Search

DROUGHT RELIEF: ಸರಕಾರ ವರ್ಷಾಚರಣೆಯಲ್ಲಿ ಸಂಭ್ರಮಿಸುತ್ತಿದೆ!; ರೈತರ ಬರ ಪರಿಹಾರ ಹಣ ಬ್ಯಾಂಕ್ ಸಾಲಕ್ಕೆ ಜಮೆ ಆಗುತ್ತಿದೆ!!: ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಬೆಂಗಳೂರು: ರಾಜ್ಯ ಸರ್ಕಾರ ವರ್ಷದ ಸಂಭ್ರಮದಲ್ಲಿದೆ. ಆದರೆ, ಕೇಂದ್ರ ಸರ್ಕಾರ ನೀಡಿರುವ ಬೆಳೆ ಪರಿಹಾರ ಹಣವು ಸಾಲಕ್ಕೆ ಜಮೆ ಆಗುತ್ತಿದೆ. ಇದು ಈ ಸರ್ಕಾರದ ವೈಖರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ರೈತರು ಬರದಿಂದ ಕಂಗೆಟ್ಟು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಈ ಸರ್ಕಾರದ ಕೊಡುಗೆ ಏನೂ ಇಲ್ಲ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಆರಂಭ ಆಗಿವೆ. ಬರ ಪರಿಹಾರ ಹಣವನ್ನು ಸಾಲಕ್ಕೆ ವಜಾ ಮಾಡ್ತಿದ್ದಾರೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಹಲವು ಇಲಾಖೆಗಳಲ್ಲಿ ವೇತನ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಕಳೆದ ಒಂದು ವರ್ಷದಲ್ಲಿ ಎಷ್ಟು ಮಂತ್ರಿಗಳು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ. ಸಮಸ್ಯೆಗಳ ಬಗ್ಗೆ ಏನು ಸೂಚನೆಗಳನ್ನು ಕೊಟ್ಟಿದ್ದಾರೆ. ಜನರ ಕಷ್ಟಗಳನ್ನು ಬಗೆಹರಿಸಿದ್ದಾರೆಯೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಮುಖ್ಯಮಂತ್ರಿಗಳು ಸಭೆ ನಡೆಸಿ ಅಧಿಕಾರಿಗಳ ಮೇಲೆ ವಾಗ್ದಾಳಿ ನಡೆಸಿದ್ದರು. ಆದರೆ, ಜನರ ಕೆಲಸಗಳು ಏನಾಗಿವೆ? ಅಭಿವೃದ್ಧಿ ಕೆಲಸಗಳು ಎಲ್ಲಾದರೂ ಆಗಿವೆಯೇ? ಕೇವಲ ಗ್ಯಾರಂಟೀಗಳ ಹೆಸರು ಹೇಳಿಕೊಂಡು ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.

ರಾಜ್ಯದ ನೀರಾವರಿ ಯೋಜನೆಗಳ ಪರಿಸ್ಥಿತಿ ಏನಾಗಿದೆ? ರಸ್ತೆಯ ಪರಿಸ್ಥಿತಿ ಹೇಗಾಗಿದೆ? ಕಳೆದ ಒಂದು ವರ್ಷದಿಂದ ಬ್ರ್ಯಾಂಡ್ ಬೆಂಗಳೂರು ಏನಾಗಿದೆ? ಮಳೆ ಬಂದು ಬೆಂಗಳೂರಿನ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಈಗ ಕಣ್ಣಾರೆ ನೋಡುತ್ತಿದ್ದೇವೆ. ಎರಡು ದಿನ ಸುರಿದ ಮಳೆಗೆ ಬೆಂಗಳೂರು ಜನರು ನರಕ ನೋಡುತ್ತಿದ್ದಾರೆ. ಮನೆಗಳಿಗೆ ಬೀಗ ಹಾಕಿ ಹೋಟೆಲ್ ಗೆ ಹೋಗಿ ಜೀವನ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಅತ್ಯಂತ ಮೌಲ್ಯವಾದ ದಿನಗಳನ್ನು ನಾವು ಒಂದು ವರ್ಷದಲ್ಲಿ ಕಳೆದುಕೊಂಡಿದ್ದೇವೆ. ರಾಜ್ಯದ ಅಭಿವೃದ್ಧಿ ಹಿಮ್ಮುಖವಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.

35,471 ಕಡತಗಳು ವಿಲೇವಾರಿ ಬಾಕಿ

ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇಲಾಖೆಗಳ ಕೆಲಸ ನೋಡಿದರೆ ಅರ್ಥ ಆಗುತ್ತದೆ. ಎಂಟು ಪ್ರಮುಖ ಇಲಾಖೆಗಳಲ್ಲಿ 35,471 ಕಡತಗಳು ವಿಲೇವಾರಿ ಆಗಿಲ್ಲ ಎಂಬ ವರದಿಯನ್ನು ಓದಿದೆ. ಇದು ಸರ್ಕಾರದ ಸಾಧನೆಯೇ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮಾಜಿ ಮುಖ್ಯಮಂತ್ರಿಗಳು.

ವರ್ಗಾವಣೆಗೆ CSR ಫಂಡ್ ಸಂಜ್ಞೆಯಾಗಿ ಬಳಕೆ

ಚುನಾವಣೆ ನಂತರ ಓರ್ವ ಮಂತ್ರಿಯಾದರೂ ಜಿಲ್ಲೆಗಳಿಗೆ ಭೇಟಿ ನೀಡಿದ್ದೀರಾ? ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕೆಲಸ ಮಾಡಿಸಿದ್ದಾರಾ? ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ನಾಡಿನ ಅಭಿವೃದ್ಧಿಗೆ ಪೂರಕವಾದ ಕೆಲಸ ಆಗಿಲ್ಲ. ಸರ್ಕಾರದ ಐದು ವರ್ಷದ ಆಡಳಿತಾತ್ಮಕ ಮಂಜೂರಾತಿ ಮುಂದುವರಿಸಿದ್ದು ಬಿಟ್ಟರೆ ಏನೂ ಆಗಿಲ್ಲ. ವರ್ಗಾವಣೆ ದಂಧೆಯೂ ನಿಂತಿಲ್ಲ. ವರ್ಗಾವಣೆಗೆ ಸಿ ಎಸ್ ಆರ್ ಫಂಡ್ ಹೆಸರನ್ನು ಸಂಜ್ಞೆಯಾಗಿ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದರು.

ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.

More News

You cannot copy content of this page