Search

NADAPRABHU KEMPEGOWDA JAYANTI: ಬೆಂಗಳೂರು ಕಟ್ಟಿದ ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: “ಕೆಂಪೇಗೌಡರು ಒಕ್ಕಲಿಗರಾದರೂ ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ವಿಶ್ವಮಾನ್ಯ ಬೆಂಗಳೂರನ್ನು ಕಟ್ಟಿದ ಅವರು ಎಲ್ಲಾ ಜಾತಿ, ಧರ್ಮಕ್ಕೂ ನಾಡಪ್ರಭುಗಳಾಗಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಕಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ 515 ನೇ ಜಯಂತ್ಯೋತ್ಸವದಲ್ಲಿ ಮಾತನಾಡಿದ ಅವರು ಹೇಳಿದ್ದಿಷ್ಟು;

“ನಾಡಪ್ರಭುಗಳ ಹೆಸರನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಶಿಕ್ಷಣ ಇಲಾಖೆಯಿಂದ ಎಲ್ಲಾ ಶಾಲೆಗಳಲ್ಲಿ ಕೆಂಪೇಗೌಡರ ಬಗ್ಗೆ ಚರ್ಚಾ ಸ್ಪರ್ಧೆ ನಡೆಸಲು ಹಾಗೂ ತಿಳುವಳಿಕೆ ನೀಡಲು ಪ್ರತಿ ತಾಲ್ಲೂಕಿಗೆ ಬಿಬಿಎಂಪಿಯಿಂದ ತಲಾ 1 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಯಾವ ರೀತಿ ಕಾರ್ಯಕ್ರಮ ರೂಪಿಸಬೇಕು ಎಂದು ಪ್ರಧಾನ ಕಾರ್ಯದರ್ಶಿಗಳು ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರೆ.”

“ಸರ್ಕಾರದಿಂದ ಸುಮಾರು 25 ಕ್ಕೂ ಹೆಚ್ಚು ಜಯಂತಿಗಳನ್ನು ಆಚರಿಸಲಾಗುತ್ತದೆ. ಈಗ ನೀಡುತ್ತಿರುವ ಹಣ ಕಡಿಮೆಯಾಗುತ್ತಿದ್ದು ಆದ ಕಾರಣ ನಾಡಪ್ರಭುಗಳ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿ ತಾಲ್ಲೂಕು ಮಟ್ಟಕ್ಕೂ ಬಿಬಿಎಂಪಿಯಿಂದ 1 ಲಕ್ಷ ರೂಪಾಯಿ ನೀಡಲು ಸೂಚನೆ ನೀಡಲಾಗಿದೆ.”

ನಾಡಪ್ರಭು ಕೆಂಪೇಗೌಡರ ಜಯಂತಿಗೆ ಪ್ರತಿ ಸಮುದಾಯದ ಗುರುಗಳನ್ನು ಆಹ್ವಾನಿಸಿಬೇಕು. ಇವರು ಜಾತಿ- ಧರ್ಮಗಳನ್ನು ಮೀರಿದ ನಾಯಕ. ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ಪ್ರತಿ ಆಚಾರ, ವಿಚಾರ ವೃತ್ತಿ, ಸಮಾಜ, ಸಮುದಾಯಗಳನ್ನು ಕಾಪಾಡಿಕೊಂಡು ಬರುತ್ತಿದ್ದವರು ಇವರು.”

“ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುತ್ತಾರೆ. ಅದೇ ರೀತಿ ನಾವು ಮತ್ತು ಮುಂದಿನ ಪೀಳಿಗೆ ಕೆಂಪೇಗೌಡರನ್ನು ಮರೆಯಬಾರದು. ಒಬ್ಬ ವ್ಯಕ್ತಿ ಹಿಂದೆ ಎಷ್ಟು ಜನ ಇರುತ್ತಾರೆ ಎನ್ನುವುದು ಮುಖ್ಯವಲ್ಲ. ಅವರ ಸಾಧನೆ ಹಾಗೂ ಎಷ್ಟು ಜನರ ಬದುಕನ್ನು ಬದಲಾಯಿಸಿದ್ದಾರೆ ಎನ್ನುವುದು ಮುಖ್ಯ. ಇದು ಕೆಂಪೇಗೌಡರ ಜೀವನದಲ್ಲಿ ನಿಜವಾಗಿದೆ.”

“ಅವರು ಕಟ್ಟಿಸಿದ ನಾಲ್ಕು ಗೋಪುರಗಳನ್ನು ಮೀರಿ ಬೆಂಗಳೂರು ಬೆಳೆಯುತ್ತದೆ ಎನ್ನುವ ಕಲ್ಪನೆಯೂ ಕೆಂಪೇಗೌಡರಿಗೆ ಇರಲಿಲ್ಲ. 1 ಕೋಟಿ 40 ಲಕ್ಷ ಜನರು ರಾಜ್ಯ ರಾಜಧಾನಿಯಲ್ಲಿ ವಾಸವಿದ್ದಾರೆ. ಇಲ್ಲಿನ ಜನರ ಬದುಕು ಹಸನಾಗಬೇಕು. ಬೆಂಗಳೂರಿನ ಸಂಸ್ಕೃತಿಯನ್ನು ಕಾಪಾಡಬೇಕು, ಬೆಂಗಳೂರಿಗೆ ಹೊಸ ದಿಕ್ಕನ್ನು ನೀಡಬೇಕು.”

150 ಕಿ.ಮೀ ಮೇಲ್ಸೆತುವೆ ನಿರ್ಮಾಣ, ಬಿಜಿನೆಸ್ ಕಾರಿಡಾರ್ ಗೆ ಚಾಲನೆ

“ಪೆರಿಫೆರಲ್ ರಿಂಗ್ ರಸ್ತೆ ಕಾರ್ಯರೂಪಕ್ಕೆ ಬರೆದೆ ನಿಂತುಹೋಗಿತ್ತು. ಏಳೆಂಟು ಬಾರಿ ಯಾರೂ ಸಹ ಟೆಂಡರ್ ಅಲ್ಲಿ ಭಾಗವಹಿಸಿರಲಿಲ್ಲ. ಈಗ ಬಿಡಿಎ ಮೂಲಕ ಇದಕ್ಕೆ ಹೊಸ ರೂಪ ನೀಡಲಾಗಿದೆ. ಸಧ್ಯದಲ್ಲೇ ಕ್ಯಾಬಿನೆಟ್ ಮುಂದೆಯಿಟ್ಟು ಬಿಜಿನೆಸ್ ಕಾರಿಡಾರ್ ಎಂದು ಪರಿವರ್ತನೆ ಮಾಡಲಾಗುವುದು. ಸಂಚಾರ ದಟ್ಟಣೆ ನಿವಾರಣೆಗೆ 150 ಕಿ.ಮೀನಷ್ಟು ಮೇಲ್ಸೆತುವೆಗಳ ನಿರ್ಮಾಣ ಹಾಗೂ ಸಿಗ್ನಲ್ ಫ್ರೀ ಕಾರಿಡಾರ್ ಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗಿದೆ. ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದು, ಹೊಸ ರೀತಿಯನ್ನು ರಾಜಧಾನಿಯನ್ನು ನಿರ್ಮಾಣ ಮಾಡಲು ಬದ್ದವಾಗಿದೆ” ಎಂದು ತಿಳಿಸಿದರು.

“ಮುಂದಿನ ವರ್ಷದಿಂದ ಕೆಂಪೇಗೌಡರ ಜಯಂತಿಗೆ ವಿಶೇಷ ಸ್ವರೂಪ ನೀಡಿ ಆಚರಿಸಲಾಗುವುದು. ಸುಮ್ಮನಹಳ್ಳಿ ರಸ್ತೆ ಬಳಿಯ 5 ಎಕರೆ ಜಾಗದಲ್ಲಿ ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರದ ಕಚೇರಿಯನ್ನು ಅತ್ಯುತ್ತಮ ಸ್ವರೂಪದಲ್ಲಿ ನಿರ್ಮಾಣ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಾಸಕರು, ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಆವತಿಯಲ್ಲಿ 10 ಎಕರೆ ವಿಸ್ತೀರ್ಣದ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಯಶಸ್ವಿಯಾಗಿದ್ದಾರೆ” ಎಂದು ಹೇಳಿದರು.

“ಕರ್ನಾಟಕದ ಸಂಸದರ ಜೊತೆ ಚರ್ಚೆ ಮಾಡಲು ಹಾಗೂ ಇತರೆ ವಿಚಾರಗಳಿಗಾಗಿ ದೆಹಲಿಗೆ ಹೋಗುತ್ತಿರುವ ಕಾರಣ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಮಾಡಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸೂಕ್ತ ದಿನಾಂಕವನ್ನು ನಿಗದಿ ಮಾಡಿ ಪ್ರಶಸ್ತಿ ವಿತರಣೆ ಮಾಡಲಾಗುವುದು” ಎಂದರು.

More News

You cannot copy content of this page