ಅಹ್ಮದಾಬಾದ್: ಐಪಿಎಲ್ ಕ್ರೀಡಾಕೂಟದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಸೆಣಸಲು ಆರ್‌ಸಿಬಿ ಸಜ್ಜಾಗಿರುವಂತೆಯೇ ಆರ್‌ಸಿಬಿಯ ಪ್ರಮುಖ ಆಟಗಾರ ವಿರಾಟ್‌ ಕೊಹ್ಲಿಗೆ ಗಂಭೀರ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ವರದಿಯಾಗಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆರ್‌ಸಿಬಿಯ ಪ್ರಮುಖ ಆಟಗಾರರಾಗಿರುವ ಕೊಹ್ಲಿಗೆ ಬಂದಿರುವ ಜೀವ ಬೆದರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ನಾಲ್ಕು ಮಂದಿ ಕೊಹ್ಲಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಾಗಿದೆ. ಯಾವುದೇ ರಿಸ್ಕ್ ತೆಗೆದುಕೊಳ್ಳಲು ಮುಂದಾಗದ ಪೊಲೀಸರು ಕ್ರೀಡಾಂಗಣದ ಸುತ್ತಮುತ್ತ ಮತ್ತು ಹೋಟೆಲ್‌ಗೆ ಬಿಗಿ ಭದ್ರತೆ ನೀಡಿದ್ದಾರೆ.
ಆರ್‌ಸಿಬಿ ತಂಡದ ಆಟಗಾರರು ತಂಗಿರುವ ಹೋಟೆಲ್‌ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆಟಗಾರರು ಅಪರಿಚಿತರ ಜೊತೆ ಬೆರೆಯದಂತೆ ಸೂಚಿಸಲಾಗಿದೆ. ಹೋಟೆಲ್‌ ನಲ್ಲಿ ಕೂಡ ಸಿಬ್ಬಂದಿ ವರ್ತನೆಯನ್ನು ಹದ್ದುಗಣ್ಣಿನಿಂದ ನಿರೀಕ್ಷಿಸಲಾಗುತ್ತಿದೆ.

ಯಾವುದೇ ಸಂಶಯ ಬಂದ ತಕ್ಷಣ ಪೊಲೀಸರನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
ಐಪಿಎಲ್ ಕ್ರೀಡಾಕೂಟದ ಮಹತ್ವದ ಪಂದ್ಯ ಇಂದು ನಡೆಯಲಿದ್ದು, ಎಲಿಮಿನೇಟರ್ ಪಂದ್ಯಕ್ಕೆ ಅಹ್ಮದಾಬಾದ್ ಸಾಕ್ಷಿಯಾಗಲಿದೆ. ಆರ್‌ಸಿಬಿ ಸಂಜು ಸಾಮ್ಸನ್ ನೇತೃತ್ವದ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಇದೇ ವೇಳೆ ಆರ್‌ಸಿಬಿ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡಲಾಗಿದೆ. ವಿಶೇಷ ಪ್ರಾರ್ಥನೆ ಕೂಡ ನಡೆದಿದೆ.
ಶಂಕಿತ ಉಗ್ರರ ಬಂದನ
ಇತ್ತೀಚೆಗೆ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಬಂಧಿತ ಶಂಕಿತ ಉಗ್ರರು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಬಂಧಿತ ಶಂಕಿತ ಉಗ್ರರು ಶ್ರೀಲಂಕಾ ನಾಗರಿಕರಾಗಿದ್ದರು.
ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿಗೆ ಬಂದಿರುವ ಜೀವ ಬೆದರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ರೀಡಾಂಗಣದಲ್ಲಿ ಯಾವುದೇ ಪ್ರೇಕ್ಷಕ ಸಂಶಯಾಸ್ಪದವಾಗಿ ನಡೆದುಕೊಂಡರೇ ತಕ್ಷಣ ಸ್ಪಂದಿಸಲು ಕಾರ್ಯತಂತ್ರ ಸಿದ್ದಪಡಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page