Search

MB PATIL ON LOKSABHA RESULTS: ಚುನಾವಣೆಯಲ್ಲಿ ಹಿನ್ನಡೆ, ಕಾಂಗ್ರೆಸ್ ಆತ್ಮಾವಲೋಕನ: ಎಂ ಬಿ ಪಾಟೀಲ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ನಾವು ರಾಜ್ಯದಲ್ಲಿ ಕನಿಷ್ಠ ಪಕ್ಷ 14 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ 9 ಸ್ಥಾನಗಳಷ್ಟೇ ಬಂದಿವೆ. ಈ ಹಿನ್ನಡೆಗೆ ಕಾರಣಗಳೇನು ಎಂದು ಕಾಂಗ್ರೆಸ್ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಲಿದೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಶನಿವಾರ ಹೇಳಿದ್ದಾರೆ.

ಇಲ್ಲಿನ‌ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕಳೆದ ಒಂದು ವರ್ಷದಲ್ಲಿ ರಾಜ್ಯ ಸರಕಾರವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು, ಜನರಿಗೆ ಅದರ ಲಾಭ ಸಿಗುವಂತೆ ಮಾಡಿತ್ತು. ಆದರೂ ನಾವು ಎಡವಿದ್ದೆಲ್ಲಿ ಎನ್ನುವುದನ್ನು ನಾವು ಕಂಡುಕೊಳ್ಳಲಿದ್ದೇವೆ. ಗೆಲ್ಲಬಹುದಾಗಿದ್ದ ಕೆಲವು ಕ್ಷೇತ್ರಗಳು ಕೈಜಾರಿರುವುದು ನಮಗೆ ಗೊತ್ತಾಗಿದೆ’ ಎಂದರು.

ಚುನಾವಣೆ ಹಿನ್ನಡೆಗೆ ಯಾರೋ ಒಬ್ಬರನ್ನು ಹೊಣೆ ಮಾಡುವುದು ಸಾಧ್ಯವಿಲ್ಲ. ಸಚಿವರ ಅಥವಾ ಶಾಸಕರ ಮೌಲ್ಯಮಾಪನ ಕೂಡ ನಡೆಯುವುದಿಲ್ಲ. ಪಕ್ಷದ ಮುಂದಿನ ಕಾರ್ಯತಂತ್ರ ಏನಿರಬೇಕು ಎಂದಷ್ಟೇ ಚಿಂತಿಸಲಾಗುವುದು ಎಂದು ಅವರು ನುಡಿದರು.

ಈಗ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗುತ್ತಿದ್ದಾರೆ. ಕಳೆದ ಎರಡು ಬಾರಿಗಿಂತ ಈ ಸಲ ಬಿಜೆಪಿ ಬಲ ಕುಂದಿದೆ. ಹೀಗಾಗಿ ಈ ಸಲ ಅವರ ಸರಕಾರ ಎಷ್ಟು ದಿನ ಇರುತ್ತದೋ ಹೇಳಲು ಸಾಧ್ಯವಿಲ್ಲ. ಅದರಲ್ಲೂ ನಿತೀಶಕುಮಾರ್ ತರಹದ ವ್ಯಕ್ತಿಯನ್ನು ಇಟ್ಟುಕೊಂಡು ಸರಕಾರ ನಡೆಸುವುದು ಎಷ್ಟು ಕಷ್ಟ ಎನ್ನುವುದು ನಮಗೆ ಗೊತ್ತಿದೆ ಎಂದು ಅವರು ಭವಿಷ್ಯ ನುಡಿದರು.

ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಾಸ್ಥಾನಗಳಲ್ಲಿ ಬಿಜೆಪಿ ಹೆಚ್ಚಿನ ಕಡೆ ಸೋಲಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ಅದೇ ರೀತಿ ಆಗಿದೆ ಎಂದು ಅವರು ನೆನಪಿಸಿದರು.

More News

You cannot copy content of this page