ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ತಮ್ಮ ಮೌನ ಮುರಿದಿದ್ದಾರೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಶೀಘ್ರವಾಗಿ ಬಂದು ಎಸ್ಐಟಿ ವಿಚಾರಣೆ ಎದುರಿಸಲಿ ಎಂದು ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ತನಿಖೆ ಎದುರಿಸಿದರೆ ಒಳ್ಳೆಯದು. ಇದು ನನ್ನ ಅಭಿಪ್ರಾಯ ಎಂದು ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಡಿಯೋ ವೈರಲ್ ವಿವಾದ
ಇದೇ ವೇಳೆ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಮಧ್ಯೆ ನಡೆದಿದೆಯೆನ್ನಲಾದ ಮಾತುಕತೆಯ ಆಡಿಯೋ ವೈರಲ್ ಆಗಿರುವ ಕುರಿತಂತೆ ಕೂಡ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಆಡಿಯೋ ಸಂದೇಶವನ್ನು ನಾನು ಕೂಡ ಕೇಳಿದ್ದೇನೆ. ಭಿನ್ನಾಭಿಪ್ರಾಯ ಏನು ಕೂಡ ಇರಬಹುದು. ಆದರೂ ಒಬ್ಬರ ಸಾವು ಬಯಸುವುದು ಸಂಸ್ಕೃತಿಯಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಚುನಾವಣೆ ವೇಳೆ ಕೆಲವು ಬಾರಿ ಹೊಂದಾಣಿಕೆ ಮಾಡಲಾಗುತ್ತದೆ. ಅದೂ ಬಹಿರಂಗವಾಗುತ್ತದೆ. ಇದು ಸಾಮಾನ್ಯ ಬೆಳವಣಿಗೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ತಮ್ಮ ಪುತ್ರನ ರಾಜಕೀಯ ಬೆಳವಣಿಗೆಗಾಗಿ ಈ ರೀತಿ ಯೋಚನೆ ಮಾಡಿದ್ದಾರೆ ಎಂಬ ವರದಿಗಳನ್ನು ನಿಖಿಲ್ ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ. ಕುಮಾರಸ್ವಾಮಿ ಅವರು ಏಂದಿಗೂ ಆ ರೀತಿ ಯೋಚನೆ ಮಾಡಿರಲಿಲ್ಲ. ಕುಮಾರಸ್ವಾಮಿ ಅವರು ರಾಜ್ಯದ ಜನರ ಬಗ್ಗೆ ಸದಾ ಕಾಲ ಚಿಂತೆ ಮಾಡುತ್ತಾರೆ. ಯಾವ ರೀತಿಯ ಹೊಂದಾಣಿಕೆ ಸಂಸ್ಕೃತಿ ನಮ್ಮ ಬಳಿ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅಶ್ಲೀಲ ವಿಡಿಯೋ
ವೈರಲ್ ಆಗಿರುವ ಅಶ್ಲೀಲ ವಿಡಿಯೋ ಪ್ರಕರಣ ಕುರಿತಂತೆ ನಿಖಿಲ್ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಸಂತ್ರಸ್ತೆಯರ ಮುಖ ಬ್ಲರ್ ಮಾಡದೆ ವಿಡಿಯೋ ವೈರಲ್ ಮಾಡಲಾಗಿದೆ. ರಾಜಕಾರಣಕ್ಕೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ವಿಡಿಯೋ ವೈರಲ್ ಮಾಡಿದ್ದು ಯಾರು. ಇಡೀ ರಾಜ್ಯಕ್ಕೆ ಇದನ್ನು ತೋರಿಸಿದವರು ಯಾರು. ಇದರಲ್ಲಿ ಯಾರ ಪಾತ್ರ ಇದೆ ಎಂದು ನಿಖಿಲ್ ಪ್ರಶ್ನಿಸಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಕೂಡ ಇದೇ ಎಂದು ನಿಖಿಲ್ ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ತನಿಖೆ ಅತ್ಯಂತ ಪಾರದರ್ಶಕವಾಗಿ ನಡೆಯಬೇಕು ಎಂದು ನಿಖಿಲ್ ಆಗ್ರಹಿಸಿದ್ದಾರೆ.
ಜೆಡಿಎಸ್ ಪ್ರತಿಭಟನೆ
ಇದೇ ವೇಳೆ ಜೆಡಿಎಸ್ ವರಿಷ್ಟ ದೇವೇಗೌಡ ವಿರುದ್ಧ ಅಸಭ್ಯವಾಗಿ ಮಾತನಾಡಿರುವ ಶಿವರಾಮೇಗೌಡ ವರ್ತನೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಜೆಡಿಎಸ್ ಕಾರ್ಯಕರ್ತರು ನಡೆಸಿದ ಯತ್ನ ವಿಫಲಗೊಳಿಸಲಾಗಿದೆ.
ಇದೇ ವೇಳೆ ಶಿವರಾಮೇಗೌಡ ಹೇಳಿಕೆಯನ್ನು ಜೆಡಿಎಸ್ ಮುಖಂಡ ಜವರಾಯಿಗೌಡ ಖಂಡಿಸಿದ್ದಾರೆ. ಈ ಹಿಂದೆ ದೇವೇಗೌಡ ಕುಟುಂಬ ಮಾಡಿದ್ದ ಉಪಕಾರ ಮರೆತು ಹೋಯಿತ್ತಾ ಎಂದು ಜವರಾಯಿಗೌಡ ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ಇರುವ ಶಿವರಾಮೇಗೌಡ ಮನೆ ಮೇಲೆ ಕೆಲವರು ಮೊಟ್ಟೆ ಎಸೆಯಲು ಯತ್ನಿಸಿದ್ದಾರೆ. ಮೊಟ್ಟೆ ಎಸೆದು ಪರಾರಿಯಾದವರಿಗೆ ಪೊಲೀಸರು ಹುಡುಕಾಟ ಆರಂಭಸಿದ್ದಾರೆ.