ಮೈಸೂರು: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯಲ್ಲಿ ಭೀಕರ ಹತ್ಯೆ ಸಂಭವಿಸಿದೆ. ಪತಿಯೇ ಪತ್ನಿ ಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಗೀಡಾದವಳನ್ನು ವಿದ್ಯಾ ಎಂದು ಗುರುತಿಸಲಾಗಿದೆ.
ಕಾಂಗ್ರೆಸ್ ನಾಯಕಿ ವಿದ್ಯಾ
ರಾಜಕೀಯ ಮತ್ತು ಸಿನೆಮಾ ರಂಗದಲ್ಲಿ ವಿದ್ಯಾ ಗುರುತಿಸಿಕೊಂಡಿದ್ದಳು. ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾ ಸೇವೆ ಸಲ್ಲಿಸುತ್ತಿದ್ದಳು. ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ಸಂಪರ್ಕಹೊಂದಿದ್ದಳು ಎಂದು ವರದಿಯಾಗಿದೆ.
ಸಿನಿಮಾದಲ್ಲಿ ಕೂಡ ಅಭಿನಯ
ಪತಿ ನಂದೀಶ್ ಮತ್ತು ವಿದ್ಯಾಳ ಮಧ್ಯೆ ಕಳೆದ ಹಲವು ತಿಂಗಳಿನಿಂದ ಕೌಟುಂಬಿಕ ಕಲಹ ಏರ್ಪಟಿತ್ತು ಎಂದು ವರದಿಯಾಗಿದೆ. ಇದು ವಿಕೋಪಕ್ಕೆ ಹೋಗಿ ಹತ್ಯೆಯಲ್ಲಿ ಕೊನೆಗೊಂಡಿದೆ. ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ತುರಗನೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಭಜರಂಗಿ, ವಜ್ರಕಾಯ ಸಿನಿಮಾದಲ್ಲೂ ನಟಿಸಿದ್ದ ವಿದ್ಯಾ ಬಣ್ಣಹಚ್ಚಿದ್ದರು. ಹತ್ಯೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರೇವ್ ಪಾರ್ಟಿ- ಪರಮೇಶ್ವರ್ ಪ್ರತಿಕ್ರಿಯೆ
ಇನ್ನೊಂದೆಡೆ ಬೆಂಗಳೂರು ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಸಂಬಂಧ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಕಾನೂನು ಚೌಕಟ್ಟಿನ ಅಡಿಯಲ್ಲಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.ಡ್ರಗ್ಸ್ ಪಿಡುಗು ನಿರ್ಮೂಲನೆಗೆ ಪೊಲೀಸರು ಹಲವು ಕ್ರಮ ತೆಗೆದುಕೊಂಡಿದ್ದಾರೆ. ಆದರೂ ಇಂತಹ ಪಾರ್ಟಿಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರು ನಡೆಸಿದ ದಾಳಿ ವೇಳೆ ಮಾದಕ ದ್ರವ್ಯ ಪತ್ತೆಯಾಗಿದೆ. ಎಲ್ಲ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಕೆ ತಡೆಗಟ್ಟುವ ಸಂಬಂಧ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.