DK SHIVAKUMAR v/s HD KUMARASWAMY: ಅಧಿಕಾರ ಸಿಗದೆ ಕುಮಾರಸ್ವಾಮಿ ಕೈ ಹೊಸಕಿಕೊಳ್ಳುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು: “ಕುಮಾರಸ್ವಾಮಿ ಅವರು ಕಿಂಗ್ ಮೇಕರ್ ಆಗುತ್ತೇನೆ ಎಂದುಕೊಂಡಿದ್ದರು. ನನ್ನ ಅಧ್ಯಕ್ಷತೆಗೆ ಜನರು 136 ಸ್ಥಾನ, ಅವರಿಗೆ 19 ಸ್ಥಾನ ನೀಡಿದ್ದಾರೆ. ಈಗ ಅಧಿಕಾರ ಸಿಗದೆ ಕೈ, ಕೈ ಹೊಸಕಿಕೊಳ್ಳುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವ್ಯಂಗ್ಯವಾಡಿದರು.

ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಡಿ.ಕೆ.ಶಿವಕುಮಾರ್ ರಾಜಿನಾಮೆ ನೀಡಲಿ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆಗೆ ಅವರು ತಿರುಗೇಟು ನೀಡಿದ್ದು ಹೀಗೆ;

“ಅಸೂಯೆಗೆ ಎಲ್ಲಾದರೂ ಮದ್ದಿದೆಯೇ? ಶಕ್ತಿ ಕಳೆದುಕೊಂಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನಾನು ರಾಜೀನಾಮೆ ಕೊಡಬೇಕು ಎಂದು ಅವರು ಆಸೆ ಪಡುವುದನ್ನು ನಾನು ತಪ್ಪು ಎಂದು ಹೇಳಲು ಆಗುತ್ತದೆಯೇ?” ಎಂದರು.

ಎಂಎಲ್ ಸಿ ಚುನಾವಣೆ ಬಗ್ಗೆ ಕೇಳಿದಾಗ “ಮೊದಲು ಶಿಕ್ಷಕ, ಪದವೀದರ ಕ್ಷೇತ್ರದ ಚುನಾವಣೆ ಮುಗಿಯಲಿ ನಂತರ ಇದರ ಬಗ್ಗೆ ಕೆಲಸ ಪ್ರಾರಂಭ ಮಾಡುತ್ತೇವೆ” ಎಂದರು.

ಇದೇ ವೇಳೆ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಗೌಡ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ ಯುವಕ- ಯುವತಿಯರಿಗೆ ಶಿವಕುಮಾರ್ ಅವರು ಅಭಿನಂದಿಸಿದರು.

More News

You cannot copy content of this page