ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸರ್ಕಾರದ ವರ್ಷದ ಸಾಧನೆ ಹಾಗೂ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಲಾದ ಐದು ಗ್ಯಾರಂಟಿಗಳನ್ನು ಕೂಡ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸರ್ಕಾರದ ಶಕ್ತಿಯೋಜನೆ ಸೇರಿದಂತೆ ಎಲ್ಲ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿ ಜಾರಿಯಾಗಿಲೆ. ಕೋಟ್ಯಂತರ ಮಂದಿ ಇದರ ಫಲಾನುಭವಿಗಳಾಗಿದ್ದಾರೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ಸ್ತ್ರೀ ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯದಲ್ಲಿ 200ಕೋಟಿಗೂ ಹೆಚ್ಚು ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂಬ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಹಂಚಿಕೊಂಡರು. ಇದರಿಂದ ಸರ್ಕಾರದ ಯೋಜನೆಗಳು ಜನರಿಗೆ ಹೇಗೆ ನೆರವಾಗುತ್ತದೆ ಎಂಬುದನ್ನು ಸಿಎಂ ವಿವರಿಸಿದರು. ಇದರ ಜೊತೆ ಜೊತೆಗೆ ಗೃಹ ಲಕ್ಷ್ಮೀ ಸೇರಿದಂತೆ ಎಲ್ಲ ಯೋಜನೆಗಳು ಅತ್ಯಂತ ಯಶಸ್ವಿಯಾಗಿವೆ ಎಂದು ಸಿದ್ದರಾಮಯ್ಯ ಘೋಷಿಸಿದರು
ಶಕ್ತಿ ಯೋಜನೆಯಡಿ ಈವರೆಗೆ ರಾಜ್ಯದಲ್ಲಿ 201. 32 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಯೋಜನೆಯ ಯಶಸ್ಸಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದಕ್ಕಾಗಿ ಸರ್ಕಾರ 4857.95 ಕೋಟಿ ಖರ್ಚು ಮಾಡಲಾಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.ಅನ್ನಭಾಗ್ಯ ಯೋಜನೆಯಡಿ 4.10 ಕೋಟಿ ಜನರಿಗೆ 5754.6 ಕೋಟಿ ಕೊಟ್ಟಿದ್ದೇವೆ ಎಂದು ಹೇಳಿದ ಸಿದ್ದರಾಮಯ್ಯ,ಗೃಹ ಜ್ಯೋತಿ ಯೋಜನೆಯಡಿ 1.60 ಕೋಟಿ ಕುಟುಂಬಗಳಿಗೆ 7436 ಕೋಟಿ ಖರ್ಚು ಮಾಡಿದ್ದೇವೆ ಎಂದು ತಿಳಿಸಿದರು. ಒಟ್ಟು 36 ಸಾವಿರ ಕೋಟಿ ರೂಪಾಯಿ ಗ್ಯಾರೆಂಟಿಗಳಿಗೆ ಖರ್ಚು ಮಾಡಿದ್ಧೇವೆ ಎಂದು ಸಿಎಂ ಮಾಧ್ಯಮ ಸಂವಾದದಲ್ಲಿ ಬಹಿರಂಗಪಡಿಸಿದರು
ಫಲಿತಾಂಶದ ಬಳಿಕ ಕೂಡ ಗ್ಯಾರಂಟಿ
ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಇರಲ್ಲ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಇದು ಸುಳ್ಳು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ತನಕ ಗ್ಯಾರಂಟಿ ಯೋಜನೆ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ಘೋಷಿಸಿದರು. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಇರಲ್ಲ ಎಂದು ಬಿಜೆಪಿ ಹೇಳುತ್ತಿದೆ. ಇದನ್ನು ನಂಬಬೇಡಿ. ಇದೆಲ್ಲ ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಲಿದೆ. 15ರಿಂದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಲಿದೆ. ಯಡಿಯೂರಪ್ಪನವರ ಹಾಗೆ ಎಲ್ಲ 28 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ನಾನು ಹೇಳುತ್ತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. ಚುನಾವಣಾ ಫಲಿತಾಂಶದ ಬಳಿಕ ಸಂಪುಟ ಪುನಾರಚನೆಯಾಗಲಿದೆ ಎಂಬ ಮಾತನ್ನು ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಈ ಸಂಬಂಧ ಯಾವುದೇ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಜ್ವಲ್ ಕೇಸ್ ಸಿಎಂ ಪ್ರತಿಕ್ರಿಯೆ
ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಪ್ರಜ್ವಲ್ ತಪ್ಪು ಮಾಡದೆ ಇದ್ದಿದ್ದರೆ ಅಮಾನತು ಯಾಕೆ ಮಾಡಬೇಕಿತ್ತು. ಕಾನೂನು ವಿಚಾರಣೆಗೆ ಹೆದರಿ ವಿದೇಶಕ್ಕೆ ಪಲಾಯನ ಯಾಕೆ ಮಾಡಬೇಕಿತ್ತು. ಸರ್ಕಾರ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ವಿಶೇಷ ತನಿಖಾ ದಳ ಅದರ ರೀತಿಯಲ್ಲಿ ತನಿಖೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ದ್ವೇಷ ರಾಜಕೀಯ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.