DK SHIVAKUMAR ON LOKSABHA DEFEAT: ಜನರ ತೀರ್ಪು ಎಚ್ಚರಿಕೆ ಗಂಟೆ, ನಮ್ಮ ತಪ್ಪುಗಳನ್ನು ಪರಾಮರ್ಶಿಸಿ ಸರಿಪಡಿಸಿಕೊಳ್ಳಬೇಕು: ಡಿ.ಕೆ. ಶಿವಕುಮಾರ್

ಬೆಂಗಳೂರು: “ಲೋಕಸಭೆ ಚುನಾವಣೆಯಲ್ಲಿನ ಜನರ ತೀರ್ಪು ನಮಗೆ ಎಚ್ಚರಿಕೆ ಗಂಟೆಯಾಗಿದ್ದು, ನಮ್ಮಿಂದ ಎಲ್ಲಿ ತಪ್ಪಾಗಿದೆ ಎಂದು ಪರಾಮರ್ಶೆ ನಡೆಸಿ ಅದನ್ನು ಸರಿಪಡಿಸಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರಿನ ಕುಮಾರಪಾರ್ಕ್ ಸರಕಾರಿ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಉತ್ತರಿಸಿದರು.

ಲೋಕಸಭೆ ಫಲಿತಾಂಶದ ಕುರಿತ ಪರಾಮರ್ಶೆ ಬಗ್ಗೆ ಪ್ರಶ್ನಿಸಿದಾಗ, “ಲೋಕಸಭಾ ಫಲಿತಾಂಶದ ಕುರಿತು ಮುಂದಿನ ದಿನಗಳಲ್ಲಿ ಎಲ್ಲಾ ನಾಯಕರ ಜೊತೆ ಪರಾಮರ್ಶನಾ ಸಭೆ ನಡೆಸಲಾಗುವುದು. ಸೋಲು ಸೋಲೇ. ಎಲ್ಲಿ ತಪ್ಪಾಗಿದೆ, ಏಕೆ ಹೆಚ್ಚುಕಮ್ಮಿಯಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದರು.

ಬೇರೆ ಬೇರೆ ಜಿಲ್ಲೆಗಳ ಪರಾಮರ್ಶೆಗೆ ಶೀಘ್ರವೇ ದಿನಾಂಕ ನಿಗದಿ

ಇಂದು (ಸೋಮವಾರ, ಜೂ.10) ಬೆಂಗಳೂರಿನ ಫಲಿತಾಂಶಗಳ ಬಗ್ಗೆ ಸಭೆ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಜಿಲ್ಲೆಗಳ ಸಭೆ ನಡೆಸಲಾಗುವುದು. ಶೀಘ್ರವೇ ಇದಕ್ಕೆ ದಿನಾಂಕ ನಿಗದಿ ಮಾಡುತ್ತೇವೆ. ಎಲ್ಲೆಲ್ಲಿ ಏನಾಗಿದೆ ಎನ್ನುವ ಸತ್ಯಶೋಧನೆ ಹಾಗೂ ಪರಿಹಾರ ಹುಡುಕುವ ಕೆಲಸ ಆಗಬೇಕು” ಎಂದು ತಿಳಿಸಿದರು.

ಕರ್ನಾಟಕ, ಹಿಮಾಚಲ ಪ್ರದೇಶದ ಚುನಾವಣೆಯ ಬಗ್ಗೆ ಎಐಸಿಸಿ ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಕೇಳಿದಾಗ “ನಾವು 14- 15 ಸ್ಥಾನಗಳನು ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿತ್ತು. ಆದರೆ ನಿರೀಕ್ಷಿತ ಸ್ಥಾನಗಳನ್ನು ಗಳಿಸಲು ನಾವು ವಿಫಲರಾಗಿದ್ದೇವೆ. ಜನರ ತೀರ್ಪಿಗೆ ನಾವು ತಲೆಬಾಗಲೇ ಬೇಕು” ಎಂದರು.

“ಪ್ರಮುಖ ನಾಯಕರ ಊರುಗಳಲ್ಲೇ ಮತ ಗಳಿಕೆಯಾಗಿಲ್ಲ. ನನ್ನ ಕ್ಷೇತ್ರದ ಅನೇಕ ನಾಯಕರ ಊರಿನಲ್ಲಿ ನಿರೀಕ್ಷಿತ ಮಟ್ಟಕ್ಕೆ ಮತಗಳು ಬಂದಿಲ್ಲ. ಇದಕ್ಕೆ ಏನಾದರೂ ಒಂದು ಸಬೂಬು ಹೇಳಿದರೆ ಯಾರು ಕೇಳುವುದಿಲ್ಲ. ಆದ ಕಾರಣ ಪರಿಶೀಲನೆ ನಡೆಸುತ್ತೇವೆ” ಎಂದು ತಿಳಿಸಿದರು.

ಸೋಲಿಗೆ ಒಂದಷ್ಟು ಶಾಸಕರು ಕಾರಣ ಎಂದು ಸಚಿವರುಗಳು ದೂರು ನೀಡಿದ್ದಾರೆ ಎಂದು ಕೇಳಿದಾಗ “ನನ್ನ ಬಳಿ ಬಂದು ಯಾರೊಬ್ಬರೂ ದೂರು ನೀಡಿಲ್ಲ. ಯಾರ ಮೇಲೆ ದೂರು ನೀಡಿದರು ಸುಖವಿಲ್ಲ, ಪ್ರಯೋಜನವೂ ಇಲ್ಲ. ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡವರು ಕಾರ್ಯಕರ್ತರ ಬಳಿ ಮಾತನಾಡಿ, ಎಲ್ಲಿ ತಪ್ಪಾಗಿದೆ ಎಂದು ಪರಿಶೀಲನೆ ನಡೆಸಿ, ಪರಿಹಾರ ಸಮೇತ ಇದಕ್ಕೆ ಉತ್ತರ ಕೊಡಬೇಕು. ಅಷ್ಟೇ” ಎಂದು ಹೇಳಿದರು.

ಬಹಿರಂಗವಾಗಿ ಹೇಳಿಕೆ ವಿರುದ್ಧ ಕಿಡಿ:

ಲೀಡ್ ಕೊಡಿಸದ ಸಚಿವರ ರಾಜಿನಾಮೆ ಪಡೆಯಲಿ ಎನ್ನುವ ಶಾಸಕ ಬಸವರಾಜ ಶಿವಗಂಗಾ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಶಾಸಕರುಗಳು ಅನಗತ್ಯವಾಗಿ ಬಹಿರಂಗ ಹೇಳಿಕೆ ನೀಡಬಾರದು. ಎಲ್ಲಿ ತಪ್ಪಾಗಿದೆ ಎಂದು ಎಲ್ಲರೂ ಕೂತು ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕು.” ಎಂದು ಎಚ್ಚರಿಕೆ ನೀಡಿದರು.

More News

You cannot copy content of this page