ಬೆಂಗಳೂರು: ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶ ಸೇರಿದಂತೆ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ರಾಜ್ಯದಲ್ಲಿ ಇನ್ನೂ ಮೂರು ದಿನ ಮುಂಗಾರು ಪೂರ್ವ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಇದೆ.ಕರಾವಳಿ, ಮಲೆನಾಡಿನಲ್ಲಿ ಮಳೆ ಅಲರ್ಟ್ ಘೋಷಿಸಲಾಗಿದೆ.
ಬಯಲು ಸೀಮೆ ಜನರಲ್ಲಿ ಸಂತ
ರಾಜ್ಯದಲ್ಲಿ ಉತ್ತಮ ಮುಂಗಾರು ಪೂರ್ವ ಮಳೆ ಬಯಲು ಸೀಮೆಯ ಜನರಲ್ಲಿ ಹರ್ಷದ ಹೊನಲು ಹರಿಸಿದೆ. ಬಯಲು ಸೀಮೆಯಲ್ಲಿ ಮಳೆಯಾಗುತ್ತಿದೆ.
ನೀರಿಗೆ ಹಾಹಾಕಾರ ಪಡುತ್ತಿದ್ದ ಬಯಲು ಸೀಮೆ ಜನ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ವಿ.ಯರದಕೆರೆ ಗ್ರಾಮದ ದೊಡ್ಡಮ್ಮ ದೇವಿ ಕೆರೆ ಮೊದಲ ಮಳೆಗೆ ಕೋಡಿ ಬಿದ್ದಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕು ಹೇಮಗಿರಿ, ಕೆರೆಸಂತೆ ಭಾಗದಲ್ಲಿ ಉತ್ತಮ ಮಳೆ ಮುಂದುವರಿದಿದೆ.
ಚಿಕ್ಕಮಗಳೂರಿನ ಬಯಲು ಸೀಮೆಯಲ್ಲಿ ಕೂಡ ಮಳೆ ಅಬ್ಬರ ಮುಂದುವರಿದಿದೆ.
ಸಿಡಿಲಿಗೆ ಮೊಬೈಲ್ ಸ್ಫೋಟ
ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಸಿಡಿಲು ಬಡಿದ ಪರಿಣಾಮ ಜೇಬಿನಲ್ಲಿದ್ದ ಮೊಬೈಲ್ ಸ್ಫೋಟಗೊಂಡಿದ್ದು ಕುರಿಗಾಹಿಯೊಬ್ಬ ಮೃತಪಟ್ಟಿದ್ದಾನೆ. ಗುರುಮಠಕಲ್ ತಾಲೂಕಿನ ರಾಂಪುರದಲ್ಲಿ ಈ ಘಟನೆ ಸಂಭವಿಸಿದೆ.
ಕುರಿಗಾಹಿ ಚಂದಪ್ಪ (55) ಮೃತ ದುರ್ದೈವಿಯಾಗಿದ್ದಾನೆ.
ಚಾಮರಾಜನಗರದಲ್ಲಿ ಭಾರಿ ಮಳೆ
ರಾಜ್ಯದ ಚಾಮರಾಜ ನಗರದಲ್ಲಿ ಭಾರಿ ಮಳೆ ಮುಂದುವರಿದಿದೆ. ರಸ್ತೆಗಳು ಜಲಾವೃತವಾಗಿದ್ದು-ವಾಹನ ಸವಾರರು ಪರದಾಟುತ್ತಿದ್ದಾರೆ.
ಬೆಟ್ಟದ ತಪ್ಪಲಿನಲ್ಲಿ ಮಳೆ ನೀರು ನದಿಯಂತೆ ಹರಿದಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಾರಿ ಮಳೆಯಾಗುತ್ತಿದೆ.
ಗುಂಡ್ಲುಪೇಟೆ, ಕೊಳ್ಳೇಗಾಲದಲ್ಲಿ ಮಳೆ ಮುಂದುವರಿದಿದೆ. ಹೆಚ್ಚು ಮಳೆ ಬಿದ್ದ ಜಿಲ್ಲೆಗಳಲ್ಲಿ ಚಾಮರಾಜನಗರ 4ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯ ಪ್ರಮಾಣ ಇಂತಿದೆ
ಬಳ್ಳಾರಿ ಜಿಲ್ಲೆಯಲ್ಲಿ 43 ಮಿ.ಮೀ. ಮಳೆ
ರಾಮನಗರ ಜಿಲ್ಲೆಯಲ್ಲಿ 43.5 ಮಿ.ಮೀ ಮಳೆ
ಶಿವಮೊಗ್ಗದಲ್ಲಿ 56 ಮಿ.ಮೀ. ಮಳೆ
ಬೆಂಗಳೂರು ನಗರ-58.5 ಮಿ.ಮೀ. ಮಳೆ
ಬೆಂ. ಗ್ರಾಮಾಂತರ- 59.5 ಮಿ.ಮೀ. ಮಳೆ
ಮಂಡ್ಯ ಜಿಲ್ಲೆಯಲ್ಲಿ 60.5 ಮಿ.ಮೀ. ಮಳೆ
ಕೊಡಗು ಜಿಲ್ಲೆಯಲ್ಲಿ 64 ಮಿ.ಮೀ. ಮಳೆ
ದಾವಣಗೆರೆಯಲ್ಲಿ 74.5 ಮಿ.ಮೀ. ಮಳೆ
ತುಮಕೂರಿನಲ್ಲಿ 88.5 ಮಿ.ಮೀ. ಮಳೆ
ಉಡುಪಿಯಲ್ಲಿ 95.5 ಮಿ.ಮೀ. ಮಳೆ
ಚಿತ್ರದುರ್ಗದಲ್ಲಿ 101 ಮಿ.ಮೀ ಮಳೆ
ಹಾಸನದಲ್ಲಿ 102 ಮಿ.ಮೀ ಮಳೆ
ಚಾಮರಾಜನಗರ- 103 ಮಿ.ಮೀ. ಮಳೆ
ಮೈಸೂರಿನಲ್ಲಿ 116.5 ಮಿ.ಮೀ. ಮಳೆ
ಚಿಕ್ಕಮಗಳೂರಿನಲ್ಲಿ 122 ಮಿ.ಮೀ. ಮಳೆ
ದಕ್ಷಿಣ ಕನ್ನಡ ಜಿಲ್ಲೆ- 132.5 ಮಿ.ಮೀ. ಮಳೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ