ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ಬೆದರಿಸಿದ್ದ ಹಾಗೂ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಇದೀಗ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಇದೀಗ ಬೆಳ್ತಂಗಡಿಯಲ್ಲಿರುವ ಶಾಸಕ ಹರೀಶ್ ಪೂಂಜಾ ಮನೆ ಮುಂದೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದ್ದಾರೆ. ಪರಿಸ್ಥಿತಿ ಅತ್ಯಂತ ಬಿಗುವಿನಿಂದ ಕೂಡಿದೆ ಎಂದು ವರದಿಯಾಗಿದೆ.
ಸುಳ್ಳು ಆರೋಪ ಹೊರಿಸಿ ಶಾಸಕರ ಬಂಧನಕ್ಕೆ ಷಡ್ಯಂತ್ರ ಹೂಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಬಿ. ವೈ. ವಿಜಯೇಂದ್ರ ಖಂಡನೆ
ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಯತ್ನ ನಡೆಸುತ್ತಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಖಂಡಿಸಿದ್ದಾರೆ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇದನ್ನು ಶಾಸಕರು ಪ್ರಶ್ನಿಸಿದ್ದರು.
ಭಾವೋದ್ವೇಗಕ್ಕೆ ಒಳಗಾಗಿ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಇದನ್ನು ನೆಪಮಾಡಿಕೊಂಡು ಶಾಸಕರನನ್ನು ಬಂಧಿಸಲು ಹೊರಟರೆ ಪರಿಣಾಮ ನೆಟ್ಟಗಿರದು ಎಂದು ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಉದ್ವೇಗದಲ್ಲಿ ಪೊಲೀಸರ ಬಗ್ಗೆ ಮಾತಾಡಿದ್ದು ಸರಿಯಲ್ಲ ಅಂತ ಹರೀಶ್ ಪೂಂಜಾಗೂ ಅನಿಸಿದೆ. ಇದನ್ನು ಪೊಲೀಸರು ಪರಿಗಣಿಸಬೇಕು ಎಂದು ವಿಜಯೇಂದ್ರ ಮನವಿ ಮಾಡಿದ್ದಾರೆ.
ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ
ಶಾಸಕರ ಬಂಧನಕ್ಕೆ ಯತ್ನಿಸಬಾರದು. ಈ ವಿಚಾರದಲ್ಲಿ ಸರ್ಕಾರ ಆತುರದ ತೀರ್ಮಾನ ತೆಗೆದುಕೊಳ್ಳಬಾರದು. ಕಾನೂನು ಸುವ್ಯವಸ್ಥೆ ಹದಗೆಡಲು ಪೊಲೀಸರೇ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ರಾಜಕಾರಣಿಗಳು, ಪುಢಾರಿಗಳು, ಅಧಿಕಾರಿಗಳ ಒತ್ತಡಕ್ಕೆ ಮಣಿದು ಎಫ್ಐಆರ್ ಹಾಕಿದ್ದಾರೆ. ಇದು ಸರಿಯಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ..
ದಿನೇಶ್ ಗುಂಡೂರಾವ್ ಟೀಕೆ
ಇದೇ ವೇಳೆ ಶಾಸಕ ಹರೀಶ್ ಪೂಂಜಾ ವರ್ತನೆಗೆ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ಇಂತಹ ವರ್ತನೆ
ಸಹಿಸಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿನೇಶ್ ಗುಂಡೂರಾವ್ ಈ ಸಂಬಂಧ ಪೋಸ್ಟ್ ಮಾಡಿದ್ದಾರೆ.
ಸಮಾಜ ಘಾತುಕರ ಪರ ನಿಂತು ಶಾಸಕರು ರಾಜಕಾರಣ ಮಾಡಿದ್ದಾರೆ. ಪೊಲೀಸರ ಮೇಲಿನ ಈ ಗೂಂಡಾ ವರ್ತನೆ ಅಕ್ಷಮ್ಯ ಅಪರಾಧವಾಗಿದೆ.
ಪೊಲೀಸರ ವಿರುದ್ಧವೇ ಶಾಸಕರು ಗೂಂಡಾ ವರ್ತನೆ ತೋರಿದ್ದಾರೆ. ಎಕ್ಸ್ನಲ್ಲಿ ಹರೀಶ್ ಪೂಂಜಾ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.