ಬೆಂಗಳೂರು: ನಗರದ ಹೊರವಲಯದ ಇಲೆಕ್ಟ್ರಾನಿಕ್ ಸಿಟಿ ಬಳಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ಚಿತ್ರನಟಿ ಹೇಮಾ ಭಾಗಿಯಾಗಿದ್ದಾಳೆ ಎಂಬುದು ಇದೀಗ ದೃಢಪಟ್ಟಿದೆ. ನಗರ ಪೊಲೀಸ್ ಆಯುಕ್ತ ದಯಾನಂದ್ ಈ ಸಂಬಂಧ ಹೇಳಿಕೆ ನೀಡಿದ್ದಾರೆ.
ರೇವ್ ಪಾರ್ಟಿಯಲ್ಲಿ ಹೇಮಾ ಬಿಟ್ಟರೆ ಬೇರೆ ಯಾವ ಸೆಲೆಬ್ರೆಟಿಗಳಿರಲಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ವೇಳೆ ನಟಿ ವಿಡಿಯೋ ಮಾಡಿದ ಬಗ್ಗೆ ತನಿಖೆ ಕೂಡ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಹೇಮಾ ರಕ್ತ ಮಾದರಿ ಸಂಗ್ರಹ
ರೇವ್ ಪಾರ್ಟಿಯಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿರುವ ನಟಿ ಹೇಮಾ ಅವರ ರಕ್ತದ ಸ್ಯಾಂಪಲ್‌ನ್ನು ಪೊಲೀಸರು ಸಂಗ್ರಹಿಸಿದ್ದಾರೆ. ರಕ್ತದ ಮಾದರಿ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ಸಾಬೀತಾದರೆ ಅವರ ವಿರುದ್ದ ಸೂಕ್ತ ಕಾನೂನು ಅಡಿಯಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಪಾರ್ಟಿಯಲ್ಲಿದ್ದ ಎಲ್ಲರಿಗೂ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ಪಾರ್ಟಿಯಲ್ಲಿ ಜನಪ್ರತಿಧಿಗಳು ಯಾರೂ ಇರಲಿಲ್ಲ. ಪಾರ್ಟಿಯಲ್ಲಿದ್ದ 5 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಹೇಮಾ ಹೈಡ್ರಾಮಾ
ತೆಲುಗು ಸಿನಿಮಾ ನಟಿ ಹೇಮಾ ಸೋಮವಾರ ಹೈಡ್ರಾಮಾ ಮಾಡಿದ್ದರು. ರೇವ್ ಪಾರ್ಟಿಗೂ ನನಗೂ ಸಂಬಂಧ ಇಲ್ಲ . ನಾನು ಭಾಗಿಯಾಗಿಲ್ಲ. ಹೈದರಾಬಾದ್ ನಲ್ಲಿ ಇದ್ದೇನೆ ಎಂದು ವಿಡಿಯೋ ಸಂದೇಶ ಹರಿದುಬಿಟ್ಟಿದ್ದರು. ರೇವ್ ಪಾರ್ಟಿ ನಡೆದ ಸ್ಥಳದಿಂದಲೇ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಂಚಿದ್ದರು. ಪೊಲೀಸರ ಬಳಿ ಇದ್ದ ಮೊಬೈಲ್ ಪಡೆದು ಈ ವಿಡಿಯೋ ಮಾಡಿದ್ದರು.
ಐವರು ಆರೋಪಿಗಳ ಬಂಧನ
ರೇವ್ ಪಾರ್ಟಿ ಸಂಬಂಧ ಪೊಲೀಸರು ಇದೀಗ ಐವರು ಆರೋಪಿಗಳನ್ನು ಅಧಿಕೃತವಾಗಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು. ಇದೀಗ ಪ್ರಕರಣದ ತನಿಖೆಯನ್ನು
ಹೆಬ್ಬಗೋಡಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.