RAMALINGA REDDY: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಅಪಪ್ರಚಾರ: ರಾಮಲಿಂಗಾ ರೆಡ್ಡಿ

ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ” ಎಂದು ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್, ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷರಾದ ವಿ.ಆರ್ ಸುದರ್ಶನ್, ಮಾಜಿ ಸದಸ್ಯ ನಾರಾಯಣಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರು ಸೋಮವಾರ ಜಂಟಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರ ಮಾತುಗಳು ಹೀಗಿವೆ;

ಸಚಿವರಾದ ರಾಮಲಿಂಗಾ ರೆಡ್ಡಿ:

ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ರಾಮೋಜಿ ಗೌಡರು ಸ್ಪರ್ಧಿಸಿದ್ದಾರೆ. ಈ ಬಾರಿ ಅವರು ಮೊದಲ ಸ್ಥಾನ ಪಡೆಯುವ ವಿಶ್ವಾಸವಿದೆ. ವಿರೋಧ ಪಕ್ಷದವರಿಗೆ ಇದನ್ನು ಅರಗಿಸಿಕೊಳ್ಳಲಾಗದೇ ಅಪಪ್ರಚಾರ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಿರಲಿಲ್ಲ. ಇತ್ತೀಚೆಗೆ ಮಧು ಮಾದೇಗೌಡರು, ಪ್ರಕಾಶ್ ಹುಕ್ಕೇರಿ ಗೆದ್ದಿದ್ದಾರೆ. ಈಗ ಮೂರು ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದು, ಆರಕ್ಕೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಪ್ರಜ್ಞಾವಂತ ಪದವೀಧರರು ಹಾಗೂ ಶಿಕ್ಷಕರು ಈಗ ಕಾಂಗ್ರೆಸ್ ಪರವಾಗಿ ನಿಲ್ಲುತ್ತಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಶಿಕ್ಷಕರು ಹಾಗೂ ಪದವೀಧರರ ಸಮಸ್ಯೆಗೆ ಸ್ಪಂದಿಸದ ಕಾರಣ ಅವರು ಬಿಜೆಪಿಯಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ಸಮಸ್ಯೆಗಳನ್ನು ಬಗೆಹರಿಸುವ ಇಚ್ಛಾಶಕ್ತಿ ಹೊಂದಿದ್ದು ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ್ದೇವೆ. ಬಿಜೆಪಿ ಬುರುಡೆ ಪಕ್ಷ, ಸುಳ್ಳು ಹೇಳುತ್ತಾರೆ. ವಚನಭ್ರಷ್ಟರು ಎಂದು ಅವರಿಗೆ ಅರಿವಾಗಿದೆ. 2018ರಲ್ಲಿ ಬಿಜೆಪಿ 600 ಆಶ್ವಾಸನೆ ಕೊಟ್ಟು ಈಡೇರಿಸಿದ್ದು ಕೇವಲ 50 ಮಾತ್ರ.

ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದ್ದು, ಏನಾದರೂ ಮಾಡಿ ಕೆಟ್ಟಹೆಸರು ತರಬೇಕು ಎಂಬ ಪ್ರಯತ್ನ ಮಾಡುತ್ತಿದ್ದಾರೆ. ರಾಮೋಜಿಗೌಡರ ಕುಟುಂಬ ಹಾಗೂ ಪೂರ್ವಜರು ನೂರಾರು ವರ್ಷಗಳಿಂದ ಕೋಲಾರದಲ್ಲೇ ಇದ್ದಾರೆ. ಕೈಲಾಗದವರ ಕೊನೆ ಅಸ್ತ್ರ ಅಪಪ್ರಚಾರ ಮಾಡುವುದು. ಅದನ್ನೇ ಬಿಜೆಪಿಯವರು ಮಾಡುತ್ತಿದ್ದಾರೆ.

ನಮ್ಮ ಪಕ್ಷ ಒಪಿಎಸ್, 7ನೇ ವೇತನ ಆಯೋಗದ ವಿಚಾರದಲ್ಲಿ ಸ್ಪಷ್ಟತೆ ಹೊಂದಿದೆ. ಹೀಗಾಗಿ ಪದವೀಧರರು ಹಾಗೂ ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳಾದ ರಾಮೋಜಿಗೌಡರು, ಮರಿತಿಬ್ಬೇಗೌಡರು, ಶ್ರೀನಿವಾಸ್, ಆಯನೂರು ಮಂಜುನಾಥ್, ಚಂದ್ರಶೇಖರ್ ಪಾಟೀಲ್ ಅವರಿಗೆ ಮತ ಹಾಕಬೇಕು ಎಂದು ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ.

ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್

ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಜತೆಯಾಗಿ ಚುನಾವಣೆ ಮಾಡುತ್ತಿದ್ದು, ಹೀಗಾಗಿ ಹಿಂದೆಂದೂ ನೀಡದ ಪ್ರಾಮುಖ್ಯತೆ ನೀಡಿದ್ದೇವೆ. ಈಗ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 29 ಶಾಸಕರಿದ್ದು, ಐದು ಕ್ಷೇತ್ರಗಳಲ್ಲಿ ಚುನಾವಮೆ ಎದುರಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ಬಹುಮತ ಪಡೆಯಲು ಇನ್ನು 14 ಸದಸ್ಯರ ಅಗತ್ಯವಿದ್ದು, ಮುಂಬರುವ ಚುನಾವಣೆಯಲ್ಲಿ 7 ಸದಸ್ಯರು, ಶೆಟ್ಟರ್ ಅವರು ರಾಜೀನಾಮೆ ಕೊಟ್ಟಿರುವ ಕ್ಷೇತ್ರವೂ ಕಾಂಗ್ರೆಸ್ ಪರವಾಗಿದ್ದು, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಆಗ ಮಾತ್ರ ನಾವು ಬಹುಮತ ಪಡೆಯಲು ಸಾಧ್ಯ. ಇಲ್ಲದಿದ್ದರೆ ಬಹುಮತ ಪಡೆಯಲು 2 ವರ್ಷ ಕಾಯಬೇಕಾಗುತ್ತದೆ.

ಈ ಕಾರಣಗಳಿಂದ ಈ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದಾರೆ. ಕಾರಣ ಅವರು ಏಕಾಂಗಿಯಾಗಿ ಹೋರಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಬಿಜೆಪಿಯು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಹೆಚ್ಚಿನ ಕಾಲಾವಕಾಶ ಪಡೆಯಿತು.

ರಾಜ್ಯದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಇದೆ. ಹೀಗಾಗಿ ಜೆಡಿಎಸ್ ಪಕ್ಷವನ್ನು ಸೇರಿಸಿಕೊಂಡಿದ್ದಾರೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಆನಂತರ ಅವರ ಮೈತ್ರಿ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ನಿರಂತರವಾಗಿ ಸೋತಿದ್ದ ಚುನಾವಣೆಯಲ್ಲಿ ಈ ಬಾರಿ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಅವರು ಮೈತ್ರಿ ಮಾಡಿಕೊಂಡಿದ್ದರು. ಆದರೂ ಪುಟ್ಟಣ್ಣ ಅವರು ಗೆದ್ದರು. ನಂತರ ಈ ಆರು ಕ್ಷೇತ್ರಗಳ ಚುನಾವಣೆ ಬಂದಿದೆ.

ಕಾಂಗ್ರೆಸ್ ಪಕ್ಷ ಈ ಕ್ಷೇತ್ರಗಳಿಗೆ ಒಂದು ವರ್ಷದ ಹಿಂದೆಯೇ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೆವು. ಕಳೆದ ಒಂದು ವರ್ಷದಲ್ಲಿ ರಾಮೋಜಿಗೌಡರು ನಿರಂತರವಾಗಿ ಸುತ್ತಾಡಿ ಅವರ ಪರವಾಗಿ ಮತದಾರರಲ್ಲಿ ಒಲವು ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಅವರ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದೇ ಸಾಕ್ಷಿ. ಜಾತಿ, ಧರ್ಮದ ಆಧಾರದ ಮೇಲೆ ಚುನಾವಮೆ ಮಾಡುವ ಕೆಟ್ಟ ಪಕ್ಷ ಇದ್ದರೆ ಇದು ಬಿಜೆಪಿ.

ಎಲ್ಲಾ ಜಾತಿ, ಧರ್ಮವರು ನಿಮಗೆ ಮತ ನೀಡಿ ಶಾಸಕರಾಗಿ ಆಯ್ಕೆ ಮಾಡಿರುತ್ತಾರೆ. ಆದರೂ ಈ ರೀತಿ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ದೇಶದ ಯಾವುದೇ ಮೂಲೆಯಲ್ಲಿದ್ದರೂ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದನ್ನು ಪ್ರಶ್ನೆ ಮಾಡಲು ಇವರಾರು? ಇವರಿಗೆ ಪ್ರಶ್ನೆ ಮಾಡುವ ಯೋಗ್ಯತೆ ಇಲ್ಲ. ಆದರೂ ಇಲ್ಲೇ ಹುಟ್ಟಿ, ಬೆಳೆದಿರುವ ಅಭ್ಯರ್ಥಿ ವಿರುದ್ಧ ಇಷ್ಟು ಕೀಳು ಮಟ್ಟದ ಮಾತುಗಳನ್ನಾಡಿರುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ವಿರೋಧ ಪಕ್ಷದ ನಾಯಕರು ಎಷ್ಟು ಅಸಮರ್ಥರಿದ್ದಾರೆ ಎಂಬುದು ಗೊತ್ತಾಗುತ್ತದೆ.

ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಬ್ಲಾಕ್, ಜಿಲ್ಲಾ ಅದ್ಯಕ್ಷರುಗಳಿಂದ ಮಂತ್ರಿಗಳನ್ನು ಜವಾಬ್ದಾರಿ ವಹಿಸಿದ್ದು, ಈ ಚುನಾವಮೆಯಲ್ಲಿ ಕಾಂಗ್ರೆಸ್ 6ಕ್ಕೆ ಆರೂ ಕ್ಷೇತ್ರಗಳಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.ಸೋಲಿನ ಭಯದಿಂದ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮಾತೆತ್ತಿದರೆ ಸುಳ್ಳನ್ನೇ ಹೇಳುತ್ತಾರೆ. ಮೋದಿ ಅವರು ಯಾವುದೇ ರಾಜ್ಯಕ್ಕೆ ಹೋದರೂ ನಂಬರ್ ರಾಜ್ಯ ಮಾಡುವುದಾಗಿ ಹೇಳುತ್ತಾರೆ. ಬಿಜೆಪಿ ಪ್ರಮುಖ ನಾಯಕರೇ ಸುಳ್ಳು ಹೇಳುತ್ತಿರುವಾಗ ಸ್ಥಳೀಯ ನಾಯಕರು ಸುಳ್ಳು ಹೇಳುವುದರಲ್ಲಿ ಅಚ್ಚರಿಯಿಲ್ಲ.

ಬಿಜೆಪಿ ನ್ಯಾಯುತವಾಗಿ ಚುನಾವಣೆ ಎದುರಿಸಲಿ. ರಾಷ್ಟ್ರೀಯ ಪಕ್ಷವಾಗಿ ಇಷ್ಟು ಕೈಳು ಮಟ್ಟದ ರಾಜಕಾರಣ ಮಾಡಬಾರದು. ಮೂರರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕ್ರ.ಸಂಖ್ಯೆ 2 ರಾಮೋಜಿಗೌಡರಿಗೆ ಮತ ನೀಡಬೇಕು ಎಂದು ಮನವಿ ಮಾಡುತ್ತೇನೆ.

ವಿ.ಆರ್ ಸುದರ್ಶನ್

ಕರ್ನಾಟಕದ ಅಭಿವೃದ್ಧಿ, ರಾಜ್ಯದ ಹಾಗೂ ಮತದಾರರ ಹಿತದೃಷ್ಟಿಯಿಂದ ನಮ್ಮ ಅಭ್ಯರ್ಥಿಗಳಿಗೆ ನಿಮ್ಮ ಪ್ರಾಶಸ್ತ್ಯ ಮತವನ್ನು ಒಂದು ಎಂದು ನಮೂದಿಸುವ ಮೂಲಕ ಅವರ ಆಯ್ಕೆ ಮಾಡಬೇಕು. ಹಳೇ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಿರುವುದು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಸರ್ಕಾರ. ಹೀಗಾಗಿ ಅರಿಗೆ ಮತ ಕೇಳುವ ಹಕ್ಕಿಲ್ಲ. ಶಿಕ್ಷಕರು, ಪದವೀಧರರು ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಹಳೇ ಪಿಂಚಣಿ ಮರು ಜಾರಿ ಬಗ್ಗೆ ಚಿಂತನೆ ನಡೆಸುವುದಾಗಿ ಕಾಂಗ್ರೆಸ್ ವಿಧಾನಸಭೆ ಚುನಾವಣೆ ಸಮಯದಲ್ಲಿ ಹೇಳಿತ್ತು. ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ಸ್ಪಷ್ಟ ನಿಲುವು ತಿಳಿಸಿದ್ದು, ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಅದನ್ನು ಹೇಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿದೆ.

7ನೇ ವೇತನ ಆಯೋಗದ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದ್ದು, ಅದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಬೇಕಿದೆ. ಈ ಚುನಾವಣೆಗಳು ಹಾಗೂ ಸಂಸತ್ ಚುನಾವಣೆ ಫಲಿತಾಂಶ ಬಂದ ನಂತರ ಸರ್ಕಾರ ತನ್ನ ನಿಲುವ ಸ್ಪಷ್ಟಪಡಿಸಲಿದೆ ಎಂದು ಭರವಸೆ ನೀಡುತ್ತೇನೆ.

ಶಿಕ್ಷಕರ ನೇಮಕಾತಿ, ಅನುದಾನ ವಿಚಾರವಾಗಿ ಅನುದಾನಿತ ಶಾಲೆಗಳ ಸಮಸ್ಯೆಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.

ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸ್ವಾಮಿ:

ನಮ್ಮ ವಕ್ಷದ ವರಿಷ್ಠರು ಕಳೆದ ಆರು ತಿಂಗಳ ಹಿಂದೆಯೇ ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ ರಾಮೂಜೀಗೌಡರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಅವರು 2 ಬಾರಿ ಚುನಾವಣೆ ಸ್ಪರ್ಧಿಸಿ ಅಲ್ಪಮತಗಳ ಅಂತರದಲ್ಲಿ ಅವರು ಸೋತಿದ್ದರು. ಆದರೂ ಅವರು ಪದವೀಧರರು ಹಾಗೂ ಶಿಕ್ಷಕರ ಸಮಸ್ಯೆ ಸ್ಪಂದಿಸಲು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮೂರನೇ ಬಾರಿಗೆ ಅವರಿಗೆ ಪಕ್ಷ ಅವಕಾಶ ಮಾಡಿಕೊಂಟ್ಟಿದೆ. 36 ವಿಧಾನಸಭಾ ಕ್ಷೇತ್ರಗಳ ಒಳಗೊಂಡ ಈ ಕ್ಷೇತ್ರದಲ್ಲಿ 36 ವೀಕ್ಷಕರನ್ನು ನೇಮಕ ಮಾಡಲಾಗಿದೆ. ಎಲ್ಲೆಡೆ ಉತ್ತಮವಾದ ವಾತಾವರಣ ನಿರ್ಮಾಣವಾಗಿದ್ದು, ಕಾಂಗ್ರೆಸ್ ಸರ್ಕಾರದ ನುಡಿದಂತೆ ನಡೆದ ಆಡಳಿತ ನಡೆಸಿರುವುದನ್ನು ಶಿಕ್ಷಕರು ಹಾಗೂ ಪದವೀಧರರು ಅರಿತು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಲು ತೀರ್ಮಾನಿಸಿದ್ದಾರೆ.

ಬಿಜೆಪಿಗೆ ಸೋಲಿನ ಭಯ ಬಂದಿದ್ದು, ನಮ್ಮ ಅಭ್ಯರ್ಥಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯ ಹಾಲಿ ಪರಿಷತ್ ಸದಸ್ಯರು ತಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಹೇಳಿ ಮತ ಕೇಳಬಹುದು. ಆದರೆ ನಮ್ಮ ಅಭ್ಯರ್ಥಿ ವಿರುದ್ಧ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇವರು ಒಕ್ಕಲಿಗರೇ ಅಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿ ನಾವು ಜಾತಿ ನೋಡಿ ಮತ ಕೇಳುತ್ತಿದ್ದೇವಾ? ಇವರು ಮಹಾರಾಷ್ಟ್ರದಲ್ಲಿ ಹುಟ್ಟಿರುವವರು, ಅಲ್ಲಿಂದ ಬೆಳಗಾವಿಗೆ ಬಂದಿದ್ದು ಒಕ್ಕಲಿಗರಲ್ಲ ಎಂದು ಬಿಜೆಪಿ ಶಾಸಕರು ಬೇಜವಾಬ್ದಾರಿಯಾಗಿ ಮಾತನಾಡಿದ್ದಾರೆ.

ಇವರ ತಂದೆ ನಾರಾಯಣ ಗೌಡರು, ತಾಯಿ ಅವರು ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನವರು. ನಮ್ಮ ಅಭ್ಯರ್ಥಿ 1980ರಲ್ಲಿ ಚಿಂತಾಮಣಿಯಲ್ಲಿ ಹುಟ್ಟಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮಾಡಿದ್ದು, ಅಲ್ಲೇ ಶಾಲಾ ಶಿಕ್ಷಕರಾಗಿ ಕೆಲಸವನ್ನು ಮಾಡಿದ್ದಾರೆ. ಇವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿದೆ. ಬಿಜೆಪಿ ಒಕ್ಕಲಿಗ ಮತದಾರರಲ್ಲಿ ಒಡಕು ಮೂಡಿಸಲು ಹುನ್ನಾರ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿ ಒಂದು ಸಮುದಾಯಕ್ಕೆ ಸೀಮಿತವಾಗದೇ ಪದವೀಧರರ ಸಮುದಾಯ ಪ್ರತಿನಿಧಿಸಿ ಅವರ ಸಮಸ್ಯೆಗೆ ಸ್ಪಂದಿಸಿದ್ದಾರೆ.

ಉತ್ತಮ ಕುಟುಂಬದಲ್ಲಿ ಹುಟ್ಟಿಬಂದಿರುವ ನಮ್ಮ ಅಭ್ಯರ್ಥಿ ಬಗ್ಗೆ ಸುಳ್ಳು ಆರೋಪಗಳಿಗೆ ಕಿವಿಗೊಡದೇ ಇವರ ಸೇವೆಗೆ ಮನ್ನಣೆ ನೀಡಿ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ.

ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ:

ನಮ್ಮ ಎದುರಾಳಿ ಅಭ್ಯರ್ಥಿ ನಾನು ಗೌಡ ಅಲ್ಲ, ಒಮ್ಮೆ ಮರಾಠಿ ಎಂದು ಹಾಳುತ್ತಾನೆ. ಮತ್ತೊಮ್ಮೆ ಆಂಧ್ರದವರು ಎಂದು ಹೇಳುತ್ತಾನೆ. ನಮ್ಮದು ಜಾತ್ಯಾತೀತ ರಾಷ್ಟ್ರ. ಎಲ್ಲಾ ಜಾತಿ ಧರ್ಮವನ್ನು ಸಮಾನವಾಗಿ ನೋಡುವ ಪಕ್ಷ ಕಾಂಗ್ರೆಸ್. ನನ್ನ ಜಾತಿ, ಊರಿನ ಬಗ್ಗೆ ಎದುರಾಳಿ ಪಕ್ಷದವರು ಮಾತನಾಡಿರುವಾಗ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹೀಗಾಗಿ ನಾನು ಸ್ಪಷ್ಟನೆ ನೀಡುತ್ತಿದ್ದೇನೆ. ನನ್ನ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಶಾಸಕರು ಯಾವ ರಾಜ್ಯದವರು? ಯಾವ ಊರಿನವರು? ಅವರ ವೃತ್ತಿ ಏನು?

ನಿಮ್ಮ ಅಭ್ಯರ್ಥಿಗೆ ಗೆಲ್ಲುವ ಯೋಗ್ಯತೆ ಇಲ್ಲವಾದರೆ ಸುಮ್ಮನೆ ಮನೆಯಲ್ಲಿ ಇರಲಿ. ಮತದಾರರು ಅವಕಾಶ ಮಾಡಿಕೊಟ್ಟಾಗ ಸದನದ ಒಳಗೆ ಹಾಗೂ ಹೊರಗೆ ಯಾವ ಕೆಲಸ ಮಾಡಿದ್ದಾರೆ? ಪದವೀಧರ ಕ್ಷೇತ್ರದ ಪರಿಷತ್ ಸದಸ್ಯ ಯಾರು ಎಂದರೆ ಯಾರಿಗೂ ಗೊತ್ತಿಲ್ಲ. ಅದು ನಿಮ್ಮ ಯೋಗ್ಯತೆ.

ನಾವು ಪದವೀಧರರಲ್ಲಿ ಜಾಗೃತಿ ಮೂಡಿಸಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಎದುರಾಳಿ ಅಭ್ಯರ್ಥಿಗೆ ಟಿಕೆಟ್ ನೀಡದಂತೆ ಬಿಜೆಪಿ ಪಕ್ಷ ನಿರ್ಧರಿಸಿತ್ತು. ಆದರೆ ಕೊನೆ ವಾರದಲ್ಲಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಚುನಾವಣೆಯಲ್ಲಿ ಗೆಲ್ಲುವುದು ಅಸಾಧ್ಯ ಎಂದು ಏನಾದರೂ ಮಾಡಿ ಅಪಪ್ರಚಾರ ಮಾಡಲು ನನ್ನ ಜಾತಿ ಹಾಗೂ ಊರಿನ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.

ನಾನು ಒಕ್ಕಲಿಗ ಕುಟುಂಬದಲ್ಲಿ ಹುಟ್ಟಿದ್ದು, ಒಕ್ಕಲಿಗ ಸಂಘದ ಸದಸ್ಯನಾಗಿದ್ದೇನೆ. ಆದರೂ ನಾವು ಜಾತಿ ಆದಾರದ ಮೇಲೆ ಮತ ಕೇಳುತ್ತಿಲ್ಲ. ಮಾನ್ಯ ವಿರೋಧ ಪಕ್ಷದ ನಾಯಕರು ಅನೇಕ ಒಕ್ಕಲಿಗ ಸಂಘದ ಸಭೆಗಳಲ್ಲಿ ನನ್ನ ಪಕ್ಕದಲ್ಲೂ ಕೂತು ನನ್ನ ಸ್ನೇಹಿತ ಎಂದು ಮಾತನಾಡಿದ್ದಾರೆ. ಆದರೆ ಚುನಾವಣಾ ಪ್ರಚಾರ ಸಭೆಯಲ್ಲಿ ಯಾವುದೇ ಬೇರೆ ರಾಜ್ಯದಿಂದ ಬಂದಿರುವ ಅವೇವೇಕಿ ನನ್ನ ಬಗ್ಗೆ ಮಾತನಾಡುತ್ತಿದ್ದಾಗ ಅಶೋಕ್ ಅವರು ಅದಕ್ಕೆ ಸ್ಪಷ್ಟನೆ ನೀಡಬೇಕಿತ್ತು. ನೀವು ಸುಮ್ಮನೆ ಇದ್ದೀರಿ ಎಂದರೆ ನೀವೇ ಅವರಿಗೆ ಕುಮ್ಮಕ್ಕು ನೀಡಿ ಅವರಿಂದ ಈ ರೀತಿ ಮಾತನಾಡಿಸಿದ್ದೀರಿ ಎಂಬುದು ಸ್ಪಷ್ಟವಾಗುತ್ತದೆ. ಬೇರೆ ರಾಜ್ಯದಿಂದ ಬಂದವನಿಗೆ ನಮ್ಮ ಬಗ್ಗೆ ಏನು ಗೊತ್ತಿರುತ್ತದೆ? ನಾನು ಒಕ್ಕಲಿಗ ಎಂಬುದಕ್ಕೆ ನನ್ನ ಆಧಾರ್ ಕಾರ್ಡ್, 10ನೇ ತರಗತಿ ಅಂಕಪಟ್ಟಿ, ಟಿಸಿ ಸಮೇತ ಸ್ಪಷ್ಟನೆ ನೀಡುತ್ತೇನೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧ ಎಂಬ ಸಚಿವ ರಾಜಣ್ಣ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿ.ಸಿ ಚಂದ್ರಶೇಖರ್ ಅವರು, “ಸಧ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವ ಯಾವುದೇ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಪಕ್ಷ ಮುಂಬರುವ ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲೇ ಎದುರಿಸಲಿದೆ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಯಾರೇ ಆದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಬೇರೆ ಕಡೆಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಬಾರದು” ಎಂದು ತಿಳಿಸಿದರು.

More News

You cannot copy content of this page