ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಮತ್ತೊಂದು ಆಡಿಯೋ ಸಂಭಾಷಣೆ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡರ ಮಧ್ಯೆ ನಡೆದಿದೆ ಎನ್ನಲಾದ ಸಂಭಾಷಣೆಯ ತುಣುಕು ಇದೀಗ ವೈರಲ್ ಆಗಿದೆ.
ಮಾತುಕತೆ ವೇಳೆ ಶಿವರಾಮೇಗೌಡ ಅವರು ಅಶ್ಲೀಲ ವಿಡಿಯೋ ಬಗ್ಗೆ ಪ್ರಸ್ತಾಪಿಸುವ ಅಂಶಗಳಿವೆ. ಕನ್ನಡದ ಸುದ್ದಿವಾಹಿನಿಗಳು ಇಂದು ಮಧ್ಯಾಹ್ನ 3 ಗಂಟೆ ಹೊತ್ತಿಗೆ ಈ ಸುದ್ದಿ ಪ್ರಸಾರ ಮಾಡಿವೆ. ಆದರೆ ನೇರವಾಗಿ ಆಡಿಯೋ ಸಂಭಾಷಣೆ ಶಿವರಾಮೇಗೌಡರದ್ದು ಎಂದು ಯಾವ ಸುದ್ದಿ ವಾಹಿನಿ ಕೂಡ ಹೇಳಿಲ್ಲ. ಈ ಸಂಬಂಧ ದೃಢೀಕರಣ ಮಾಡಿಲ್ಲ. ಸಂಭಾಷಣೆಯ ಮೂಲ ದೃಢೀಕರಿಸಲಾಗಿಲ್ಲ ಎಂಬ ಟ್ಯಾಗ್ ಲೈನ್‌ನೊಂದಿಗೆ ಸುದ್ದಿ ಪ್ರಸಾರ ಮಾಡಿವೆ.
ಆಡಿಯೋದಲ್ಲಿ ಮಾಜಿ ಪ್ರಧಾನಿ ಹಾಗೂ ರಾಜ್ಯದ ಹಿರಿಯ ಮತ್ಸದ್ಧಿ ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಮಾತುಗಳಿವೆ ಎಂದು ಹೇಳಲಾಗುತ್ತಿದೆ. ಶಿವರಾಮೇಗೌಡರು ಈ ಮಾತು ಹೇಳಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಇದರಲ್ಲಿ ಕೂಡ ಖಚಿತತೆ ಇಲ್ಲ. ಶಿವರಾಮೇಗೌಡ ಅವರು ಮಾತುಕತೆ ವೇಳೆ ಡಿಸಿಎಂ ಶಿವಕುಮಾರ್ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡನನ್ನು ಎಸ್ಐಟಿ ಬಂಧಿಸಿದೆ. ಇದೀಗ ದೇವರಾಜೇಗೌಡ ಎಸ್‌ಐಟಿ ವಶದಲ್ಲಿ ಇದ್ದಾರೆ. ಈ ಹೊತ್ತಿನಲ್ಲಿ ದೇವರಾಜೇಗೌಡ ಜೊತೆ ನಡೆಸಿದ್ದರೆನ್ನಲಾದ ಆಡಿಯೋ ತುಣುಕು ಬಿಡುಗಡೆಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿರುವವ ಆರ್. ಅಶೋಕ್ ಶಿವರಾಮೇಗೌಡ ಅವರು ಇದೀಗ ಬಿಜೆಪಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಶಿವರಾಮೇಗೌಡರಿಂದ ಅಂತರ ಕಾಯ್ದುಕೊಳ್ಳಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ನಾಳೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ
ಇದೇ ವೇಳೆ ಮಹಿಳಾ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ಭೀತಿ ಎದುರಿಸುತ್ತಿರುವ ಮಾಜಿ ಸಚಿವ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಾಳೆ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯಲಿದೆ. ಸೋಮವಾರ ತನಕ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆರಂಭದಲ್ಲಿ ಒಂದು ದಿನದ ಮಧ್ಯಂತರ ರಿಲೀಫ್ ನೀಡಿದ್ದ ಕೋರ್ಟ್ ಬಳಿಕ ಸೋಮವಾರದ ತನಕ ಮಧ್ಯಂತರ ಜಾಮೀನು ನೀಡಿತ್ತು.
ಇದೀಗ ಸೋಮವಾರ ಜಾಮೀನು ಅರ್ಜಿ ವಿಚಾರಣೆ ಮುಂದುವರಿಯಲಿದೆ.
ಮಾಜಿ ಸಚಿವ ರೇವಣ್ಣ ಪರ ಹಿರಿಯ ವಕೀಲ ಸಿ ವಿ ನಾಗೇಶ್ ವಾದ ಮಂಡಿಸುತ್ತಿದ್ದಾರೆ. ಎಸ್ಐಟಿ ಪರ ಜೋಯ್ನಾ ಕೊಠಾರಿ ವಾದ ಮಂಡಿಸಿದ್ದಾರೆ. ನಾಳೆಯೂ ವಾದ ಪ್ರತಿವಾದ ಮುಂದುವರಿಯಲಿದೆ. ಅರ್ಜಿ ವಿಚಾರಣೆಗೆ ಪ್ರಸ್ತುತ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂದು ಎಸ್ಐಟಿ ಪರ ವಕೀಲರು ಈಗಾಗಲೇ ವಾದ ಮಂಡಿಸಿದ್ದಾರೆ. ಈ ಸಂಬಂಧ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಪ್ರಜ್ವಲ್ ಎಲ್ಲಿದ್ದಾನೆ
ಹಾಸನದ ಅಶ್ಲೀಲ ವಿಡಿಯೋ ಬೆಳಕಿಗೆ ಬಂದ ಕೂಡಲೇ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರ ದೊರೆತಿಲ್ಲ. ಪ್ರಜ್ವಲ್ ಇಂದು ಬರುತ್ತಾನೆ , ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿ ದಿನಕಳೆಯಲಾಗುತ್ತಿದೆ. ಇದುವರೆಗೆ ಪ್ರಜ್ವ್ಲಲ್ ರೇವಣ್ಣ ಸುಳಿವು ದೊರೆತಿಲ್ಲ. ಇದೀಗ ಪ್ರಜ್ವಲ್ ರೇವಣ್ಣ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳಲು ವಿಶೇಷ ತನಿಖಾ ತಂಡ ಮುಂದಾಗಿದೆ ಎಂದು ವರದಿಯಾಗಿದೆ.
ವಿದೇಶದಲ್ಲಿ ಪ್ರಜ್ವಲ್ ರೇವಣ್ಣಗೆ ಯಾರು ಆರ್ಥಿಕ ಸಹಾಯ ನೀಡುತ್ತಾರೆ. ಭಾರತದಲ್ಲಿ ಯಾರ ಜೊತೆ ಸಂಪರ್ಕದಲ್ಲಿ ಇದ್ದಾನೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.