Search

“Bank of Bhagyalakshmi” Movie: “ಬ್ಯಾಂಕ್ of ಭಾಗ್ಯಲಕ್ಷ್ಮಿ” ಚಿತ್ರದ ಅನಿಮೇಷನ್‌ ಟೀಸರ್ ಗೆ ಮೆಚ್ಚುಗೆಯ ಮಹಾಪೂರ

ರಂಗಿ ತರಂಗ’, ‘ಅವನೇ ಶ್ರೀಮನ್ನಾರಾಯಣ’ ದಂತಹ ಯಶಸ್ವಿ ಚಿತ್ರಗಳ ನಿರ್ಮಾಪಕ ಹೆಚ್.ಕೆ ಪ್ರಕಾಶ್ ನಿರ್ಮಾಣದ, "ದಿಯಾ" ಸೇರಿದಂತೆ ಅನೇಕ ಯಶಸ್ವಿ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ದೀಕ್ಷಿತ್ ಶೆಟ್ಟಿ ನಾಯಕರಾಗಿ ನಟಿಸಿರುವ ಹಾಗೂ ಅಭಿಷೇಕ್ ಎಂ ನಿರ್ದೇಶನದ "ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ" ಚಿತ್ರದ ಅನಿಮೇಷನ್‌ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಕನ್ನಡ ಚಿತ್ರರಂಗದಲ್ಲೇ ಹೊಸ ಪ್ರಯೋಗ ಎನ್ನಬಹುದಾದ ಈ ಟೀಸರ್ ಮೂಲಕ ಚಿತ್ರದ ಕಥೆ ಹೇಳುವ ಪ್ರಯತ್ನ ಮಾಡಲಾಗಿದೆ. ಈ ಅನಿಮೇಷನ್‌ ಟೀಸರ್ ಗಾಗಿ ಏಳೆಂಟು ಜನ ನುರಿತ ತಂತ್ರಜ್ಞರು ಸುಮಾರು ತಿಂಗಳ ಕಾಲ ಶ್ರಮ ಪಟ್ಟಿದ್ದಾರೆ‌. ಅನಿಮೇಷನ್‌ ಟೀಸರ್ ಗೆ ಬರುತ್ತಿರುವ ರೆಸ್ಪಾನ್ಸ್ ಗೆ ಬಹಳ ಖುಷಿಯಾಗಿದೆ ಎನ್ನುತ್ತಾರೆ ನಿರ್ದೇಶಕರು.

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆದಿದೆ.ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ.

ದೀಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ “ಪ್ರೇಮಂ ಪೂಜ್ಯಂ” ಹಾಗೂ “ಕೌಸಲ್ಯ ಸುಪ್ರಜಾ ರಾಮ” ಚಿತ್ರಗಳ ಮೂಲಕ ಜನಪ್ರಿಯರಾಗಿರುವ ಬೃಂದಾ ಆಚಾರ್ಯ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಧುಕೋಕಿಲ, ಗೋಪಾಲ ಕೃಷ್ಣ ದೇಶಪಾಂಡೆ,ಉಷಾ ಭಂಡಾರಿ, ಭರತ್,ವಿಶ್ವನಾಥ್, ಹರೀಶ್ ಸಮಷ್ಟಿ, ಅಶ್ವಿನ್ ರಾವ್ ಪಲ್ಲಕ್ಕಿ, ಶ್ರೇಯಸ್ ಶರ್ಮಾ, ಶ್ರೀ ವತ್ಸ, ವಿನುತ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಖ್ಯಾತ ನಿರ್ದೇಶಕ ಸಿಂಪಲ್ ಸುನಿ ಅವರ ಜೊತೆ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಅಭಿಷೇಕ್ ಎಂ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಭಿಷೇಕ್ ಅವರೆ ಬರೆದಿದ್ದಾರೆ. ಹೆಸರಾಂತ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಸಚಿನ್ ಹಾಗೂ ಅಭಿಷೇಕ್ ಅವರ ಸಾರಥ್ಯದ “ಪಿನಾಕ” ವಿ ಎಫ್ ಎಕ್ಸ್ ಸ್ಟುಡಿಯೋದಲ್ಲೇ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರದ ಟೀಸರ್ ನ ಅನಿಮೇಷನ್‌ ವರ್ಕ್ ನಡೆದಿದೆ.

ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣ, ರಘು ಮೈಸೂರ್ ಕಲಾ ನಿರ್ದೇಶನ ಹಾಗೂ ಭೂಷಣ್ ಮಾಸ್ಟರ್ ನೃತ್ಯ ಈ ಚಿತ್ರಕ್ಕಿದೆ.

More News

You cannot copy content of this page