗೆ ರಾಜ್ಯ ನಾಯಕರು ಪ್ರಾಮಾಣಿಕ ಪ್ರಯತ್ನದ ಮೂಲಕ ಅಂಜಲಿ ಸಾವಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಮಾಡಬೇಕು. ಈ ನಿಟ್ಟಿನಲ್ಲಿ ನಾಳೆ ದೊಡ್ಡಮಟ್ಟದ ಪ್ರತಿಭಟನೆ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಇನ್ನೂ ಮೃತ ಅಂಜಲಿ ಕುಟುಂಬದ ಜೊತೆಗೆ ನಾವಿದ್ದೇವೆ. ಈ ಇಬ್ಬರೂ ಯುವತಿಯರ ಸಂಪೂರ್ಣ ಓದಿನ ಜವಾಬ್ದಾರಿಯನ್ನು ಬಾಲೆಹೊಸೂರು ಹಾಗೂ ಶಿರಹಟ್ಟಿ ಸಂಸ್ಥಾನ ಮಠಗಳು ಹೊರಲಿವೆ. ಅಲ್ಲದೇ ಈ ಇಬ್ಬರೂ ಯುವತಿಯರ ಭವಿಷ್ಯದ ಹಿತದೃಷ್ಟಿಯಿಂದ ದತ್ತು ಪಡೆಯುತ್ತೇವೆ ಎಂದು ಅವರು ಭರವಸೆ ನೀಡಿದರು.