Search

G PARAMESHWAR: ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಗೃಹ ಸಚಿವ ಪರಮೇಶ್ವರ

ಬೆಂಗಳೂರು (ಜೂನ್ 25):- ನಿಗಮ ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರಗಳನ್ನು ಆಯ್ಕೆ ಮಾಡಲು ಮುಖ್ಯಮಂತ್ರಿಯವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟುವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಅನುಭವವಿದೆ. ಆದ್ದರಿಂದ ಯಾವ ತೊಂದರೆಯಾಗುವುದಿಲ್ಲ. ಒಂದು ತಿಂಗಳೊಳಗಾಗಿ ಆಯ್ಕೆ ಮಾಡಿ, ಪಟ್ಟಿ ನೀಡುತ್ತೇನೆ ಎಂದು ಹೇಳಿದರು.

ತುರ್ತುಪರಿಸ್ಥಿತಿ 49 ವರ್ಷ ಆದ ಹಿನ್ನೆಲೆಯಲ್ಲಿ ಬಿಜೆಪಿಯವರ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ದೇಶದಲ್ಲಿ ಬಡತನ ಇನ್ನೂ ಇದೆ. ಮತ್ತಷ್ಟು ಅಭಿವೃದ್ಧಿಯಾಗಬೇಕು, ಉದ್ಯೋಗ ಸಿಗಬೇಕಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನೆಲ್ಲ ಬಿಟ್ಟು 49 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿರುವುದನ್ನು ಮಾತನಾಡಲು ಹೊರಟಿರುವ ಬಿಜೆಪಿಯವರಿಗೆ ದೇಶದ ಅಭಿವೃದ್ಧಿ, ಭವಿಷ್ಯ, ಜನರ ಬಗ್ಗೆ ಕಾಳಾಜಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರದ ಕುರಿತು ಮಾತನಾಡಿ, ಎಲ್ಲರು ಒಂದೇ ಜೈಲಿನಲ್ಲಿ ಇರುವುದು ಸೂಕ್ತವಲ್ಲ ಎಂಬ ಕಾರಣದಿಂದ ಬಂಧಿಖಾನೆ ಅಧಿಕಾರಿಗಳು ಮತ್ತು ಪೊಲೀಸರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ತುಮಕೂರು ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದರು.

ಯುವತಿ ಪ್ರಬುದ್ಧ ಕೊಲೆ‌ ಪ್ರಕರಣ ಸಿಐಡಿಗೆ ವಹಿಸಿರುವ ಕುರಿತು ಪ್ರತಿಕ್ರಿಯಿಸಿ, ಈವರೆಗಿನ ತನಿಖೆ ಕೊಲೆಯಾದ ಯುವತಿಯ ಪಾಲಕರಿಗೆ ಸಮಾಧಾನ ತಂದಿಲ್ಲ. ಸಿಐಡಿಗೆ ವಹಿಸುವಂತೆ ಕೋರಿ ನನಗೂ ಮನವಿ ಮಾಡಿದ್ದರು. ಸಿಎಂ ಜೊತೆ ಚರ್ಚಿಸಿ, ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದೆ‌. ನಿನ್ನೆ ಮುಖ್ಯಮಂತ್ರಿಯವರು ಸಿಐಡಿಗೆ ವಹಿಸಿದ್ದಾರೆ ಎಂದರು.

ತನಿಖೆಯಲ್ಲಿ ಲೋಪ ಇರುವುದು ಗಮನಕ್ಕೆ ಬಂದಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಯುವತಿಯ ತಾಯಿಗೆ ಅನ್ನಿಸಿದೆ‌. ಮಗಳನ್ನು ಕಳೆದುಕೊಂಡಾಗ ಆ ಅಭಿಪ್ರಾಯ ಬರುವುದು ಸಹಜ. ಅಂತಹ ಅಭಿಪ್ರಾಯ ಮೂಡುವುದು ಬೇಡ ಎಂಬ ಕಾರಣದಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕುಟುಂಬಕ್ಕೆ ಬೆದರಿಕೆ ಇರುವುದನ್ನು ಸಿಐಡಿ ತನಿಖೆಯಲ್ಲಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು.

ನೀಟ್ ಅಕ್ರಮದ ಬಗ್ಗೆ ನರೇಂದ್ರ ಮೋದಿಯವರು ಮೌನ ವಹಿಸಿರುವ ಕುರಿತು ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ದೇಶದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬುದನ್ನು ಹೇಳಿದ್ದಾರೆ. ಆದರೆ, ಪ್ರದಾನಿ ಮೋದಿಯವರಿಗೆ ಈ ಬಗ್ಗೆ ಏನು ಅನ್ನಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಏನಾದರೂ ಅಂತಿಮ ನಿರ್ಧಾರ ಕೈಗೊಳ್ಳಬೇಕಲ್ಲವೇ? ಮರುಪರೀಕ್ಷೆ ನಡೆಸುವುದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಲ್ಲವೇ? ಇದೆಲ್ಲವನ್ನು ಪ್ರಧಾನಿ ಮಂತ್ರಿಯವರಾಗಲಿ ಅಥವಾ ಸಂಬಂಧಪಟ್ಟ ಮಂತ್ರಿಗಳಾಗಲಿ ಜವಾಬ್ದಾರಿಯುತವಾಗಿ ತೀರ್ಮಾನ ಪ್ರಕಟಿಸಬೇಕು. ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಆರಂಭವಾಗಬೇಕಿತ್ತು. ಮಕ್ಕಳು ಗೊಂದಲದಲ್ಲಿದ್ದು, ಇದರಿಂದ ಅವರ ಭವಿಷ್ಯ ಏನಾಗಬೇಕು? ಎಂದು ಪ್ರಶ್ನಿಸಿದರು‌.

ಶಿಕ್ಷಣ ಕ್ಷೇತ್ರದಲ್ಲಿ ನಾನು ಕೆಲಸ‌ ಮಾಡಿರುವುದರಿಂದ ನೀಟ್‌ನ ಸಾದಕ-ಬಾದಕಗಳ ಬಗ್ಗೆ ಗೊತ್ತಿದೆ. ಜಡ್ಜ್ಮೆಂಟ್ ಏನಾಯಿತು? 11 ನ್ಯಾಯಾಧೀಶರ ಜಡ್ಜ್‌‌ಮೆಂಟ್ ಬದಿಗೊತ್ತಿ ನೀಟ್ ಮಾಡಿದ್ದಾರೆ‌. ಅವರು ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಮಕ್ಕಳಿಗೆ ಸರಿಯಾಗಿ, ಸುಲಭವಾಗಿ ಸೀಟು ಸಿಗುವ ರೀತಿಯಲ್ಲಿ ಮಾಡಬೇಕಲ್ಲವೇ? ರಾಜ್ಯ ಸರ್ಕಾರ ಮಾಡಿದ್ದ ಸಿಇಟಿ ಪರೀಕ್ಷೆ ಮಾದರಿಯಾಗಿತ್ತು. ರಾಜ್ಯ ಸರ್ಕಾರಗಳಿಗೆ ವಹಿಸಿದರೆ ಯಶಸ್ವಿಯಾಗಿ ನಡೆಸುತ್ತಾರೆ. ಇದನ್ನು ವ್ಯವಸ್ಥಿತವಾಗಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಹಿರಿಯ ಶಾಸಕರಿಗೆ ಸ್ಥಾನಕ್ಕೆ ಒತ್ತಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಪುಟ ಪುನರ್‌ರಚನೆ ಬಗ್ಗೆ ನಾನು ಏನು ಹೇಳಲು ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಎಲ್ಲವು ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು.

ತುಮಕೂರು ಬಂದ್ ಕುರಿತು ಪ್ರತಿಕ್ರಿಯಿಸಿ, ಹೇಮಾವತಿ ಕ್ಯಾನಲ್ ಸಂಬಂಧಿಸಿದಂತೆ ನೀರಾವರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಭೆ ನಡೆಸಿದ್ದರು. ನೀರಾವರಿ ತಜ್ಞರೊಂದಿಗೆ ಚರ್ಚಿಸಿ ವಿಚಾರ ತಿಳಿಸಲಾಗಿತ್ತು. ನೀರಿನ ಹಂಚಿಕೆಯಲ್ಲಿ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಭೆಯಲ್ಲಿ ಡಿಸಿಎಂ ಅವರು ಭರವಸೆ ನೀಡಿದ್ದರು. ಆಗ ಎಲ್ಲರು ಒಪ್ಪಿಕೊಂಡಿದ್ದು, ತೊಂದರೆಯಾಗುವುದಿಲ್ಲವಾದರೆ ನೀರು ತೆಗೆದುಕೊಂಡು ಹೋಗುವಂತೆ ಎಲ್ಲ ಶಾಸಕರು ತಿಳಿಸಿದ್ದರು. ಈಗ ಪ್ರತಿಭಟನೆ ಮಾರ್ಗವನ್ನು ಹಿಡಿದಿದ್ದಾರೆ. ಈ ಬಗ್ಗೆ ಮುಂದೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಉಪಮುಖ್ಯಮಂತ್ರಿಯವರಿಗೆ ಚರ್ಚಿಸುತ್ತೇನೆ ಎಂದು ಹೇಳಿದರು‌.

More News

You cannot copy content of this page