Search

G PARAMESHWARA: ಶಾಸಕ ಠಾಣೆಗೆ ನುಗ್ಗಿ ದಾಂಧಲೆ ಎಸಗಿದರೆ ಸಮಾಜದಲ್ಲಿ ಶಾಂತಿ ಹೇಗಿರುತ್ತದೆ?: ಗೃಹ ಸಚಿವ ಪರಮೇಶ್ವರ

ಬೆಂಗಳೂರು (ಮೇ26):- ಗೂಂಡಾವರ್ತನೆ, ದಾದಾಗಿರಿ ಮಾಡಿ ಉಳಿದುಕೊಳ್ಳುತ್ತೇವೆ ಎಂದು ತಿಳಿದಿದ್ದರೆ ಅದು ಸಾಧ್ಯವಿಲ್ಲ. ಇಂತಹ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಎಚ್ಚರಿಸಿದರು.

ಬೆಂಗಳೂರಿನ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸವರು, ಶಾಸಕರು ಠಾಣೆಯೊಳಗೆ ಹೋಗಿ ಗಲಾಟೆ ಮಾಡುತ್ತಾರೆ. ಪೊಲೀಸರ ಮೇಲೆ ದಾಂಧಲೆ ಎಸಗಿದ್ದಾರೆ. ಈ ರೀತಿ ಆಗುವುದಾದರೆ ಸಮಾಜದಲ್ಲಿ ಶಾಂತಿ ಹೇಗಿರುತ್ತದೆ? ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಪದೇಪದೆ ಹೇಳುತ್ತಿದ್ದೇನೆ. ಶಾಸಕರಾಗಿರಲಿ, ಸಂಸದರಾಗಿರಲಿ‌ ಮತ್ಯಾರಾದರು ಆಗಲಿ. ಯಾರನ್ನು ಕೂಡ ಬಿಡುವುದಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ದಾವಣಗೆರೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯತೋರಿದ ಇನ್ಸ್‌ಪೆಕ್ಟರ್, ಪಿಎಸ್‌ಐನನ್ನು ಅಮಾನತುಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಕ್ರಮ ತೆಗೆದುಕೊಂಡಿಲ್ಲ ಎಂದರು.

ಮೃತನು ಮಟ್ಕಾ ಆಡಿಸುವುದರಲ್ಲಿ ಭಾಗಿಯಾಗಿದ್ದ ಆರೋಪದ‌ ಮೇಲೆ ಠಾಣೆಗೆ ಕರೆದುಕೊಂಡು ಬಂದಿದ್ದರು. ಮರಣೋತ್ತರ ಪರೀಕ್ಷೆಯ ವರದಿ ಬಂದ‌ನಂತರ ಆತನ ಸಾವಿಗೆ ನಿಖರವಾದ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದರು.

ಹಣಕ್ಕಾಗಿ ಪೀಡಿಸುತ್ತಿದ್ದರು ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ. ಅಧಿಕಾರಿಗಳು ಆ ರೀತಿ ಭಾಗಿಯಾಗಿರುವುದು ಕಂಡು ಬಂದರೆ, ಅಂತವರ ವಿರುದ್ಧ ಸೇವೆಯಿಂದ ಡಿಸ್ಮಿಸ್‌ಗೊಳಿಸುವ ಕ್ರಮ ತೆಗೆದುಕೊಳ್ಳುತ್ತೇವೆ. ಅಂತವರು ಅಧಿಕಾರದಲ್ಲಿರಬಾರದು ಎಂದು ಹೇಳಿದರು.

ಕರ್ನಾಟಕ ಬಿಹಾರವಾಗುತ್ತಿದೆ ಎಂದು ವಿಜಯೇಂದ್ರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಹೇಗಿದ್ದಾವೆ ಎಂಬುದನ್ನು ನೋಡಿಕೊಳ್ಳಲಿ. ಗುಜುರಾತ್‌ನಲ್ಲಿ ಬೆಂಕಿಹೊತ್ತಿಕೊಂಡು 27 ಜನ ಸತ್ತಿದ್ದಾರೆ. ಅದಕ್ಕೆ ಯಾರು ಹೊಣೆ? ಅಲ್ಲಿನ ಮುಖ್ಯಮಂತ್ರಿ, ಗೃಹ ಸಚಿವರು ರಾಜೀನಾಮೆ ಕೊಡಬೇಕಲ್ಲ? ಹೇಳೋದು ಬಹಳ ಸುಲಭವಾಗಿರುತ್ತದೆ ಎಂದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಯನ್ನು ಹಾಳಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತ ಪತ್ರಕ್ಕೆ ಕೇಂದ್ರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ವಿದೇಶಾಂಗ ಸಚಿವರು, ಇನ್ನೆರಡು ದಿನಗಳಲ್ಲಿ ರದ್ದು ಮಾಡುವುದಾಗಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ ಎಂದರು.

ಮುಖ್ಯಮಂತ್ರಿಯವರು ಮೇ‌1ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರ ಎಲ್ಲಿ ಹೋಯಿತು? ಮುಖ್ಯಮಂತ್ರಿಯವರ ಪತ್ರ ಪ್ರಧಾನಮಂತ್ರಿಯವರ ಕಚೇರಿಗೆ ಹೋಗುತ್ತದೆ ಎಂದಾದರೆ ಅದಕ್ಕೆ ಗೌರವ ಸಿಗಬೇಕಲ್ಲವೇ? ಕರ್ನಾಟಕ ಮುಖ್ಯಮಂತ್ರಿ, ಈಗ ಪತ್ರ ಬರೆದಿದ್ದಾರೆ ಎಂದು ವಿದೇಶಾಂಗ ಸಚಿವರು ಹೇಳಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು‌

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳ ಅಸಮಾದಾನದ‌ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂತ್ರಸ್ತೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡುವುದಾಗಿ ನಾನು ಮತ್ತು ಮುಖ್ಯಮಂತ್ರಿಯವರು ಹೇಳಿದ್ದೇವೆ. ಸಂತ್ರಸ್ತೆಯರನ್ನು ಯಾರು ಕೂಡ ಒತ್ತಾಯ ಮಾಡಿ, ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಬಿಡುವುದಿಲ್ಲ. ಸಂತ್ರಸ್ತೆಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಲಯ ಐಜಿಪಿಯವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪೆನ್‌ಡ್ರೈವ್ ಪ್ರಕರಣದಲ್ಲಿ ನಿಜವಾದ ಆರೋಪಿಗೆ ಶಿಕ್ಷೆಯಾಗಿಸಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅದೇ‌ ಕೆಲಸವನ್ನು ಮಾಡುತ್ತಿದ್ದೇವೆ.
ನಿಜವಾದ ಆರೋಪಿ ಯಾರು, ಪ್ರಕರಣದಲ್ಲಿ ಪ್ರಜ್ವಲ್ ಪಾತ್ರ ಏನು ಎಂಬುದಕ್ಕಾಗಿಯೇ ತನಿಖೆ ನಡೆಸಬೇಕು ಎಂಬ ಕಾರಣಕ್ಕಾಗಿಯೇ ಎಸ್‌ಐಟಿ ರಚಿಸಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದ ಹಾಗೇ, ಯಾರದ್ದೋ ಹೆಸರು ಹೇಳುವ ಅಗತ್ಯವಿಲ್ಲ‌. ತನಿಖೆ ಆಗುವ ಮುಂಚೇಯೇ ಹೇಳಿಕೆಗಳನ್ನು ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ತಿರುಗೇಟು ನೀಡಿದರು.

More News

You cannot copy content of this page