ಬೆಂಗಳೂರು: ಮುಂಗಾರು ಪೂರ್ವ ಮಳೆ ಸುರಿದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ಉಂಟಾಗಿರುವ ಅನಾಹುತಗಳ ಕುರಿತಂತೆ ಸಿಎಂ ಸಿದ್ದರಾಮಯ್ಯ ಇಂದು ನಗರ ಪ್ರದಕ್ಷಿಣೆ ಮಾಡುವ ಮೂಲಕ ಪರಿಶೀಲನೆ ನಡೆಸಿದರು.
ಅನುಗ್ರಹ ಲೇಔಟ್‌ಗೆ ಸಿಎಂ ಸಿದ್ದರಾಮಯ್ಯ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾಲುವೆಗೆ ಹೊಂದಿಕೊಂಡಿರುವ ಅನುಗ್ರಹ ಲೇಔಟ್‌ಗೆ ಮೊದಲು ಭೇಟಿ ನೀಡಿದರು. ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ಅವರ ಕಷ್ಟ ಸುಖ ಆಲಿಸಿದರು. ಈ ಹಿಂದೆ 20 ಅಡಿ ಇದ್ದ ರಾಜ ಕಾಲುವೆ ಇದೀಗ ಒತ್ತುವರಿಯಿಂದಾಗಿ 6 ಅಡಿಗೆ ಕುಸಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣ ಒತ್ತುವರಿ ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಾಯಂಡಹಳ್ಳಿ ಬಳಿ ಹೊಸ ಕಾಲುವೆ
ನಗರ ಪ್ರದಕ್ಷಿಣೆ ಕೈಗೊಂಡ ಸಿಎಂ ಸಿದ್ದರಾಮಯ್ಯ ನಾಯಂಡಹಳ್ಳಿ ಬಳಿ ಹೊಸ ಕಾಲುವೆ ರಚನೆಗೆ ಶಿಫಾರಸು ಮಾಡಿದರು. ಗಾಳಿ ಆಂಜನೇಯ ದೇವಸ್ಥಾನದ ಬಳಿ ಅರ್ಕಾತಿಯಿಂದ ಪರ್ಯಾಯವಾಗಿ ವೃಷಾಭಾವತಿಗೆ ನೂತನ ಕಾಲುವೆ ನಿರ್ಮಾಣ ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದರು.ಇದರಿಂದ ಮಳೆಗಾಲದಲ್ಲಿ ಮೈಸೂರು ರಸ್ತೆ, ಉತ್ತರಹಳ್ಳಿ, ಹೊಸ ಗುಡ್ಡದಹಳ್ಳಿ, ಶಿವ ನಗರ ಸೇರಿದಂತೆ ಹಲವು ಕಡೆಗಳಲ್ಲಿ ನೆರೆ ತಡೆಯಲು ಸಹಕಾರಿಯಾಗಲಿದೆ ಎಂದು ಸಿಎಂಗೆ ಬಿಬಿಎಂಪಿ ಕಮಿಷನರ್ ಮಾಹಿತಿ ನೀಡಿದರು. ಹೊಸ ಕಾಲುವೆ ನಿರ್ಮಾಣಕ್ಕೆ 11.5 ಕೋಟಿ ಅನುದಾನ ಪಡೆಯಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
ಒಣಗಿದ ಮರಗಳು- ಸಿಎಂ ಗರಂ
ನಗರ ಪ್ರದಕ್ಷಿಣೆ ವೇಳೆ ಹಲವು ಪ್ರದೇಶಗಳಲ್ಲಿ ಒಣಗಿದ ಮರಗಳು ಕಣ್ಣಿಗೆ ಬಿದ್ದ ಹಿನ್ನೆಲೆಯಲ್ಲಿ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇವುಗಳನ್ನು ಯಾಕೆ ತೆರವುಗೊಳಿಸಿಲ್ಲ ಎಂದು ಪ್ರಶ್ನೆ ಮಾಡಿದರು. ಬಸ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಸಿಎಂ ಈ ದೃಶ್ಯ ನೋಡಿ ಕೆಂಡಾಮಂಡಲರಾದರು. ಅನಾಹುತ ಆಗುವ ಮೊದಲೇ ಮರಗಳನ್ನು ತೆರವು ಮಾಡುವಂತೆ ಸಿಎಂ ಸೂಚನೆ ನೀಡಿದರು.
ಬನಶಂಕರಿ 2ನೇ ಹಂತದ 100 ಅಡಿ ರಸ್ತೆಯುದ್ದಕ್ಕೂ ಒಣಗಿದ ಮರಗಳ ತೆರವಿಗೆ ಸಿಎಂ ಸೂಚನೆ ನೀಡಿದರು.
ಇದೇ ರೀತಿ ನಗರದಲ್ಲಿ ಇರುವ ಎಲ್ಲ ಒಣಗಿದ ಮರಗಳ ತೆರವಿಗೆ ಸಿಎಂ ಆದೇಶ ನೀಡಿದರು.