No Grace Marks for SSLC Students: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಗ್ರೇಸ್ ಮಾರ್ಕ್ಸ್ ಇಲ್ಲ- ಶಿಕ್ಷಣ ಸಚಿವರ ಮಹತ್ವದ ಹೇಳಿಕೆ

ಬೆಂಗಳೂರು: ರಾಜ್ಯದ ಎಸ್‌ಎಸ್ಎಲ್‌ಸಿ ವಿದ್ಯಾರ್ಥಿಗಳು ಇನ್ನು ಮುಂದೆ ಕಷ್ಟಪಟ್ಟು ಓದಿ ಪಾಸಾಗಬೇಕಿದೆ. ಸರ್ಕಾರ ಕೃಪಾಂಕ ನೀಡಿ ನಮ್ಮನ್ನು ಪಾಸ್ ಮಾಡಲಿದೆ ಎಂದು ಯಾರಾದರೂ ನಂಬಿದ್ದರೆ ಅದನ್ನು ಬಿಟ್ಟು ಬಿಡಿ. ಇನ್ನು ಮುಂದೆ ಗ್ರೇಸ್ ಮಾರ್ಕ್ಸ್ ಪದ್ದತಿಗೆ ತಿಲಾಂಜಲಿ ನೀಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇದನ್ನು ಸ್ಫಷ್ಟಪಡಿಸಿದ್ದಾರೆ.

ಕಳೆದ ವಾರ ಪ್ರಕಟಗೊಂಡ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 20 ಅಂಕಗಳನ್ನು ಕೃಪಾಂಕವಾಗಿ ಸರ್ಕಾರ ನೀಡಿತ್ತು. ಇದರಿಂದಾಗಿ ಒಂದೂಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೂ ಒಟ್ಟು ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 10ರಷ್ಟು ಕುಸಿತ ಕಂಡಿತ್ತು. ಸರ್ಕಾರ ಶೇಕಡ 20 ಗ್ರೇಸ್ ಮಾರ್ಕ್ಸ್ ನೀಡಿದ್ದಕ್ಕೆ ಶಿಕ್ಷಣ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಆದ್ಯತೆ ನೀಡಬೇಕು. ಉಚಿತ ಅಂಕ ನೀಡಿ ಪಾಸ್ ಮಾಡುವುದಲ್ಲ ಎಂದು ಸರ್ಕಾರಕ್ಕೆ ಛಾಟಿಯೇಟು ಬೀಸಿದ್ದರು.
ಸಿಎಂ ಸಿದ್ದರಾಮಯ್ಯ ತೀವ್ರ ಗರಂ

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 20 ಅಂಕಗಳನ್ನು ಗ್ರೇಸ್ ಮಾರ್ಕ್ಸ್ ನೀಡಿದ್ದ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರನ್ನು ಕೇಳಿ ಗ್ರೇಸ್ ಮಾರ್ಕ್ಸ್ ನೀಡಿದ್ದೀರಿ ಎಂದು ಶಿಕ್ಷಣ ಸಚಿವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
ಸಿಎಂ ಪ್ರಶ್ನೆಗೆ ಮಧು ಬಂಗಾರಪ್ಪ ಶಾಕ್
ಎಸ್ಎಸ್ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಅನುಸರಿಸಿರುವ ಮಾರ್ಗಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಪಾಂಕ ನೀಡಿ ಫಲಿತಾಂಶ ಹೆಚ್ಚಳದ ಕಸರತ್ತು ನಡೆಸುವ ಅಗತ್ಯ ಇತ್ತೇ ಎಂದು ಸಿಎಂ ಪ್ರಶ್ನಿಸಿದ್ದಾರೆ. ಯಾರಿಂದ ಕೇಳಿ ಈ ತೀರ್ಮಾನ ತೆಗೆದುಕೊಂಡಿದ್ದೀರಿ ಎಂದು ಸಿಎಂ ಖಾರವಾಗಿ ಪ್ರಶ್ನಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಶಿಕ್ಷಣ ಸಚಿವರ ಬಳಿ ಉತ್ತರ ಇರಲಿಲ್ಲ
ಶಿಕ್ಷಣ ಸಚಿವರ ಹೇಳಿಕೆ

ಶಿಕ್ಷಣ ಸಚಿವರಿಗೆ ಸಿಎಂ ಕ್ಲಾಸ್ ತೆಗೆದುಕೊಂಡ ಬಳಿಕ ಸಚಿವ ಮಧು ಬಂಗಾರಪ್ಪ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಧು ಬಂಗಾರಪ್ಪ, ಮುಂದಿನ ವರ್ಷದಿಂದ ಕೃಪಾಂಕ ಪದ್ದತಿಗೆ ಪೂರ್ಣ ವಿರಾಮ ಬೀರಲಿದೆ ಎಂದು ಹೇಳಿದರು. ಈ ಹಿಂದೆ ಶೇಕ 5 ಕೃಪಾಂಕ ನೀಡಲಾಗುತ್ತಿತ್ತು. ಕೊರೋನಾ ಅವಧಿಯಲ್ಲಿ ಇದನ್ನು ಶೇಕಡ 10ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಶಿಕ್ಷಣ ತಜ್ಞರು ಮತ್ತು ಸಿಎಂ ಅಭಿಪ್ರಾಯವನ್ನು ಪರಿಗಣಿಸಿ ಕೃಪಾಂಕ ಕೈಬಿಡುವ ತೀರ್ಮಾನ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿವರ್ಷ ಎಂಟು ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಇವರಲ್ಲಿ ಶೇಕಡ 70 ವಿದ್ಯಾರ್ಥಿಗಳು ಸರಾಸರಿ ತೇರ್ಗಡೆ ಹೊಂದುತ್ತಾರೆ. ಇದರಲ್ಲಿ ಕೃಪಾಂಕದ ಲಾಭ ದೊರೆತ ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ.
ಈ ಬಾರಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉಡುಪಿ ಮೊದಲ ಸ್ಥಾನ ಗಳಿಸಿತ್ತು. ದಕ್ಷಿಣ ಕನ್ನಡ ಎರಡನೆ ಸ್ಥಾನದ ಗೌರವಕ್ಕೆ ಪಾತ್ರವಾಗಿತ್ತು.
ಬಾಗಲಕೋಟೆಯ ವಿದ್ಯಾರ್ಥಿನಿ ಅಂಕಿತಾ ಕೊನ್ನೂರ್ ಮಾತ್ರ 625ಕ್ಕೆ 625 ಅಂಕಗಳಿಸಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದರು.

More News

You cannot copy content of this page