ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ರೇವ್ ಪಾರ್ಟಿ ಸದ್ದು ಮಾಡಿದೆ. ನಗರದ ಹೊರವಲಯದಲ್ಲಿರುವ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಫಾರ್ಮ್ ಹೌಸ್‌ನಲ್ಲಿ ಆಯೋಜಿಸಲಾಗಿದ್ದ ರೇವ್ ಪಾರ್ಟಿಯ ಮೇಲೆ ಸಿಸಿಬಿ ದಾಳಿ ನಡೆಸಿದೆ. ರೇವ್ ಪಾರ್ಟಿಯಲ್ಲಿ 100ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇವರಲ್ಲಿ ತೆಲುಗು ಸಿನಿಮಾ ರಂಗದ ನಟ, ನಟಿಯರು ಮತ್ತು ರಾಜಕಾರಣಿಗಳು ಸೇರಿದ್ದಾರೆ. ರೇವ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಕೂಡ ಪತ್ತೆಯಾಗಿದೆ.
ರೇವ್ ಪಾರ್ಟಿಯಲ್ಲಿ ಆಂಧ್ರ ಮತ್ತು ಬೆಂಗಳೂರು ಮೂಲದ 100 ಹೆಚ್ಚು ಜನರು ಭಾಗವಹಿಸಿದ್ದರು. ಇವರಲ್ಲಿ 25ಕ್ಕೂ ಹೆಚ್ಚು ಯುವತಿಯರು ಕೂಡ ಸೇರಿದ್ದಾರೆ. ಬರ್ತ್‌ಡೇ ಪಾರ್ಟಿ ಹೆಸರಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು ಎಂದು ವರದಿಯಾಗಿದೆ.
ವಿಮಾನದಲ್ಲಿ ಅತಿಥಿಗಳ ಆಗಮನ
ಎಲೆಕ್ಟ್ರಾನಿಕ್ ಸಿಟಿಯ ಫಾರ್ಮ್ ಹೌಸ್ ಒಂದರಲ್ಲಿ ಆಯೋಜಿಸಲಾಗಿದ್ದ ಪಾರ್ಟಿಗೆ ಅತಿಥಿಗಳು ವಿಮಾನದ ಮೂಲಕ ಅಗಮಿಸಿದ್ದರು.
ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಹೈದ್ರಾಬಾದ್ ಮೂಲದ ವಾಸು ಎಂಬಾತ ಇದರ ವ್ಯವಸ್ಥೆ ಮಾಡಿದ್ದ. ವಾಸು ಆಂಧ್ರಪ್ರದೇಶದ ರಾಜಕೀಯ ಮತ್ತು ಸಿನೆಮಾ ಕ್ಷೇತ್ರದ ದೊಡ್ಡ ಕುಳ ಎಂದು ಹೇಳಲಾಗುತ್ತಿದೆ. ಸನ್ ಸೆಟ್ ಟು ಸನ್ ರೈಸ್ ಎಂಬ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಸೂರ್ಯಾಸ್ತದಿಂದ ಸೂರ್ಯೋದಯ ತನಕ ಕುಣಿದ್ದು ಕುಪ್ಪಳಿಸುವುದು ಎಂಬ ಥೀಮ್‌ನ ಅಡಿಯಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು. ಐಷಾರಾಮಿ ಕಾರುಗಳಲ್ಲಿ ಗಣ್ಯರು ಪಾರ್ಟಿಗೆ ಆಗಮಿಸಿದ್ದರು. ಬೆಂಜ್ ಕಾರೊಂದರಲ್ಲಿ ಆಂಧ್ರಪ್ರದೇಶದ ಶಾಸಕರೊಬ್ಬರಿಗೆ ಸೇರಿದ ಪಾಸ್ ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ. ವಿಲಾಸಿ ಕಾರುಗಳಲ್ಲಿ ಬಹುತೇಕ ಅತಿಥಿಗಳು ಬಂದಿದ್ದರು.
ಭಾನುವಾರ ಸಂಜೆ ಐದು ಘಂಟೆ ಯಿಂದ ಬೆಳಗ್ಗೆ ಆರು ಘಂಟೆ ತನಕ ಪಾರ್ಟಿ ನಡೆಸಲು ಪ್ಲ್ಯಾನ್ ಮಾಡಲಾಗಿತ್ತು. ಪಾರ್ಟಿಯಲ್ಲಿ ಮಾಡೆಲ್‌ಗಳು, ಡಿಜೆಗಳು ಮತ್ತು ಟೆಕ್ಕಿಗಳು ಕೂಡ ಭಾಗಿಯಾಗಿದ್ದರು. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ.
ಎಂಡಿಎಂಎ, ಕೊಕೇನ್ ಪತ್ತೆ
ರೇವ್ ಪಾರ್ಟಿ ಆಯೋಜಿಸಿದ್ದ ಸ್ಥಳದಲ್ಲಿ ಹದಿನೇಳು ಎಂಡಿಎಂಎ ಮಾತ್ರೆ ಮತ್ತು ಕೊಕೇನ್ ಪತ್ತೆ ಹಚ್ಚಲಾಗಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಇದೀಗ ಪರಿಶೀಲನೆ ನಡೆಸಲಾಗುತ್ತಿದೆ. ಮಾದಕ ದ್ರವ್ಯಗಳನ್ನು ಪೂರೈಸಿದ್ದವರು ಯಾರು , ಎಷ್ಟು ಮಂದಿ ಮಾದಕ ದ್ರವ್ಯ ಸೇವಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಶಕ್ಕೆ ಪಡೆದವರನ್ನು ವೈದ್ಯಕೀಯ ಪರೀಕ್ಷೆಗೆ ಕೂಡ ಗುರಿಪಡಿಸಲಾಗುವುದು.
ಡಾರ್ ಲಾಕ್ ಮಾಡಿದ್ದ ಪಾರ್ಟಿ ಪ್ರಿಯರು
ಫಾರ್ಮ್ ಹೌಸ್‌ಗೆ ಮುಂಜಾನೆ ಸಿಸಿಬಿ ಪೊಲೀಸರು ದಾಳಿ ಮಾಡಿರುವಂತೆಯೇ ಶಾಕ್‌ಗೆ ಒಳಗಾದ ಪಾರ್ಟಿ ಪ್ರಿಯರು ಬಾಗಿಲು ಬಂದ್ ಮಾಡಿದರು. ಪೊಲೀಸರು ಬಳಿಕ ಬಲವಂತವಾಗಿ ಡೋರ್ ಓಪನ್ ಮಾಡಿ ಪರಿಶೀಲನೆ ನಡೆಸಿದರು. ಪೊಲೀಸರು ಎಂದು ಗೊತ್ತಾದ ತಕ್ಷಣ ತಮ್ಮ ಬಳಿ ಇದ್ದ ಮಾದಕ ದ್ರವ್ಯ ನಾಶಪಡಿಸಲು ಮುಂದಾದರು. ಕೆಲವರು ಟಾಯ್ಲೆಟ್ ಪ್ಲಶ್ ಮಾಡಿ ಬಚಾವಾಗಲು ಯತ್ನಿಸಿದ್ದರು. ಇದೀಗ ಪ್ರಕರಣ ಸಂಬಂಧ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ಪಾರ್ಟಿ ಆಯೋಜಕ ವಾಸು ಕೂಡ ಸೇರಿದ್ದಾನೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಮೂವರು ಡ್ರಗ್ ಪೆಡ್ಲರ್ಸ್‌ಗಳನ್ನು ಕೂಡ ಬಂಧಿಸಲಾಗಿದೆ.