Search

ANJALI MURDER CASE: ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿ -ಧಾರವಾಡ ಡಿಸಿಪಿ ಪಿ ರಾಜೀವ ಅಮಾನತು

ಹುಬ್ಬಳ್ಳಿ: ಇಲ್ಲಿನ ವೀರಾಪುರ ಓಣಿಯ ಯುವತಿ ಅಂಜಲಿ ಅಂಬಿಗೇರ ಕೊಲೆ ಪ್ರಕರಣ ಸಂಬಂಧ ಮತ್ತೊಬ್ಬ ಹಿರಿಯ ಪೊಲೀಸ್​ ಅಧಿಕಾರಿಯ ತಲೆದಂಡವಾಗಿದೆ. ಅಂಜಲಿ ಕೊಲೆ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಆರೋಪದ ಮೇಲೆ ಈ ಹಿಂದೆ ಪೊಲೀಸ್ ಇನ್ಸ್​ಪೆಕ್ಟರ್ ಹಾಗೂ ಮಹಿಳಾ ಹೆಡ್‌ಕಾನ್ಸ್​ಟೆಬಲ್ ಅವರನ್ನು ಅಮಾನತು ಮಾಡಲಾಗಿತ್ತು. ಶನಿವಾರ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ಅಮಾನತಾದ ಅಧಿಕಾರಿಯಾಗಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಹತ್ಯೆ ಪ್ರಕರಣದಲ್ಲಿ ಮೂವರು ಪೊಲೀಸರ ಅಮಾನತಾದಂತಾಗಿದೆ.ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಗೆ ಅಂಜಲಿ ಕುಟುಂಬದವರು ಹೋಗಿ ಮಾಹಿತಿ ನೀಡಿದ ಬಳಿಕವೂ ಪೊಲೀಸರು ಕ್ರಮ ಜರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಹುಬ್ಬಳ್ಳಿ – ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್​​ ಅವರು ಇನ್ಸ್​ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ರೇಖಾ ಹಾವರಡ್ಡಿ ಅವರನ್ನು ಅಮಾನತು ಮಾಡಿದ್ದರು. ಇನ್ನೂ ಕೆಲ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯ ಆರೋಪ ಮಾಡಲಾಗಿದೆ. ಅವರಿಗೂ ಕ್ರಮದ ಭಯ ಕಾಡುತ್ತಿದೆ.

ಅಂಜಲಿ ಕೊಲೆ ಪ್ರಕರಣ: ಪ್ರೀತಿ ನಿರಾಕರಿಸಿದ್ದಕ್ಕೆ ಕಳೆದ ಬುಧವಾರ (ಮೇ 15) ಮುಂಜಾನೆ ಹುಬ್ಬಳ್ಳಿಯ ವೀರಾಪುರ ಓಣಿಯ ನಿವಾಸಿ ಅಂಜಲಿ (20) ಮನೆಗೆ ನುಗ್ಗಿದ ಯುವಕ ಚಾಕುವಿನಿಂದ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಇರಿದು ಪರಾರಿಯಾಗಿದ್ದ. ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಮನೆಯವರ ಎದುರಲ್ಲೇ ಯುವತಿ ಅಂಜಲಿ ಕೊನೆಯುಸಿರೆಳೆದಿದ್ದಳು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ವಿಶ್ವ ಅಲಿಯಾಸ್​ ಗಿರೀಶ್ (21) ಎಂಬಾತನನ್ನು ದಾವಣಗೆರೆಯಲ್ಲಿ ರೈಲ್ವೆ ಪೊಲೀಸರ​ ನೆರವಿನೊಂದಿಗೆ ಬಂಧಿಸಿ ಹುಬ್ಬಳ್ಳಿಗೆ ಕರೆತರಲಾಗಿದೆ.ರೈಲಿನಲ್ಲಿ ಸಂಚರಿಸುತ್ತಿದ್ದಾಗ ಸಹ ಪ್ರಯಾಣಿಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಆರೋಪಿ ಗಿರೀಶ್​​ ಗಂಭೀರವಾಗಿ ಗಾಯಗೊಂಡಿದ್ದಾನೆ. ಜಗಳದ ವೇಳೆ ತಪ್ಪಿಸಿಕೊಳ್ಳಲು ಚಲಿಸುತ್ತಿದ್ದ ರೈಲಿನಿಂದ ಬಿದ್ದು ತೀವ್ರ ಗಾಯಗಳಾಗಿವೆ. ದಾವಣಗೆರೆಯಿಂದ ಕರೆತಂದಿರುವ ಪೊಲೀಸರು ನೇರವಾಗಿ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣವಾದ ಕೆಲ ದಿನಗಳಲ್ಲೇ ಅಂಜಲಿ ಹತ್ಯೆ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

More News

You cannot copy content of this page