ಬೆಂಗಳೂರು: “ನಮ್ಮ ಸರ್ಕಾರದ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡುತ್ತಿರುವವರ ಅಧಿಕಾರ ಅವಧಿಯಲ್ಲಿ ಯಾವ ರೀತಿ ಈ ಪ್ರಕರಣ ನಡೆದಿತ್ತು ಎಂದು ಎಲ್ಲರಿಗೂ ಗೊತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.
ಫೋನ್ ಕದ್ದಾಲಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅಶೋಕ್ ಅವರು ಕೂಡ ಗೃಹ ಸಚಿವರಾಗಿದ್ದವರು. ಈ ಆರೋಪ ಮಾಡುತ್ತಿರುವ ಮತ್ತೆ ಕೆಲವರು ಮಾಜಿ ಮುಖ್ಯಮಂತ್ರಿಗಳಾಗಿದ್ದವರು. ಈ ವಿಚಾರವಾಗಿ ಅವರು ಪತ್ರದ ಮೂಲಕ ದೂರು ನೀಡಲಿ. ಅವರ ಕಾಲದಲ್ಲಿ ಏನೆಲ್ಲಾ ಆಗಿತ್ತು ಎಂದು ಅವರಿಗೆ ಗೊತ್ತಿದೆ” ಎಂದು ತಿರುಗೇಟು ನೀಡಿದರು.
ಇಂದಿನ ಸಚಿವರ ಸಭೆ ಬಗ್ಗೆ ಕೇಳಿದಾಗ, “ಇಂದು ರಾತ್ರಿ ಸಚಿವರುಗಳಿಗೆ ಭೋಜನಕೂಟ ಏರ್ಪಡಿಸಿದ್ದೇವೆ, ಲೋಕಸಭೆ ಚುನಾವಣೆ ನಿರ್ವಹಣೆ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಬಗ್ಗೆ ಚರ್ಚೆ ಮಾಡುತ್ತೇವೆ” ಎಂದರು.
ಲೋಕಸಭೆಯಲ್ಲಿ ಜವಾಬ್ದಾರಿ ನಿಭಾಯಿಸದ ಸಚಿವರ ತಲೆದಂಡವಾಗುತ್ತದೆಯೇ ಎಂದು ಕೇಳಿದಾಗ, “ಈ ವಿಚಾರವಾಗಿ ನಾವು ನಿಮ್ಮ ಮುಂದೆ ಮಾತನಾಡುವುದಿಲ್ಲ” ಎಂದರು.
ಫೋನ್ ಕದ್ದಾಲಿಕೆ ವಿಚಾರವಾಗಿ ಸಿಎಂ, ಡಿಸಿಎಂ ಸುತ್ತಮುತ್ತಲಿನವರೇ ಮಾಹಿತಿ ನೀಡಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಯಾರೆಲ್ಲಾ ಮಾಹಿತಿ ನೀಡಿದ್ದಾರೆ ಒಂದು ಪಟ್ಟಿ ಮಾಡಿ ಅಫಿಡವಿಡ್ ಸಲ್ಲಿಸಲಿ” ಎಂದರು.
ಇಂದು ಸಿಎಂ ಜತೆಗಿನ ಸಿಟಿ ರೌಂಡ್ಸ್ ಬಗ್ಗೆ ಕೇಳಿದಾಗ, “ಮಳೆ ಬಂದಾಗ ಹಾನಿಗೊಳಗಾಗುವ ಪ್ರದೇಶಗಳನ್ನು ಗುರುತಿಸಿ ಮುಖ್ಯಮಂತ್ರಿಗಳ ಜತೆಗೆ ಇಂದು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇವೆ. ಈ ಭಾಗಗಳಲ್ಲಿ ಮುಂಜಾಗ್ರತಾ ಕ್ರಮಗಳ ಪರಿಶೀಲನೆ ಮಾಡಲಾಗುವುದು. ಸದ್ಯ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಲಿ. ಭೂಮಿ ಹದವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ” ಎಂದರು.