ಶಿವಮೊಗ್ಗ:- ಅಧಿಕಾರಿ ಸಾವಿಗೆ ಕಾರಣರಾದವರಿಗೆ ಮತ್ತು ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆರೋಪ ಎರಡು ಆಯಾಮದಲ್ಲಿ ಸಿಐಡಿ ತನಿಖೆ ನಡೆಸಲಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರ ಶಿವಮೊಗ್ಗದ ವಿನೋಬನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮೃತರಾಗಿರುವ ಅಧೀಕ್ಷಕ ಚಂದ್ರಶೇಖರ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಕುಟುಂಬಕ್ಕೆ ದುಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸಿ‌ನ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ‌. ಪ್ರಕರಣದ‌ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಏನು ನಡೆದಿದೆ ಎಂಬ ಸತ್ಯಾಂಶವನ್ನು ಪತ್ತೆ ಬಯಲು ಮಾಡಲಿದ್ದಾರೆ ಎಂದು ತಿಳಿಸಿದರು‌.

ಬೇರೆಬೇರೆ ಖಾತೆಗಳಿಗೆ ಕೋಟ್ಯಂತರ ರೂ. ವರ್ಗಾವಣೆಯಾಗಿದೆ ಎಂಬ ಆರೋಪವಿದೆ. ಚಂದ್ರಶೇಖರ್ ಅಲ್ಲಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಅವರ ಮೇಲೆ ಏನಾದರೂ ಒತ್ತಡವಿತ್ತೆ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ತನಿಖೆಯ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದರು.

ಚಂದ್ರಶೇಖರ್‌ನನ್ನು ಕಳೆದುಕೊಂಡಿರುವ ಕುಟುಂಬಸ್ಥರು ನೋವನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಒಡವೆ ಅಡವಿಟ್ಟು ಆತನ ಜೀವ ಉಳಿಸಿಕೊಂಡಿದ್ದರು. ವಿಧಿ ಈ ರೀತಿ ಮಾಡುತ್ತದೆ ಎಂದು ಭಾವಿಸಿರಲಿಲ್ಲ. ಕುಟುಂಬದ ಪರಿಸ್ಥಿತಿಯನ್ನು ಪತ್ನಿ ಅಳಲು ತೋಡಿಕೊಂಡರು. ಸರ್ಕಾರ ನೊಂದ ಕುಟುಂಬದ ಪರ ನಿಲ್ಲಲಿದೆ. ಜೂನ್ 6ರ ನಂತರ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಅಧಿಕಾರಿ ಚಂದ್ರಶೇಖರ್ ಸಾವಿಗೆ ಕಾರಣ ಮತ್ತು ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಎರಡನ್ನು ತನಿಖೆ ನಡೆಸಲಾಗುತ್ತದೆ. ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವುದಿಲ್ಲ. ಅಧೀಕ್ಷಕ ಚಂದ್ರಶೇಖರ್ ಸಾವಿಗೆ ಕಾರಣರಾದವರಿಗೆ ಕಾನೂನು‌ ಕ್ರಮ ಜರುಗಿಸಲಾಗುವುದು. ಅಕ್ರಮದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರನ್ನೆಲ್ಲ ಕಾನೂನು ಚೌಕಟ್ಟಿಗೆ ತರಲಾಗುವುದು ಎಂದು ಹೇಳಿದರು

ಹಣ ವರ್ಗಾವಣೆಗೆ ಸಚಿವರು ಮೌಖಿಕ ಆದೇಶ ಕೊಟ್ಟಿದ್ದರು ಎಂಬುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ತನಿಖೆಯ ವರದಿ ಬರುವವರೆಗೂ ಈ ಬಗ್ಗೆ ಏನನ್ನು ಹೇಳಲಾಗುವುದಿಲ್ಲ. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರ ಹೆಸರು ಉಲ್ಲೇಖವಾಗಿತ್ತು. ಈಶ್ವರಪ್ಪ ಪ್ರಕರಣಕ್ಕೆ, ಈ ಪ್ರಕರಣವನ್ನು ಹೋಲಿಸಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿಐಡಿ ತನಿಖೆಗೆ ಬಿಜೆಪಿಯವರು ಅನುಮಾನ ವ್ಯಕ್ತಪಡಿಸಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ತನಿಖಾ ಸಂಸ್ಥೆಗಳು ಸರ್ಕಾರದ ಅದೀನದಲ್ಲಿ ಕೆಲಸ ಮಾಡುತ್ತವೆ. ಸಿಬಿಐ ಸಹ ಕೇಂದ್ರ ಸರ್ಕಾರದ ಅದೀನದಲ್ಲಿ ಬರುತ್ತದೆ. ಸಿಬಿಐನಲ್ಲಿಯೂ ಸಹ ಇನ್‌ಫ್ಲ್ಯೂನ್ಸ್ ಆಗಬಹುದಲ್ಲವೇ? ನಾವೇ ನಂಬದೇ ಇದ್ದಲ್ಲಿ ಜನ ಹೇಗೆ ನಂಬುತ್ತಾರೆ ಎಂದು ಮರುಪ್ರಶ್ನಿಸಿದರು.

ಬಿಜೆಪಿಯವರನ್ನು ಕೇಳಿ ಆಡಳಿತ ನಡೆಸುವ ಅನಿವಾರ್ಯತೆ ನಮಗಿಲ್ಲ. ಅವರನ್ನು ಕೇಳಿ ಆಡಳಿತ ನಡೆಸುವ ಹಾಗಿದ್ದರೆ ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸುತ್ತಿರಲಿಲ್ಲ ಎಂದು ಟೀಕಿಸಿದರು.

ಸಚಿವ ನಾಗೇಂದ್ರ ಅವರುವನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂಬ ಬಿಜೆಪಿಯವರ ಒತ್ತಾಯದ ಕುರಿತು ಪ್ರತಿಕ್ರಿಯಿಸಿದ ಅವರು, ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತಾರೆ. ಅದಕ್ಕಾಗಿ‌ಯೇ ತನಿಖೆ ನಡೆಸಲಾಗುತ್ತಿದೆ. ಸತ್ಯ ಏನೆಂಬುದು ಹೊರಬರುತ್ತದೆ ಎಂದರು.

ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬ ಆರೋಪ ಶುದ್ಧ ಸುಳ್ಳು. ಬಿಜೆಪಿಯವರ ಆರೋಪಗಳಿಗೆ ಸಂದರ್ಭ ಬಂದಾಗ ಲೆಕ್ಕ ಕೊಡುತ್ತೇನೆ. ಯಾವ ಕಾನೂನಿನ ಸುವ್ಯವಸ್ಥೆ ಹದಗೆಟ್ಟಿದೆ. ಯಾವ ಕಾರಣಕ್ಕೆ ಕೊಲೆಗಳಾಗಿವೆ? ಯಾರದ್ದು ಆಗಿದೆ? ಅವರ ಅಧಿಕಾರದಲ್ಲಿ ಕಮ್ಯೂನಲ್ ಮರ್ಡರ್‌ಗಳಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿ. ಗೂಂಡಾಗಳನ್ನು ಬಿಡುವುದಿಲ್ಲ. ಹಬ್ಬ, ಆಚರಣೆ ಸಂದರ್ಭಗಳಲ್ಲಿ ಯಾವುದೇ ಅನಾಹುತ ಘಟನೆಗಳು ಸಂಭವಿಸದಂತೆ, ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ನಾಲ್ಕು ವರ್ಷದ ಆಡಳಿತ ಅವಧಿಯಲ್ಲಿ ನೇಮಕಾತಿ‌ ಮಾಡಿಕೊಂಡಿಲ್ಲ. ನಮ್ಮ ಸರ್ಕಾರ ಬಂದ ನಂತರ ಈಗ ನೇಮಕಾತಿ ನಡೆಯುತ್ತಿದೆ. 545 ಪಿಎಸ್ಐ ಹುದ್ದೆಗಳ ನೇಮಕಾತಿ ಪಟ್ಟಿ ಇನ್ನು ಕೆಲ ದಿನಗಳಲ್ಲಿ ಬಡುಗಡೆಯಾಗುತ್ತದೆ. ಅವರು ಕರ್ತವ್ಯಕ್ಕೆ ಹಾಜರಾಗಲು ಒಂದೂವರೇ ವರ್ಷ ಬೇಕಾಗುತ್ತದೆ ಎಂದರು.

ಆಯನೂರು ಮಂಜುನಾಥ್‌ಗೆ ಮತ ನೀಡಿ:-
ನೈರುತ್ಯ ಪದವಿಧರ ಕ್ಷೇತ್ರಕ್ಕೆ ಆಯನೂರು ಮಂಜುನಾಥ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಕೆಲಸ ಮಾಡಿದ್ದಾರೆ. ಹೆಚ್ಚಿನ ಅನುಭವ ಹೊಂದಿದ್ದಾರೆ. ಪದವಿಧರರ ಸಮಸ್ಯೆಗಳಿಗೆ ಸ್ಪಂದಿಸಲು ಸಮರ್ಥವಾದ ನಾಯಕರು. ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ‌ ಪ್ರಸನ್ನ ಕುಮಾರ್, ಮಾಜಿ‌ ಸಂಸದರಾದ ಆಯನೂರು ಮಂಜುನಾಥ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿ ಕುಮಾರ್, ಮುಖಂಡರಾದ ಯೋಗೇಶ್, ಶಿವಕುಮಾರ್ ಇದ್ದರು.

Leave a Reply

Your email address will not be published. Required fields are marked *

You cannot copy content of this page