Search

BELAGAVI TRAIN INCIDENT: ಚಲಿಸುತಿದ್ದ ರೈಲಿನಲ್ಲಿ ಚಾಕುವಿನಿಂದ ದಾಳಿ, ರೈಲ್ವೆ ಸಿಬ್ಬಂದಿ ಸಾವು

ಬೆಳಗಾವಿ: ಚಲಿಸುತ್ತಿದ್ದ ರೈಲಿನಲ್ಲಿ ಗುರುವಾರ ಪ್ರಯಾಣಿಕನೊಬ್ಬ ಚಾಕುವಿನಿಂದ ನಡೆಸಿದ ದಾಳಿಯಲ್ಲಿ ಒಬ್ಬ ರೈಲ್ವೆ ಸಿಬ್ಬಂದಿ ಮೃತಪಟ್ಟಿದ್ದು, ಟಿಟಿಇ ಸೇರಿ ಮೂವರು ಗಾಯಗೊಂಡಿದ್ದಾರೆ.

ಬೋಗಿ ಅಟೆಂಡರ್‌ ದೇವಋಷಿ ವರ್ಮಾ (23) ಮೃತಪಟ್ಟವರು. ಆರೋಪಿಯು ಹೃದಯಕ್ಕೇ ಚಾಕು ಇರಿದಿದ್ದರಿಂದ ವರ್ಮಾ ತೀವ್ರ ನಿತ್ರಾಣಗೊಂಡರು. ಬೆಳಗಾವಿ ಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಫಲಿಸದೆ ಕೊನೆಯುಸಿರೆಳೆದರು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಪುದುಚೆರಿ ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನ ಎಸ್‌-8 ಬೋಗಿಯಲ್ಲಿ ಘಟನೆ ನಡೆದಿದೆ. ರೈಲು ಧಾರವಾಡ ದಾಟಿ ಬೆಳಗಾವಿಯತ್ತ ಚಲಿಸುತ್ತಿತ್ತು. ಗುಂಜಿ- ಖಾನಾಪುರ ಮಧ್ಯದಲ್ಲಿ ಟಿಕೆಟ್ ಪರಿವೀಕ್ಷಕ (ಟಿಟಿಇ) ಅಶ್ರಫ್ ಕಿತ್ತೂರ ಅವರು ಟಿಕೆಟ್ ಚೆಕ್ ಮಾಡುತ್ತಿದ್ದರು. ಬೋಗಿಯಲ್ಲಿ ಮುಸುಕು ಧರಿಸಿ ಕುಳಿತಿದ್ದ ವ್ಯಕ್ತಿಯಿಂದ ಟಿಕೆಟ್ ಕೇಳಿದರು. ಅವರಿಗೆ ಟಿಕೆಟ್ ತೋರಿಸಲು ನಿರಾಕರಿಸಿದಾಗ ಮಾತಿಗೆ ಮಾತು ಬೆಳೆಯಿತು. ತನ್ನ ಬಳಿ ಇದ್ದ ಚಾಕು ತೆಗೆದ ಮುಸುಕುಧಾರಿ ಟಿಟಿಇ ಅವರ ಮೇಲೆ ಹಲ್ಲೆ ನಡೆಸಿದ. ಗಾಯಗೊಂಡ ಟಿಟಿಇ ರನ್ನು ರಕ್ಷಿಸಲು ಅಟೆಂಡರ್ ದೇವಋಷಿ
ದಾವಿಸಿದ್ದರು, ಆರೋಪಿ ಅವರ ಎದೆಗೂ ಚಾಕು ಇರಿದ. ಜಗಳ ಬಿಡಿಸಲು ಬಂದ ಇನ್ನಿಬ್ಬರು ಸಿಬ್ಬಂದಿ ಮೇಲೂ ಚಾಕುವಿನಿಂದ ದಾಳಿ ನಡೆಸಿದ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ರೈಲು ಸಂಜೆ 5ರ ಸುಮಾರಿಗೆ ಬೆಳಗಾವಿ ನಿಲ್ದಾಣ ತಲುಪಿತು. ಗಾಯಗೊಂಡ ನಾಲ್ವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ರಕ್ತಸ್ರಾವವಾಗಿದ್ದರಿಂದ ದೇವಋಷಿ ಅಸುನೀಗಿದರು. ಟಿಟಿಇ ಸೇರಿ ಮೂವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಆರೋಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು
ಪರಾರಿಯಾಗಿದ್ದಾನೆ ಎಂದು ಮೂಲಗಳು
ತಿಳಿಸಿವೆ.

ನಗರ ಪೊಲೀಸ್‌ ಆಯುಕ್ತ ಮಾರ್ಟಿನ್ ಮಾರ್ಬನ್ಯಾಂಗ್‌ ಜಿಲ್ಲಾಸ್ಪತ್ರೆಗೆ ಹಾಗೂ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ದೇವಋಷಿ ಅವರ ಮರಣೋತ್ತರ ಪರೀಕ್ಷೆ ಮಾಡಿ, ಶವವನ್ನು ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ದೇವಋಷಿ ಹೊರಗುತ್ತಿಗೆ ಆಧಾರದ ಮೇಲೆ ಬೋಗಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಮೂಲದ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ದೊರತಿದೆ ಎಂದ ವರದಿಯಾಗಿದೆ….

More News

You cannot copy content of this page