Search

ಬೆಂಗಳೂರಿನ ಮಾಲ್, ಗೇಮ್ ಜೋನ್, ಮನರಂಜನಾ ಕೇಂದ್ರಗಳ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಸೂಚನೆ

ಬೆಂಗಳೂರು: ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಾಲ್ ಗಳು, ಗೇಮಿಂಗ್ ಜೋನ್ ಗಳು, ಮನರಂಜನಾ ಕೇಂದ್ರಗಳಲ್ಲಿ ಅಗ್ನಿ ದುರಂತ ಸೇರಿದಂತೆ ಎಲ್ಲಾ ರೀತಿಯ ಅನಾಹುತ ತಪ್ಪಿಸಲು ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.

ಈ ವಿಚಾರವಾಗಿ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಶಿವಕುಮಾರ್ ಅವರು ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ, “ಗುಜರಾತಿನ ರಾಜ್ ಕೋಟ್ ನ ಮನರಂಜನಾ ಕೇಂದ್ರದಲ್ಲಿ ಶನಿವಾರ ಸಂಜೆ ಸಂಭವಿಸಿರುವ ಅಗ್ನಿ ಅವಘಡ ಅತ್ಯಂತ ಕಳವಳಕಾರಿಯಾಗಿದೆ. ಈ ದುರಂತ ಎಚ್ಚರಿಕೆ ಗಂಟೆಯಾಗಿದ್ದು, ಬೆಂಗಳೂರಿನಲ್ಲಿರುವ ಮಾಲ್ ಹಾಗೂ ಇತರೆ ಜನನಿಬಿಡ ಕೇಂದ್ರಗಳಲ್ಲಿ ಅಗ್ನಿ ದುರಂತ ಸೇರಿದಂತೆ ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲನೆ ನಡೆಸಬೇಕು ಎಂದು ಆದೇಶ ನೀಡಿದ್ದಾರೆ.

ಈ ಕೇಂದ್ರಗಳಲ್ಲಿ ಈಗಾಗಲೇ ಸೂಚಿಸಿರುವ ರಕ್ಷಣಾ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂದು ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಗುಜರಾತ್ ನಂತಹ ಯಾವುದೇ ದುರ್ಘಟನೆ ನಡೆಯಬಾರದು” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

More News

You cannot copy content of this page