ಬಾರಬಂಕಿ, ಉತ್ತರಪ್ರದೇಶ: ರಾಮಮಂದಿರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಅತ್ಯಂತ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮ ಮೂರ್ತಿಗೆ ಟೆಂಟ್ ಗತಿಯಾಗಲಿದೆ ಎಂದು ಪ್ರಧಾನಿ ಎಚ್ಚರಿಕೆ ನೀಡಿದ್ದಾರೆ. ಅಯೋಧ್ಯೆಯ ಭವ್ಯರಾಮಮಂದಿರದಿಂದ ಶ್ರೀರಾಮನ ಮೂರ್ತಿಯನ್ನು ಕಾಂಗ್ರೆಸ್ ನಾಯಕರು ಟೆಂಟ್‌ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ಬುಲ್ಡೋಜರ್ ಬಳಕೆ ಆತಂಕ
ಕಾಂಗ್ರೆಸ್ ಎಸ್‌ಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯ ಶ್ರೀರಾಮ ಮಂದಿರದ ಮೇಲೆ ಬುಲ್ಡೋಜರ್ ಹರಿಸುವ ಸಾಧ್ಯತೆ ಇದೆ ಎಂದು ಪ್ರಧಾನಿ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ.
500 ವರ್ಷಗಳ ನಿರಂತರ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ತಲೆ ಎತ್ತಿದೆ. ಇದೀಗ ಇದಕ್ಕೆ ಅಪಾಯ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಎಸ್‌ಪಿ ಮೈತ್ರಿ ಕೂಟ ಯಾವ ಹಂತಕ್ಕೂ ಹೋಗಲಿದೆ ಎಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರ ಸಭೆಯಲ್ಲಿ ಆರೋಪಿಸಿದ್ದಾರೆ.
ಉತ್ತರಪ್ರದೇಶದ ಬಾರಬಂಕಿಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ರಾಮ ಮಂದಿರದ ಕುರಿತು ಜಾಗೃತರಾಗುವಂತೆ ಕರೆ ನೀಡಿದರು. ಬುಲ್ಡೋಜರ್ ಎಲ್ಲಿ ಹೇಗೆ ಬಳಸಬೇಕು ಎಂಬುದನ್ನು ಕಾಂಗ್ರೆಸ್ ನಾಯಕರು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ನೋಡಿ ಕಲಿಯಿರಿ ಎಂದು ಪ್ರಧಾನಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಗೂಂಡಾ ಸಂಸ್ಕೃತಿಗೆ ಕಡಿವಾಣ ಹಾಕಲು ಬುಲ್ಡೋಜರ್ ವ್ಯಾಪಕವಾಗಿ ಬಳಸಲಾಗುತ್ತಿದೆ. ಅಪರಾಧಿಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಮುಲಾಜಿಲ್ಲದೆ ನೆಲಸಮಗೊಳಿಸಲಾಗುತ್ತಿದೆ. ಇದರಿಂದ ಭಯಪಟ್ಟಿರುವ ಗೂಂಡಾಗಳು ಕಾನೂನು ಬಾಹಿರ ಚಟುವಟಿಕೆಯಿಂದ ದೂರ ಸರಿದಿದ್ದಾರೆ.

ಮೋದಿ ಪ್ರಾಣ ಪ್ರತಿಷ್ಠೆ
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಿಸುವುದಾಗಿ ಹಲವು ವರ್ಷಗಳಿಂದ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಈ ನಿಟ್ಟಿನಲ್ಲಿ ದೇಶಾದ್ಯಂತ ರಥಯಾತ್ರೆ ಕೂಡ ನಡೆಸಿದ್ದರು. ರಾಮ ಮಂದಿರ ವಿವಾದದ ಹಿನ್ನೆಲೆಯಲ್ಲಿ ಮೂರು ಸರ್ಕಾರಗಳು ಕೇಂದ್ರದಲ್ಲಿ ಪತನಗೊಂಡಿದ್ದವು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಈ ಕುರಿತಾದ ಕಾನೂನು ಹೋರಾಟ ವೇಗ ಪಡೆದಿತ್ತು. ಅಂತಿಮವಾಗಿ ಈ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಅನುಮತಿ ನೀಡಿತ್ತು.
ಪ್ರಧಾನಿ ಮೋದಿ ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಮತ್ತು ಪ್ರಾಣ ಪ್ರತಿಷ್ಠೆ ನಡೆಸಿದ್ದಾರೆ. ಪ್ರಾಣ ಪ್ರತಿಷ್ಟೆ ವೇಳೆ ಮೋದಿ ಉಪವಾಸ ನಿರತರಾಗಿದ್ದರು. ಪ್ರಾಣ ಪ್ರತಿಷ್ಟೆಗೂ ಮುನ್ನ ದಕ್ಷಿಣ ಭಾರತದ ಪ್ರಮುಖ ರಾಮ ದೇವಸ್ಥಾನಗಳಿಗೆ ಕೂಡ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಉಡುಪಿಯ ಪೇಜಾವರ ಮಠದ ಸ್ವಾಮೀಜಿ ಕೂಡ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಇದೀಗ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ರಾಮ ಮಂದಿರ ಸದ್ದು ಮಾಡುತ್ತಿದೆ. ರಾಮ ಮಂದಿರ ನಿರ್ಮಾಣವಾಗಿದ್ದು, ಮಂದಿರದ ಸುತ್ತ ಮತ್ತೆ ದೇಶದ ರಾಜಕೀಯ ನಾಯಕರ ಹೇಳಿಕೆ ಕೇಂದ್ರೀಕೃತಗೊಂಡಿದೆ.