ಬೆಂಗಳೂರು ಜೂನ್ 11: ರಾಜ್ಯದ ಕರೆಗಳಲ್ಲಿ ಮುಂಗಾರು ಮಳೆಯ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನ ವೃದ್ದಿಸುವ ನಿಟ್ಟಿನಲ್ಲಿ SDMF ನಿಂದ 100 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಯಾಗಿದ್ದು, ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ಮೊದಲ ಹಂತದಲ್ಲಿ 93 ಕೆರೆಗಳನ್ನ ಅಭಿವೃದ್ದಿಪಡಿಸಲಾಗುವುದು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ತಿಳಿಸಿದರು.
ಇಂದು ವಿಕಾಸಸೌಧದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
2023 ನೇ ಸಾಲಿನಲ್ಲಿ ತೀವ್ರ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಉಂಟಾದ ಜಲಕ್ಷಾಮದಿಂದ ಸುಮಾರು 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ಬಾರಿ ಮುಂಗಾರು ಒಳ್ಳೆಯ ರೀತಿಯಲ್ಲಿ ಮಳೆಯನ್ನು ತರುವ ಮುನ್ಸೂಚನೆಯಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿನ ಕೆರೆಗಳಲ್ಲಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಹಾಗೂ ನೀರು ಪೋಲಾಗದಂತೆ ತಡೆಯಲು ಸಣ್ಣ ನೀರಾವರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಪರಿಶೀಲನೆ ನಡೆಸಿ ಸರಕಾರ SDMF ನಿಂದ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕೆರೆಗಳ ಅಭಿವೃದ್ಧಿ ಪಡಿಸಿ, ಕೆರೆಗಳಲ್ಲಿ ನೀರು ಶೇಖರಣೆ ಮಟ್ಟವನ್ನು ಹೆಚ್ಚಿಸಿ ರೈತರಿಗೆ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಮೊದಲ ಹಂತದಲ್ಲಿ 93 ಕೆರೆಗಳ ಅಭಿವೃದ್ದಿ:
ಮೊದಲ ಹಂತದಲ್ಲಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 93 ಕೆರೆಗಳ ಅಭಿವೃದ್ದಿಯನ್ನು ಕೈಗೊಳ್ಳಲಾಗುವುದು. ಈಗಾಗಲೇ 93 ಕೆರೆಗಳನ್ನು ಇಲಾಖೆ ಗುರುತಿಸಿದ್ದು ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಅನುಷ್ಠಾನಗೊಳಿಸಿದಲ್ಲಿ ಮುಂಬರುವ ದಿನಗಳಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಅಭಾವವನ್ನು ತಡೆಯಲು ಸಹಾಯಕವಾಗಲಿದೆ. ಹಾಗೆಯೇ ಮಳೆ ನೀರು ಕೆರೆಗಳಿಗೆ ಸರಾಗವಾಗಿ ಹರಿದು ನೀರು ಶೇಖರಣೆ ಗರಿಷ್ಠ ಮಟ್ಟದಲ್ಲಿ ಆಗುವಂತೆ ಮಾಡಲು ಕಾರ್ಯಯೋಜನೆಯನ್ನು ಸಿದ್ದಪಡಿಸಿ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಬಾಕ್ಸ್:
ರೈತರ ಹಿತರಕ್ಷಣೆ ನಮ್ಮ ಸರಕಾರದ ಪ್ರಮುಖ ಗುರಿಯಾಗಿದೆ. ಕೆರೆಗಳಲ್ಲಿ ನೀರಿನ ಸಾಮರ್ಥ್ಯ ಹೆಚ್ಚಿಸುವ ಮೂಲಕ ಅಂತರ್ಜಲ ವನ್ನ ವೃದ್ದಿಸುವುದು ಹಾಗೂ ಈ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಲಾಖೆ ಕ್ರಮಕೈಗೊಳ್ಳಲಿದೆ.