Search

HD REVANNA CASE: ಮಾಜಿ ಸಚಿವ, ಶಾಸಕ ಹೆಚ್ ಡಿ ರೇವಣ್ಣಗೆ ತಾತ್ಕಲಿಕ ರಿಲೀಫ್, ನಾಳೆ ಮಧ್ಯಾಹ್ನದ ತನಕ ಜಾಮೀನು

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕೇಸ್‌ನಲ್ಲಿ ಮಾಜಿ ಸಚಿವ ಹಾಗೂ ಶಾಸಕ ಹೆಚ್ ಡಿ ರೇವಣ್ಣಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. ರೇವಣ್ಣಗೆ ನಾಳೆ ಮಧ್ಯಾಹ್ನದ ತನಕ ಜಾಮೀನು ದೊರೆತಿದೆ. ಇಂದು ದಿನವಿಡಿ ನಡೆದ ಸುದೀರ್ಘ ವಾದ ವಿವಾದದ ಬಳಿಕ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ವಾದ ಪ್ರತಿವಾದದ ವೇಳೆ ರೇವಣ್ಣ ಜಾಮೀನಿಗೆ ವಿಶೇಷ ತನಿಖಾ ದಳದ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಬೆಳಿಗ್ಗೆ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದ ರೇವಣ್ಣ ಮಧ್ಯಾಹ್ನದ ವಿಚಾರಣೆಗೆ ಆರಂಭದಲ್ಲಿ ಬಂದಿರಲಿಲ್ಲ. ಬಳಿಕ ನ್ಯಾಯಾಧೀಶರ ಸೂಚನೆಯಂತೆ ವಕೀಲರು ರೇವಣ್ಣ ಅವರನ್ನು ಕೋರ್ಟ್‌ಗೆ ಕರೆಯಿಸಿದರು.
ರೇವಣ್ಣ ವಿರುದ್ದ ಜಾಮೀನಿಗೆ ಅವಕಾಶ ಇರುವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ. ಇದನ್ನು ಪರಿಗಣಿಸಿ ಜಾಮೀನು ಮಂಜೂರು ಮಾಡಬೇಕು ಎಂದು ರೇವಣ್ಣ ಪರ ವಕೀಲರು ಕೋರ್ಟ್ ನಲ್ಲಿ ವಾದ ಮಂಡಿಸಿದರು.. ನ್ಯಾಯಾಧೀಶರ ಸೂಚನೆಯಂತೆ ಮಧ್ಯಾಹ್ನ ಕೋರ್ಟ್‌ಗೆ ಹಾಜರಾದ ರೇವಣ್ಣ ಚಪ್ಪಲಿ ಧರಿಸದೆ ಬಂದಿದ್ದು ವಿಶೇಷವಾಗಿತ್ತು.
ವಾದ ವಿವಾದದ ಬಳಿಕ ವಿಚಾರಣೆಯನ್ನು ಮಧ್ಯಾಹ್ನ 3ಕ್ಕೆ ಮುಂದೂಡಲಾಗಿತ್ತು. ಮಧ್ಯಾಹ್ನದ ಬಳಿಕ ಕೋರ್ಟ್‌ ನಲ್ಲಿ ವಾದ ಮತ್ತೆ ಆರಂಭವಾಯಿತು. ಸರ್ಕಾರದ ಪರವಾಗಿ ಜಾಯ್ನಾ ಕೊಠಾರಿ ವಾದ ಮಂಡಿಸಿದರು. ರೇವಣ್ಣ ಪರ ವಕೀಲ ಅರುಣ್ ವಾದ ಮಂಡಿಸಿದರು. ಬಳಿಕ 5.30ರ ಹೊತ್ತಿಗೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದರು ನಾಳೆ ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ ಆರಂಭವಾಗಲಿದೆ. ಅಲ್ಲಿಯ ತನಕ ಜಾಮೀನು ಇರಲಿದೆ ಎಂದು ಆದೇಶ ನೀಡಿದರು. ಐದು ಲಕ್ಷ ರೂ ಬಾಂಡ್, ಒಬ್ಬರ ಶ್ಯೂರಿಟಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಕೇಸ್ ವಿಚಾರಣೆ ಇದಾಗಿದ್ದು, ನಾಳೆ ನ್ಯಾಯಾಲಯ ಪೂರ್ಣ ಪ್ರಮಾಣದ ಜಾಮೀನು ಕುರಿತಂತೆ ತೀರ್ಪು ನೀಡುವ ಸಾಧ್ಯತೆ ಇದೆ.
ರೇವಣ್ಣ ಮನೆಯಲ್ಲಿ ಮಹಜರು

ಈ ಬೆಳವಣಿಗೆ ಮಧ್ಯೆ ಬಸವನಗುಡಿಯಲ್ಲಿರುವ ರೇವಣ್ಣ ಮನೆಯಲ್ಲಿ ವಿಶೇಷ ತನಿಖಾ ದಳ ಮಹಜರು ನಡೆಸಿದೆ. ಒಂದು ಗಂಟೆ ರೇವಣ್ಣ ಮನೆಯಲ್ಲಿ ಮಹಜರು ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ರೇವಣ್ಣ ಜಾಮೀನು ಸಿಕ್ಕಿದ ಬಳಿಕ ಪದ್ಮನಾಭನಗರದಲ್ಲಿರುವ ದೇವೇಗೌಡರ ಮನೆಯಲ್ಲಿ ವಾಸಿಸುತ್ತಿದ್ದಾರೆ. ಭವಾನಿ ರೇವಣ್ಣ ಇದುವರೆಗೆ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಇದೇ ವೇಳೆ ಅಪಹರಣ ಪ್ರಕರಣದ ಆರೋಪಿ ಸತೀಶ್ ಬಾಬುನನ್ನು ಎಸ್ಐಟಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪೆನ್ ಡ್ರೈವ್ ಹಗರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದ ವಕೀಲ ದೇವರಾಜೇಗೌಡನ ಪೊಲೀಸ್ ಕಸ್ಟಡಿಯನ್ನು ಕೂಡ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ. ಈ ಬೆಳವಣಿಗೆ ಮಧ್ಯೆ ಪ್ರಜ್ವಲ್ ರೇವಣ್ಣ ಅವರ ವಿದೇಶ ಪ್ರವಾಸ ಇನ್ನೂ ಮುಂದುವರಿದಿದೆ.

More News

You cannot copy content of this page