Search

Rain in Cauvery Basin: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ, ಕೆಆರ್‌ಎಸ್ ನೀರಿನ ಮಟ್ಟ ಹೆಚ್ಚಳ, ರೈತರ ಹರ್ಷ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೆ ಆರ್ ಎಸ್ ಅಣೆಕಟ್ಟೆಗೆ ಒಳ ಹರಿವು ಪ್ರಮಾಣ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯಲ್ಲಿರುವ ಕೆ ಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ಜಲಾಶಯದ ನೀರಿನ ಮಟ್ಟ 80 ಅಡಿಗೆ ಏರಿಕೆಯಾಗಿದೆ. 1000 ಕ್ಯೂಸೆಕ್​ಗೆ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಕೇರಳದ ವಯನಾಡ್ ಪ್ರದೇಶದಲ್ಲಿ ಕಳೆದ ಮೂರು ದಿನಗಳಳಿಂದ ಉತ್ತಮ ಮಳೆಯಾಗುತ್ತಿದೆ.
ಕೆ.ಆರ್.ಎಸ್ ಅಣೆಕಟ್ಟಿನ ಮೇಲೆ ರಾಜ್ಯದ ಲಕ್ಷಾಂತರ ರೈತರ ಬದುಕು ಅವಲಂಬಿತವಾಗಿದೆ. ಸರ್ ವಿಶ್ವೇಶ್ವರಯ್ಯ ಅವರ ದೂರದೃಷ್ಠಿಯ ಫಲವಾಗಿ ಮೈಸೂರು ಮಹಾರಾಜರ ಪೂರ್ಣ ಸಹಕಾರದಿಂದ ಕೆ ಅರ್ ಎಸ್ ಅಣೆಕಟ್ಟು ಸಾಕಾರಗೊಂಡಿತ್ತು.
ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಟ ನೀರಿನ ಮಟ್ಟ:124.80 ಅಡಿ
ಪ್ರಸ್ತುತ ನೀರಿನ ಮಟ್ಟ : 80.52 ಅಡಿ
ಒಳಹರಿವು : 1000 ಕ್ಯೂಸೆಕ್
ಹೊರಹರಿವು : 269 ಕ್ಯೂಸೆಕ್

ಮೈಸೂರಿನಲ್ಲಿ ಮಳೆ
ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಬೆಳಗ್ಗೆಯಿಂದಲೇ ಮಳೆ ಆರಂಭವಾಗಿದೆ. ನಿನ್ನೆ ಮೈಸೂರು ನಗರದಲ್ಲಿ ಮೋಡ ಮುಸುಕಿದ ವಾತಾವರಣ ಇತ್ತು. ಇದೀಗ ಮಳೆ ಆಗಮನವಾಗಿದೆ. ಮಳೆಯ ಸಿಂಚನಕ್ಕೆ ಜನರು ಫಿದಾ ಆಗಿದ್ದಾರೆ. ಬೇಸಿಗೆಯಲ್ಲಿ ಕಂಗೆಟ್ಟ ಜನರು ಇದೀಗ ಕೂಲ್ ವಾತಾವರಣಕ್ಕೆ ಹಾತೊರೆಯುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಕೂಡ ಮಳೆ
ಕೋಟೆ ನಾಡು ಚಿತ್ರದುರ್ಗದಲ್ಲಿ ಕೂಡ ಮಳೆಯಾಗಿದೆ. ತಡರಾತ್ರಿ ಚಿತ್ರದುರ್ಗದಲ್ಲಿ ಉತ್ತಮ ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಚೆಕ್ ಡ್ಯಾಂಗಳು ಭರ್ತಿಯಾಗಿವೆ.
ಹೊಸದುರ್ಗ ದ ಕೆಲ್ಲೋಡು ಬಳಿ ವೇದಾವತಿ ನದಿ. ತುಂಬಿ ಹರಿದಿದೆ. ಕಡದಿನಕೆರೆ ಗ್ರಾಮದಲ್ಲಿ ಮಳೆಗೆ ರಸ್ತೆ ಕೊಚ್ಚಿಹೋಗಿದೆ. ಕೊರಟಿಕೆರೆ, ಬಾಗಶೆಟ್ಟಿ, ಚೌಳ ಹಿರಿಯೂರು ಸಂಪರ್ಕ ಬಂದ್ ಆಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಡದಿಕೆರೆ ಗ್ರಾಮದಲ್ಲಿ ಸಂಪರ್ಕ ವ್ಯವಸ್ಥೆ ಬಂದ್ ಆಗಿದೆ. ಮೊಳಕಾಲ್ಮೂರು ತಾಲ್ಲೂಕಿನ ಮೇಗಳ ಕಣಿವೆಯಲ್ಲಿ ಜಲಪಾತ ಸೃಷ್ಠಿಯಾಗಿದೆ.
ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ
ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಇದರ ಜೊತೆ ಜೊತೆಗೆ ಕೆಲವು ಕಡೆ ಮಳೆಯಿಂದ ಹಾನಿ ಕೂಡ ಸಂಭವಿಸಿದೆ. ಚಿಕ್ಕಮಗಳೂರು ತಾಲೂಕಿನ ಕಸ್ಕೆ ಎಂಬ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆ ಸಂಪೂರ್ಣ ನಾಶವಾಗಿದೆ. ಆಲ್ದೂರು ಸಮೀಪದ ಕಸ್ಕೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.ಮನೆಯವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

More News

You cannot copy content of this page