ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಇನ್ನಷ್ಟು ಚುರುಕುಗೊಳಿಸಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳನ್ನು ಈಗಾಗಲೇ ಎನ್ಐಎ ಬಂಧಿಸಿದೆ. ಇದೇ ವೇಳೆ ಸ್ಫೋಟದ ಹಿಂದೆ ಸಹಕಾರ ನೀಡಿದ್ದ ಆರೋಪಿಗಳ ಪತ್ತೆಗೆ ಎನ್ಐಎ ಮುಂದಾಗಿದೆ. ಬೆಂಗಳೂರು ಸೇರಿದಂತೆ ದೇಶದ 11 ಕಡೆ ಎನ್‌ಐಎ ದಾಳಿ ನಡೆಸಿದೆ. ಕೊಯಮತ್ತೂರಿನಲ್ಲಿ ಪ್ರಮುಖವಾಗಿ ಶೋಧ ನಡೆಸಲಾಗಿದೆ. ಹೌಸ್ ಸರ್ಜನ್ ಆಗಿರುವ ಇಬ್ಬರ ನಿವಾಸದಲ್ಲಿ ಶೋಧ ನಡೆಸಲಾಗಿದೆ. ಬಾಂಬ್ ಬ್ಲಾಸ್ಟ್‌ಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷ್ಯಾಧಾರಗಳನ್ನು ಇದೀಗ ಕಲೆ ಹಾಕಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರಿನಲ್ಲಿ ಎನ್‌ಐಎ ದಾಳಿ ಭಯೋತ್ಪಾದನಾ ಚಟುವಟಿಕೆ ಶಂಕೆಯಲ್ಲಿ NIA ಬೆಂಗಳೂರಿನಲ್ಲಿ ಕೂಡ ದಾಳಿ ನಡೆಸಿದೆ. ಎನ್‌ಐಎ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ. ರಾಮಕೃಷ್ಣ ಹೆಗಡೆ ನಗರ, ಜೆಪಿ ನಗರದಲ್ಲಿ ಶೋಧ ನಡೆಸಲಾಗಿದೆ. ರಾಮೇಶ್ವರಂ ಕೆಫೆ ಸ್ಫೋಟ ಮಾರ್ಚ್ 1ರಂದು ವೈಟ್ ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಬೆಂಗಳೂರು ನಾಗರಿಕರನ್ನು ತಲ್ಲಣಗೊಳಿಸಿತ್ತು. ಆರಂಭದಲ್ಲಿ ರಾಜ್ಯ ಪೊಲೀಸರ ತಂಡ ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಬಳಿಕ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾಯಿಸಲಾಗಿತ್ತು. ಎನ್‌ಐಎ ಈ ಸಂಬಂದ ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಲ್ಲಿ ಶೋಧ ಕಾರ್ಯ ನಡೆಸಿತ್ತು. ಅಂತಿಮವಾಗಿ ಕೊಲ್ಕತ್ತಾದಲ್ಲಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಮುಸಾವಿರ್ ಹುಸೇನ್ ಶಾಜೀಬ್ ಮತ್ತು ಅಬ್ದುಲ್ ಮತೀನ್ ತಾಹ ಎಂಬ ಆರೋಪಿಗಳನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದ ಎನ್ಐಎ ಬಳಿಕ ಆರೋಪಿಗಳನ್ನು ಬೆಂಗಳೂರಿನಲ್ಲಿ ವಿಚಾರಣೆಗೆ ಗುರಿಪಡಿಸಿತ್ತು. ಇದೀಗ ಮತೀನ್ ನೀಡಿದ್ದ ಮಾಹಿತಿ ಆಧಾರದಲ್ಲಿ ಇಂದು ಎನ್‌ಐಎ ದೇಶದ ವಿವಿಧೆಡೆ ದಾಳಿ ನಡೆಸಿದೆ. ಮುಸಾವಿರ್ ಹುಸೇನ್ ಮತ್ತು ಅಬ್ದುಲ್ ಮತೀನ್ ಮೂಲತ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಗಳಾಗಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಸಂಭವಿಸಿದ್ದ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದರು. ದೇಶಾದ್ಯಂತ ಇದು ಭಾರೀ ಸಂಚಲನ ಸೃಷ್ಟಿಸಿತ್ತು. ರಾಜ್ಯದಲ್ಲಿ ಭದ್ರತೆ ಇಲ್ಲ. ಸರ್ಕಾರದ ವೈಫಲ್ಯ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿತ್ತು.