Search

G PARAMESHWAR DELHI VISIT: ಇಲಾಖೆಗೆ ವಿಶೇಷ ಅನುದಾನ ಕೋರಿ ಪ್ರಸ್ತಾವನೆ: ಗೃಹ ಸಚಿವ ಪರಮೇಶ್ವರ

ಬೆಂಗಳೂರು (ಜೂನ್ 27):- ರಾಜ್ಯ ಗೃಹ ಇಲಾಖೆಯ ಆಧುನೀಕರಣಗೊಳಿಸಲು ವಿಶೇಷ ಅನುದಾನಕ್ಕಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಇಲಾಖೆಯ ಕೆಲ ಯೋಜನೆಗಳು ಬಾಕಿ ಉಳಿದಿವೆ. ಹೀಗಾಗಿ ಮುಖ್ಯಮಂತ್ರಿಯವರು ಮತ್ತು ಉಪಮುಖ್ಯಮಂತ್ರಿಯವರು ನನ್ನನ್ನು ದೆಹಲಿಗೆ ಕರೆದಿದ್ದಾರೆ ಎಂದರು.

ಪೊಲೀಸ್ ಗೃಹ ಯೋಜನೆಯಡಿ 10 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ. ರಾಜ್ಯ ಸರ್ಕಾರವು ಶೇ. 75ರಷ್ಟು ಪೊಲೀಸರಿಗೆ ಮನೆ ನಿರ್ಮಿಸಿಕೊಡುವ ಗುರಿ ಇಟ್ಟುಕೊಂಡಿದ್ದೇವೆ. ಪ್ರಸ್ತುತ ಶೇ. 40ರಷ್ಟು ಮನೆ ನಿರ್ಮಿಸಲಾಗಿದೆ. ಅಲ್ಲದೇ, ಇಲಾಖೆಯ ಆಧುನೀಕರಣಕ್ಕೆ ಅನುದಾನ ನೀಡುವಂತೆಯೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ರಾಜ್ಯಕ್ಕೆ ಬರಬೇಕಾದ ಅನುದಾನದ ಬಗ್ಗೆ ‌ಸಿಎಂ ಅವರು ಪ್ರಧಾನ ಮಂತ್ರಿಯ ಸಮಯ ಕೇಳಿದ್ದಾರೆ. ಅಲ್ಲಿಯೂ ಪ್ರಸ್ತಾಪ‌ ಮಾಡಲಾಗುವುದು ಎಂದು ಹೇಳಿದರು‌.

ದೆಹಲಿಯಲ್ಲಿ ನಡೆಯಲಿರುವ ಸಭೆಗೆ ಕೇಂದ್ರದ ಎಲ್ಲ ಸಚಿವರನ್ನು ಹಾಗೂ ಎಲ್ಲ ಸಂಸದರನ್ನು ಆಹ್ವಾನಿಸಲಾಗಿದೆ. ರಾಜ್ಯದ ಸಮಸ್ಯೆಗಳನ್ನು ಗಮನಕ್ಕೆ ತರಬೇಕೆಂಬುದು ಉದ್ದೇಶ‌. ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಭಿನಂದನೆ ತಿಳಿಸುತ್ತೇವೆ‌.

ಎಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ರಾಜ್ಯದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದಾರೆ. ಕೇಂದ್ರದ ಕ್ಯಾಬಿನೆಟ್ ಸಚಿವರಾಗಿರುವುದರಿಂದ ರಾಜ್ಯಕ್ಕೆ ಹೆಚ್ಚು ಅನುದಾನ ಕೊಡಿಸುತ್ತಾರೆ ಎಂಬ ವಿಶ್ವಾಸವಿದೆ. ಕೊಡಿಸಲಿಲ್ಲವಾದರೆ ರಾಜ್ಯಕ್ಕೆ ನಿರಾಸೆ ಮಾಡಿದರು ಎಂದು ಮುಂದೆ ಹೇಳಬೇಕಾಗುತ್ತದೆ ಎಂದರು.

ಹೆಚ್ಚುವರಿ ಡಿಸಿಎಂ ನೇಮಕ ಜೊತೆಗೆ ಅಧ್ಯಕ್ಷರ ಬದಲಾವಣೆ ಕುರಿತು ಹೈಕಮಾಂಡ್ ಮುಂದೆ ಒತ್ತಾಯಿಸುತ್ತೀರ ಎಂದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಣ್ಣ ಅವರು ಈ ಸಭೆಗೆ ಬರುತ್ತಿಲ್ಲ. ಬಂದಿದ್ದರೆ ಅವರು ಒತ್ತಾಯಿಸುತ್ತಿದ್ದರೋ ಎನೋ ಗೊತ್ತಿಲ್ಲ. ಈ ವಿಚಾರ ಹೈಕಮಾಂಡ್ ಬಿಟ್ಟಿದ್ದು. ಕೆಲವರು ಅವರ ಅಭಿಪ್ರಾಯ ಹೆಳುತ್ತಾರೆ. ಅದನ್ನು ತಪ್ಪು ಅಂತ ಯಾರು ಕೂಡ ಭಾವಿಸಬಾರದು. ಹೈಕಮಾಂಡ್ ಗಮನಿಸಿದರೆ ನಿರ್ಧಾರ ಮಾಡುತ್ತಾರೆ. ನಾವ್ಯಾರು ಅದರ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೊಲೀಸ್ ದಂಪತಿ ವರ್ಗಾವಣೆ ಕುರಿತು ಪ್ರತಿಕ್ರಿಯಿಸಿ, ಇಲಾಖೆಯ ಪತಿ-ಪತ್ನಿ ಸಿಬ್ಬಂದಿ ವರ್ಗಾವಣೆಯ ಕುರಿತು ಕಳೆದ ಎರಡು ತಿಂಗಳಿಂದ ಬೇಡಿಕೆ ನೀಡಿದ್ದಾರೆ. ವರ್ಗಾವಣೆ ಮಾಡಲು ನಿಯಮಗಳಿರಲಿಲ್ಲ. ಅಂತರ ಜಿಲ್ಲಾ ವರ್ಗಾವಣೆ ಹಾಗೂ ಪತಿ-ಪತ್ನಿ ವರ್ಗಾವಣೆಗೆ ನಿಯಮಗಳನ್ನು ರೂಪಿಸಲಾಗುತ್ತಿದೆ‌ ಎಂದು ತಿಳಿಸಿದರು.

More News

You cannot copy content of this page