Search

MODI CABINET MINISTERS: ದೇವರ ಹೆಸರಲ್ಲಿ ಪ್ರಲ್ಹಾದ ಜೋಶಿ ಪ್ರಮಾಣ ವಚನ: ಮೋದಿ ಸಂಪುಟದಲ್ಲಿ 2ನೇ ಬಾರಿ ಮಂತ್ರಿ

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಪ್ರಲ್ಹಾದ ಜೋಶಿ ಅವರು ಇಂದು ಸಂಜೆ ಮತ್ತೆ ಮೋದಿ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

2004ರಿಂದಲೂ ಧಾರವಾಡ ಲೋಕಸಭೆ ಕ್ಷೇತ್ರವನ್ನು ನಿರಂತರವಾಗಿ ಪ್ರತಿನಿಧಿಸುತ್ತಲೇ ಬಂದಿರುವ ಪ್ರಲ್ಹಾದ ಜೋಶಿ ಅವರು ಪ್ರಸ್ತುತ 5ನೇ ಬಾರಿ ಸಂಸದರಾಗಿ ಚುನಾಯಿತರಾಗಿ ಐತಿಹಾಸಿಕ ದಾಖಲೆ ಬರೆದಿದ್ದಾರೆ.

2019ರಲ್ಲಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದ ಪ್ರಲ್ಹಾದ ಜೋಶಿ ಅವರು ಪ್ರಧಾನಿ ಮೋದಿ ಸಂಪುಟದಲ್ಲಿ ಸಂಸದೀಯ ಮತ್ತು ಕಲ್ಲಿದ್ದಲು, ಗಣಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಇದೀಗ ಮತ್ತೆ ಮೋದಿ ಅವರ ಮೂರನೇ ಅವಧಿಯ NDA ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ ಎರಡನೇ ಬಾರಿ ಕೇಂದ್ರ ಸಚಿವನಾಗುತ್ತಿರುವುದು ಬಹಳ ಹೆಮ್ಮೆ ಹಾಗೂ ಸಂತಸ ತಂದಿದೆ ಎಂದರು ಜೋಶಿ.

ವಿಕಸಿತ ಭಾರತ ನಿರ್ಮಾಣದಲ್ಲಿ ಕೇಂದ್ರ ಸಚಿವನಾಗಿ ಸೇವೆ ಸಲ್ಲಿಸಲು ಮತ್ತೆ ಅವಕಾಶ ನೀಡಿದ ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಪಕ್ಷದ ವರಿಷ್ಠರಿಗೆ, ಕಾರ್ಯಕರ್ತರಿಗೆ ಹಾಗೂ ಚುನಾಯಿಸಿದ ಮತದಾರ ಬಾಂಧವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು ಸಚಿವ ಜೋಶಿ ಅವರು.

ಇದೇ ವೇಳೆ ರಾಜ್ಯ ಬಿಜೆಪಿ ವರಿಷ್ಠ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಧಾರವಾಡ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮತ್ತಿತರರು ಜೋಶಿ ಅವರಿಗೆ ಶುಭ ಹಾರೈಸಿದರು.

ಸಂಭ್ರಮ: ಪ್ರಲ್ಹಾದ ಜೋಶಿ ಅವರು ಕೇಂದ್ರ ಸಚಿವರಾಗಿ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಲೇ ಇತ್ತು ಧಾರವಾಡದಲ್ಲಿ ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

More News

You cannot copy content of this page