Search

HD KUMARASWAMY: ಸಿಎಂ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಬಹಿರಂಗ ಸವಾಲು, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವ ಸಾಮರ್ಥ್ಯ ಇದೆಯೇ ಎಂದು ಪ್ರಶ್ನೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಮಾಹಿತಿ ಇರುವ ಪೆನ್ ಡ್ರೈವ್ ನನ್ನ ಬಳಿ ಇದೆ. ಅದರ ಸಮಗ್ರ ಮಾಹಿತಿ ಬಹಿರಂಗಪಡಿಸಲು ನಾನು ಸಿದ್ಧನಿದ್ದೇನೆ. ಆದರೆ ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವ ಶಕ್ತಿ ನಿಮ್ಮಗೆ ಇದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನಾನು ಹಿಟ್ ಆ್ಯಂಡ್ ರನ್ ಮಾಡುವ ರಾಜಕಾರಣಿಯಲ್ಲ. ಪ್ರತಿಯೊಂದು ವಿಷಯಕ್ಕೂ ದಾಖಲೆ ಸಮೇತ ಮಾತನಾಡುತ್ತೇನೆ. ದಾಖಲೆ ಇಲ್ಲದೆ ನಾನು ಯಾವುದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಕೂಡ ನಾನು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಹಲವು ಸಾಕ್ಷ್ಯ ನೀಡಿದ್ದೆ. ಆದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಹೆಚ್‌ಡಿಕೆ ಪೆನ್ ಡ್ರೈವ್ ವಿವಾದ
ರಾಜ್ಯ ರಾಜಕಾರಣದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪೆನ್ ಡ್ರೈವ್ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದಾರೆ. ಹಲವು ಬಾರಿ ಪೆನ್ ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಈ ಹಿಂದೆ ಸವಾಲು ಹಾಕಿದ್ದರು. ಅಂತಿಮ ಕ್ಷಣದಲ್ಲಿ ಪೆನ್ ಡ್ರೈವ್ ಬಿಡುಗಡೆ ಮಾಡದೆ ಸುಮ್ಮನಾಗಿದ್ದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ಿ ಬೆಳಕಿಗೆ ಬಂದಾಗ ಕುಮಾರಸ್ವಾಮಿ ಬಳಿ ಇದ್ದದ್ದು ಇದೇ ಪೆನ್ ಡ್ರೈವಾ ಅಂತಾ ಕಾಂಗ್ರೆಸ್ ಸಾಮಾಜಿಕ ಜಾಲ ತಾಣದಲ್ಲಿ ಕುಮಾರಸ್ವಾಮಿ ಅವರನ್ನು ಲೇವಡಿಮಾಡಿತ್ತು.
ಇದಕ್ಕೆ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ಇಂತಹ ಸಂಸ್ಕೃತಿಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದರು.

ಪ್ರಜ್ವಲ್ ಎಲ್ಲಿದ್ದಾನೆ ಮಾಹಿತಿ ಇಲ್ಲ
ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದೇಶಕ್ಕೆ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಎಂಬ ಬಗ್ಗೆ ನನ್ನ ಬಳಿ ಮಾಹಿತಿ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಪ್ರಜ್ವಲ್ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯದಲ್ಲಿ ಎಸ್ಐಟಿ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರೇವಣ್ಣ ಟೆಂಪಲ್ ರನ್
ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಹಾಗೂ ಶಾಸಕ ಹೆಚ್ ಡಿ ರೇವಣ್ಣ ಇಂದು ಕೂಡ ಟೆಂಪಲ್ ರನ್ ಮುಂದುವರಿಸಿದ್ದಾರೆ. ಶಂಕರಮಠ, ಗವಿ ಗಂಗಾಧರೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಿಗೆ ರೇವಣ್ಣ ಭೇಟಿ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಜೊತೆ ಹಂಚಿಕೊಳ್ಳಲು ಯಾವುದೇ ಮಾಹಿತಿ ಇಲ್ಲ. ದಯವಿಟ್ಟು ನನಗೆ ಹಿಂಸೆ ನೀಡಬೇಡಿ ಎಂದು ರೇವಣ್ಣ ಮನವಿ ಮಾಡಿದ್ದಾರೆ. ಇದೇ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಕೋರಿ ರೇವಣ್ಣ ಸಲ್ಲಿಸಿದ ಅರ್ಜಿ ವಿಚಾರಣೆ ಕೂಡ ಇಂದು ನಡೆಯುತ್ತಿದ್ದು, ರೇವಣ್ಣ ಕೋರ್ಟ್‌ಗೆ ಹಾಜರಾಗಿದ್ದಾರೆ.
ದೇವೇಗೌಡ ಮನವಿ
ಈ ಬೆಳವಣಿಗೆ ಮಧ್ಯೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳದಿರಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತೀರ್ಮಾನಿಸಿದ್ದಾರೆ. ಮೇ 18 ನನ್ನ ಹುಟ್ಟು ಹಬ್ಬವಾಗಿದೆ. ಈ ಬಾರಿ ವೈಯಕ್ತಿಕ ಕಾರಣಗಳಿಂದ ಹುಟ್ಟು ಹಬ್ಬ ಆಚರಿಸುತ್ತಿಲ್ಲ. ಕಾರ್ಯಕರ್ತರು ಇದನ್ನು ಪರಿಗಣಿಸಬೇಕು ಎಂದು ದೇವೇಗೌಡ ಮನವಿ ಮಾಡಿದ್ದಾರೆ. ದೇವೇಗೌಡ ಅವರು ಮೇ 18ರಂದು 92ನೇ ಹರೆಯಕ್ಕೆ ಕಾಲಿರಿಸಲಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ದೇವೇಗೌಡ ಅವರು ಬಹಿರಂಗ ಪತ್ರ ಬರೆದಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಪ್ರಯತ್ನಿಸಿ ದೇವೇಗೌಡ ಮನವಿ ಮಾಡಿದ್ದಾರೆ.

More News

You cannot copy content of this page