ಬೆಂಗಳೂರು: ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಅವರೇನು ಭಯೋತ್ಪದಕರೇ? ಫೋನ್ ಟ್ಯಾಪ್ ನಂತಹ ಮುಠ್ಠಾಳತನದ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಹೇಳಿದರು.
ಫೋನ್ ಟ್ಯಾಪ್ ಬಗ್ಗೆ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಮಾಧ್ಯಮದವರು ಕುಮಾರಪಾರ್ಕ್ ಸರಕಾರಿ ಅತಿಥಿ ಗೃಹದ ಬಳಿ ಗಮನ ಸೆಳೆದಾಗ ಅವರು ಸೋಮವಾರ ಉತ್ತರಿಸಿದ್ದಿಷ್ಟು:
ಭಯೋತ್ಪಾದಕರ ಫೋನನ್ನು ಅನುಮತಿ ಪಡೆದು ಟ್ಯಾಪ್ ಮಾಡಲಾಗುತ್ತದೆ. ಇವರು ನಮ್ಮ ರಾಜ್ಯದ ನಾಯಕರು, ಇವರ ಫೋನ್ ಟ್ಯಾಪ್ ಮಾಡುವ ಅವಶ್ಯಕತೆ ನಮ್ಮ ಸರ್ಕಾರಕ್ಕಿಲ್ಲ. ಕೇವಲ ಪ್ರಚಾರಕ್ಕಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿದ್ದಾರೆ.”
ಸರ್ಕಾರ ಒಂದು ವರ್ಷ ಐಸಿಯುನಲ್ಲಿ ಇತ್ತು ಎಂಬ ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದಾಗ “ಪಾಪ ಅವರು ಇನ್ನೇನು ಮಾಡಲು, ಇನ್ನೇನು ಹೇಳಲು ಸಾಧ್ಯ. ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಸರ್ಕಾರ ಐಸಿಯುನಲ್ಲಿ ಇತ್ತೋ ಇರಲಿಲ್ಲವೋ ಎಂದು ಜನ ಹೇಳಬೇಕು, ನಾಯಕರುಗಳಲ್ಲ”.
ಈ ಹಿಂದಿನ ಸರ್ಕಾರದ ಕೆಟ್ಟ ಆಡಳಿತದಿಂದ, ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರ ಜೀವನದಲ್ಲಿ ನಮ್ಮ ಸರ್ಕಾರದ ಆಡಳಿತದಿಂದ ಬದಲಾವಣೆ ಉಂಟಾಗಿದೆ. ಕೆಟ್ಟ ಆಡಳಿತ ಎಂದು ಚುನಾವಣೆಗೆ ಮುಂಚಿತವಾಗಿ ಕುಮಾರಸ್ವಾಮಿ ಹಾಗೂ ಅವರ ಪಕ್ಷದವರ ನುಡಿಮುತ್ತುಗಳ ಬಗ್ಗೆ ಮಾಧ್ಯಮದವರ ಬಳಿಯೇ ದಾಖಲೆಗಳು ಇದ್ದಾವಲ್ಲವೇ? ಅವರು ನಮ್ಮ ಬಗ್ಗೆ ಮಾತನಾಡಲೇ ಬೇಕಲ್ಲವೇ!. ಅವರಿಂದ ನಾನು ಶಹಬಾಷ್ಗಿರಿ ನಿರೀಕ್ಷಿಸಲು ಸಾಧ್ಯವೇ? ಇದನ್ನು ನಾನು ನಿರೀಕ್ಷೆ ಮಾಡುವುದೂ ಇಲ್ಲ”.
ನನಗೂ ಪೆನ್ ಡ್ರೈವ್ ಗೂ ಸಂಬಂಧವಿಲ್ಲ
ಪೆನ್ ಡ್ರೈವ್ ಪ್ರಕರಣದಲ್ಲಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರ ಪಾತ್ರದ ಬಗ್ಗೆ ಆರೋಪ ಮಾಡಿರುವ ಕುರಿತು ಕೇಳಿದಾಗ “ನನಗೂ ಈ ಪ್ರಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನನ್ನ ಹೆಸರನ್ನು ಪ್ರಸ್ತಾಪ ಮಾಡದಿದ್ದರೆ ಅವರಿಗೆಲ್ಲ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಸಹ ಈ ವಿಚಾರದಲ್ಲಿ ನೈತಿಕತೆಯ ಗಡಿ ಮೀರಬಾರದು. ಉಪ್ಪು ತಿಂದವನು ನೀರು ಕುಡಿಯಬೇಕು ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ”.
ಯಾರ ಜೊತೆಯೂ ಮಾತನಾಡಿಲ್ಲ
ಡಿ.ಕೆ.ಶಿವಕುಮಾರ್, ದೇವರಾಜೇಗೌಡ ಮತ್ತು ಶಿವರಾಮೇಗೌಡ ಅವರ ನಡುವಿನ ಸಂಭಾಷಣೆ ಆಡಿಯೋ ಬಿಡುಗಡೆ ಬಗ್ಗೆ ಕೇಳಿದಾಗ “ನಾನು ಯಾರ ಜೊತೆಯೂ ಮಾತನಾಡಬಾರದ್ದು ಮಾತನಾಡಿಲ್ಲ. ಯಾರಿಗೂ ನಾನು ಜಿಪಿಎ ಕೊಟ್ಟಿಲ್ಲ. ನಾನೊಬ್ಬ ರಾಜಕಾರಣಿ, ನನ್ನನ್ನು ಭೇಟಿ ಮಾಡಲು ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಕಾರ್ಯಕರ್ತರೂ ಬರುತ್ತಾರೆ. ಅವರು ಬಿಜೆಪಿಯವರು, ನನ್ನ ಭೇಟಿಗೆ ಸಮಯ ಕೇಳಿದ್ದರು. ನಾನು ಕೊಡಲಿಲ್ಲ. ಅರ್ಧ ನಿಮಿಷವೂ ನಾನು ಯಾರ ಬಳಿಯೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರ ಪ್ರಜ್ಞೆ ಇದೆ. ಈ ವಿಚಾರದ ಗಂಭೀರತೆಯೂ ನನಗೆ ಅರ್ಥವಾಗುತ್ತದೆ.
ಡಿ.ಕೆ.ಶಿವಕುಮಾರ್ ಜೈಲಿಗೆ ಹೋದಾಗ ನಾನು ಅವರ ತಾಯಿಯನ್ನು ಸಾಂತ್ವನ ಮಾಡಿದ್ದೆ, ಆದರೆ ಅವರು ನನ್ನ ತಂದೆಗೆ ನೋವು ನೀಡುವುದು ಸರಿಯೇ ಎಂದು ಕುಮಾರಸ್ವಾಮಿ ಹೇಳಿರುವ ಬಗ್ಗೆ ಕೇಳಿದಾಗ, “ನನಗೆ ಅವರ ಪರಿಸ್ಥಿತಿ ಬಗ್ಗೆ ಅನುಕಂಪವಿದೆ. ನಾನು ಈ ವಿಚಾರದಲ್ಲಿ ಯಾರ ಬಗ್ಗೆಯೂ ಅಂದೂ ಮಾತನಾಡಿಲ್ಲ, ಇಂದೂ ಮಾತನಾಡುವುದಿಲ್ಲ” ಎಂದರು.
ಸರ್ಕಾರಕ್ಕೆ ಒಂದು ವರ್ಷ: ತೃಪ್ತಿದಾಯಕ ಆಡಳಿತ ನೀಡಿದ್ದೇವೆ
ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಬಗ್ಗೆ ಕೇಳಿದಾಗ “ಎಲ್ಲರ ಸಹಕಾರದಿಂದ ರಾಜ್ಯದ ಜನರಿಗೆ ತೃಪ್ತಿದಾಯಕ ಆಡಳಿತ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳ ಜತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ತೃಪ್ತಿಯಿದೆ. ಜನರ ವಿಶ್ವಾಸವನ್ನು ಗಳಿಸಿ ಒಂದು ವರ್ಷ ಪೂರೈಸಿದ್ದೇವೆ ಎಂದರು.
ಲೋಕಸಭೆ ಚುನಾವಣೆ ಬಂದ ಕಾರಣಕ್ಕೆ ಒಂದಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿದ್ದವು. ಇವು ಕಾರ್ಯಗತಗೊಳ್ಳಬೇಕು, ಟೆಂಡರ್ ಗಳನ್ನು ಕರೆಯಲು ಸಜ್ಜಾಗಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಅವಕಾಶ ಕೊಟ್ಟಿರುವ ರಾಜ್ಯದ ಜನತೆಗೆ, ನಮಗೆ ಸಹಕಾರ ನೀಡಿರುವ ಅಧಿಕಾರಿಗಳಿಗೆ, ಮಾಧ್ಯಮಗಳಿಗೆ ಹೃದಯ ಪೂರ್ವಕ ವಂದನೆಗಳು.
ವಿರೋಧ ಪಕ್ಷಗಳು ನಮ್ಮ ಬಗ್ಗೆ ಟೀಕೆಗಳನ್ನು ಮಾಡುತ್ತವೆ, ಅವುಗಳನ್ನು ಸ್ವೀಕರಿಸಿ ಮುನ್ನಡೆಯಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ಮೊದಲನೇ ದಿನದಿಂದಲೇ ಟೀಕೆ ಪ್ರಾರಂಭ ಮಾಡಿದರು. ಅತ್ತೆ ಸೊಸೆಗೆ ಜಗಳ ತಂದಿಟ್ಟರು, ಒಂದು ಕಾಳು ಅಕ್ಕಿ ಕಡಿಮೆ ಕೊಟ್ಟರೂ ಸುಮ್ಮನೆ ಇರುವುದಿಲ್ಲ ಎಂದು ಹೇಳಿದರು. ಈ ಟೀಕೆಗಳಿಗೆಲ್ಲಾ ನಾವು ಉತ್ತರ ಕೊಟ್ಟಿದ್ದೇವೆ. ಜನರೂ ಉತ್ತರ ಕೊಡುತ್ತಾರೆ ಎನ್ನುವ ಆತ್ಮವಿಶ್ವಾಸ ನನಗಿದೆ” ಎಂದು ಹೇಳಿದರು.