ಬೆಂಗಳೂರು: ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್ ದೊರೆತಿದೆ. ತಾತ್ಕಾಲಿಕ ರಿಲೀಫ್ ನೀಡಿದ್ದ 42 ನೇ ಎಸಿಎಂಎಂ ಕೋರ್ಟ್ ಇದೀಗ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದೆ. ಇಂದು ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಕೋರಿ ಶಾಸಕ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿದೆ. ಜಾಮೀನು ಮಂಜೂರು ಮಾಡಿದೆ. ವಿಶೇಷ ತನಿಖಾ ದಳ ವಕೀಲರು ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಇದೀಗ ರೇವಣ್ಣಗೆ ಈ ಪ್ರಕರಣದಲ್ಲಿ ಭಾರಿ ರಿಲೀಫ್ ದೊರೆತಿದೆ. ಎಸ್ಐಟಿ ಪರ ಜಾಯ್ನಾ ಕೊಠಾರಿ ಇಂದು ವಾದ ಮಂಡಿಸಿದರು.
ಐದು ಲಕ್ಷದ ಶ್ಯೂರಿಟಿ ನೀಡುವಂತೆ ಕೋರ್ಟ್ ಜಾಮೀನು ಮಂಜೂರು ವೇಳೆ ಆದೇಶ ನೀಡಿತ್ತು. ಮಧ್ಯಂತರ ಆದೇಶದ ವೇಳೆ ಸಲ್ಲಿಕೆಯಾಗಿದ್ದ ಶ್ಯೂರಿಟಿ ಪರಿಗಣಿಸುವಂತೆ ರೇವಣ್ಣ ಪರ ವಕೀಲರು ಇದೇ ವೇಳೆ ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನು ಕೋರ್ಟ್ ಪುರಸ್ಕರಿಸಿದೆ.
ಪ್ರೊ.ರವಿವರ್ಮ ಕುಮಾರ್ ಎಸ್‌ಪಿಪಿ
ಇನ್ನೊಂದೆಡೆ ಹಾಸನ ಪೆನ್ ಡ್ರೈವ್ ಕೇಸ್‌ಗೆ ಸಂಬಂಧಪಟ್ಟಂತೆ ಸರ್ಕಾರ ಬಲಿಷ್ಟ ವಕೀಲರ ತಂಡ ರಚಿಸಿದೆ. ಇದೀಗ ಎಸ್‌ಪಿಪಿಯಾಗಿ ಹಿರಿಯ ವಕೀಲ ಪ್ರೊಫೆಸರ್ ರವಿ ವರ್ಮಾ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ರವಿ ವರ್ಮ ಕುಮಾರ್ ಹೈಕೋರ್ಟ್ ಹಿರಿಯ ವಕೀಲರಾಗಿದ್ದಾರೆ. ಪ್ರಕರಣ ಸಂಬಂಧ ಎಸ್‌ಐಟಿ ಪರ ವಾದಿಸಿಲು ರಾಜ್ಯ ಸರ್ಕಾರ ಈಗಾಗಲೇ ಮೂವರನ್ನು ಎಸ್‌ಪಿಪಿಯಾಗಿ ಈ ಹಿಂದೆ ನೇಮಕ ಮಾಡಿತ್ತು. ಇದೀಗ ಹೈಕೋರ್ಟ್‌ನಲ್ಲಿ ಪ್ರಕರಣ ವಾದ ಮಂಡಿಸಲು ರವಿವರ್ಮ ಕುಮಾರ್ ಅವರನ್ನು ನೇಮಕ ಮಾಡಿದೆ.
ಹೈಕೋರ್ಟ್ ಮೊರೆ ಹೋದ ಎಸ್ಐಟಿ
ಇದೇ ವೇಳೆ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಂಜೂರಾಗಿರುವ ಜಾಮೀನು ರದ್ದುಪಡಿಸಬೇಕು ಎಂದು ಕೋರಿ ವಿಶೇಷ ತನಿಖಾದಳ ಹೈಕೋರ್ಟ್ ಮೆಟ್ಟಿಲೇರಿದೆ. ಜನಪ್ರತಿನಿಧಿ ಕೋರ್ಟ್ ನೀಡಿದ ಜಾಮೀನು ರದ್ದುಪಡಿಸುವಂತೆ ಮನವಿ ಮಾಡಿದೆ.
ದೇವರಾಜೇಗೌಡಗೆ ನ್ಯಾಯಾಂಗ ಬಂಧನ
ಈ ಬೆಳವಣಿಗೆ ಮಧ್ಯೆ ವಕೀಲ ದೇವರಾಜೇಗೌಡ ಅವರ ಎಸ್ಐಟಿ ಕಸ್ಟಡಿ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ದೇವರಾಜೇಗೌಡರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ದೇವರಾಜೇಗೌಡರನ್ನು 14 ದಿನಗಳ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ್ದಾರೆ.
ಹಾಸನದ 5ನೇ ಹೆಚ್ಚುವರಿ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.
ಮೇ 10 ರಾತ್ರಿ ದೇವರಾಜೇಗೌಡರನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಬಳಿಕ ಹಾಸನಕ್ಕೆ ಕರೆದೊಯ್ಯಲಾಗಿತ್ತು. ಪೆನ್‌ಡ್ರೈವ್ ಹಂಚಿಕೆ ಕೇಸ್‌ನಲ್ಲಿ ವಿಚಾರಣೆಗಾಗಿ ಎಸ್‌ಐಟಿ ವಶಕ್ಕೆ ಪಡೆದಿತ್ತು. ಕಳೆದ ಮೂರು ದಿನಗಳಿಂದ ಎಸ್ ಐ ಟಿ ತನ್ನ ಕಸ್ಟಡಿಗೆ ತೆಗೆದುಕೊಂಡಿತ್ತು.
ಭಾನುವಾರ ದೇವರಾಜೇಗೌಡ ಮತ್ತು ಶಿವರಾಮೇಗೌಡ ನಡುವೆ ನಡೆದಿದೆಯೆನ್ನಲಾದ ಮಾತುಕತೆ ಆಡಿಯೋ ವೈರಲ್ ಆಗಿತ್ತು. ಇದೀಗ ಶಿವರಾಮೇಗೌಡ ದೇವರಾಜೇಗೌಡ ವಿರುದ್ದ ಕೂಡ ವಾಗ್ದಾಳಿ ಮಾಡಿದ್ದಾರೆ. ಈ ಕುರಿತು ಪ್ರಶ್ನಿಸಿದ್ದಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಗರಂ ಆಗಿದ್ದಾರೆ. , ನೀವು ಮಾತನಾಡಬಹುದು ಯಾರು ಬೇಕಾದ್ರೂ ಮಾತನಾಡಬಹುದು. ನಾನು ಯಾರ ಹತ್ರನೂ ಮಾತನಾಡಿಲ್ಲ.ಯಾರಿಗೂ ನಾನು ಏನೂ ಕೊಟ್ಟಿಲ್ಲ. ನಾನು ರಾಜಕಾರಣಿ. ನನ್ನ ಭೇಟಿ ಮಾಡಲು ನೂರಾರು ಜನ ಬರ್ತಾರೆ
ಬಿಜೆಪಿ, ಆಫೀಸರ್, ನನ್ನ ಪಾರ್ಟಿಯವರು ಬರ್ತಾರೆ. ಬಂದು ಏನೇನೋ ಮಾಹಿತಿ ಕೊಡ್ತಾರೆ. ಟೈಂ ಕೇಳ್ತಾರೆ ಮಾತಾಡಬೇಕು ಅಂತ. ದೇವರಾಜೇಗೌಡ ಬಿಜೆಪಿಯವರೇ. ಅವರು ಭೇಟಿ ಮಾಡಬೇಕು ಅಂದರೂ ನಾನು ಟೈಂ ಕೊಟ್ಟಿಲ್ಲ. ಅರ್ಧ ನಿಮಿಷವೂ ನಾನು ಮಾತನಾಡಿಲ್ಲ. ನನಗೂ ರಾಜಕೀಯ ಹಾಗೂ ವ್ಯವಹರದ ಪ್ರಜ್ಞೆ ಇದೆ. ಜೊತೆಗೆ ಗಂಭೀರತೆ ಕೂಡ ಇದೆ. ದಯವಿಟ್ಟು ಈ ಸುದ್ದಿಯನ್ನಾ ಇನ್ನೊಂದು ಬಾರಿ ಕೇಳಬೇಡಿ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.