ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಕಾರ್ಯ ವೈಖರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಎಸ್‌ಐಟಿ ತನಿಖೆ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಪ್ರಕರಣ ಸಂಬಂಧ ಸಾಕ್ಷ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಕಣ್ಣ ಮುಂದೆ ಇರುವ ಸಾಕ್ಷ್ಯಗಳು ಸಾಕಾಗುವುದಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೂರವಾಣಿ ಮಾತುಕತೆ ನಡೆಸಿದ್ದಾರೆ. ಇದನ್ನು ಸಾಕ್ಷ್ಯವಾಗಿ ಪರಿಗಣಿಸಲು ಸಾಧ್ಯ ಇಲ್ಲವೇ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ಮಾತುಕತೆ ನಡೆಸಿರುವುದನ್ನು ಡಿ ಕೆ ಶಿವಕುಮಾರ್ ಈಗಾಗಲೇ ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಹೊಸ ಸಾಕ್ಷ್ಯ ಬೇಕೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ಅಮಾಯಕರಿಗೆ ಎಸ್ಐಟಿ ಕಿರುಕುಳ
ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಮಾಯಕರಿಗೆ ಕಿರುಕುಳ ನೀಡುತ್ತಿದೆ. ಇಂದು ಕೂಡ 7 ಮಂದಿಯನ್ನು ಎಸ್ಐಟಿ ಬಂಧಿಸಿದೆ. ಅವರಿಗೂ ಪ್ರಕರಣಕ್ಕೂ ಏನು ಸಂಬಂಧ ಎಂದು ಕುಮಾರಸ್ವಾಮಿ ಕೇಳಿದ್ದಾರೆ. ಪ್ರಕರಣದ ತನಿಖೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಕೆಲವರಿಗೆ ಕರೆ ಮಾಡಿ ದಿನವಿಡಿ ಹಿಂಸೆ ನೀಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಜೆಡಿಎಸ್ ಈ ಹಿಂದೆ ಆಗ್ರಹಿಸಿತ್ತು.
ಪರಮೇಶ್ವರ್ ಪ್ರತಿಕ್ರಿಯೆ
ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಸಂಬಂಧ ಎಸ್ಐಟಿ ವಿದೇಶಾಂಗ ಇಲಾಖೆಗೆ ಪತ್ರ ಬರೆದಿರುವುದಕ್ಕೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಈ ಸಂಬಂಧ ಪತ್ರ ಬರೆದಿದ್ದಾರೆ. ಪ್ರಜ್ವಲ್ ವಿರುದ್ಧ ವಾರಂಟ್ ಹೊರಡಿಸಲಾಗಿದೆ. ಇದರ ಆಧಾರದಲ್ಲಿ ಎಸ್ಐಟಿ ವಿದೇಶಾಂಗ ಇಲಾಖೆಗೆ ಪತ್ರ ಬರೆದಿದೆ ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಪಾಸ್‌ಪೋರ್ಟ್ ರದ್ದುಪಡಿಸುವ ಅಧಿಕಾರ ಇದೆ. ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿ ಮನವಿ ವಿಚಾರ
ಪ್ರಜ್ವಲ್ ರೇವಣ್ಣ ತಕ್ಷಣ ಸ್ವದೇಶಕ್ಕೆ ಬಂದು ವಿಚಾರಣೆ ಎದುರಿಸುವಂತೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇದು ಅವರು ವೈಯಕ್ತಿಕವಾಗಿ ಮಾಡಿರುವ ಮನವಿ. ಕೌಟುಂಬಿಕ ವಿಷಯವಾಗಿದೆ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಎಸ್ಐಟಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಮಾಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಫೋನ್ ಕದ್ದಾಲಿಕೆಯಂತಹ ಕೆಲಸದಲ್ಲಿ ರಾಜ್ಯ ಸರ್ಕಾರ ಶಾಮೀಲಾಗಿಲ್ಲ. ಇಂತಹ ಕೆಲಸ ಮಾಡುವುದಿಲ್ಲ ಎಂದು ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ವೈರಲ್ ಸಂಭಾಷಣೆ ಕುರಿತು ಅಗತ್ಯ ಬಿದ್ದರೆ ಎಸ್ಐಟಿ ತನಿಖೆ ನಡೆಸಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.