ಬೆಂಗಳೂರು: ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಗರದಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವುದಕ್ಕೆ ದಕ್ಷಿಣ ಕೊರಿಯಾದ ಉದ್ಯಮಿಗಳನ್ನು ಆಹ್ವಾನಿಸಲು ಕರ್ನಾಟಕ ರಾಜ್ಯ ಸರ್ಕಾರವು ಮಂಗಳವಾರ ಸೋಲ್‌ನಲ್ಲಿ ಯಶಸ್ವಿಯಾಗಿ ರೋಡ್‌ಷೋ ನಡೆಸಿತು.
ರೋಡ್‌ಷೋನಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು, ವಿದ್ಯುತ್‌ಚಾಲಿತ ವಾಹನಗಳ ಭವಿಷ್ಯ, ಅತ್ಯಾಧುನಿಕ ಯಂತ್ರೋಪಕರಣ, ಬಾಹ್ಯಾಕಾಶ ತಂತ್ರಜ್ಞಾನ ಸೇರಿದಂತೆ ವಿವಿಧ ಉದ್ದಿಮೆ ವಲಯಗಳಲ್ಲಿ ರಾಜ್ಯದಲ್ಲಿ ಇರುವ ವಿಪುಲ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ʼಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಲು ರಾಜ್ಯ ಸರ್ಕಾರ ನೀಡಿದ ಆಹ್ವಾನ ಮನ್ನಿಸಿ ಕೆಲ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿ, ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಕೈಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆʼ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕದಲ್ಲಿ ಇರುವ ಪೂರಕ ಪರಿಸರ ಹಾಗೂ ಬಂಡವಾಳ ಹೂಡಿಕೆಗೆ ಕರ್ನಾಟಕವು ಅಚ್ಚುಮೆಚ್ಚಿನ ತಾಣವಾಗಿರುವುದನ್ನು ರೋಡ್‌ಷೋನಲ್ಲಿ ಮನವರಿಕೆ ಮಾಡಿಕೊಡಲಾಯಿತು. ಭಾರತದಲ್ಲಿ ಪ್ರಮುಖ ಆವಿಷ್ಕಾರ ಕೇಂದ್ರವಾಗಿರುವ ಕರ್ನಾಟಕವು ರೋಡ್‌ಷೋದಲ್ಲಿ ಕೊರಿಯಾದ ಉದ್ಯಮಿಗಳ ಗಮನ ಸೆಳೆಯುವಲ್ಲಿ ಸಫಲವಾಯಿತು.
ದಕ್ಷಿಣ ಕೊರಿಯಾದಲ್ಲಿನ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಐಸಿಸಿಕೆ) ಸಹಯೋಗದಲ್ಲಿ ಈ ರೋಡ್‌ಷೋ ಏರ್ಪಡಿಸಲಾಗಿತ್ತು. ಸಚಿವರ ನೇತೃತ್ವದಲ್ಲಿನ ರಾಜ್ಯದ ಉನ್ನತ ಮಟ್ಟದ ನಿಯೋಗವು, ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆಗಳ ವಿಸ್ತರಣೆಗೆ ಕೊರಿಯಾದ ಕಂಪನಿಗಳಿಗೆ ಕರ್ನಾಟಕದಲ್ಲಿ ಇರುವ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟಿತು. ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಉನ್ನತ ಮಟ್ಟದ ನಿಯೋಗವು ದಕ್ಷಿಣ ಕೊರಿಯಾಕ್ಕೆ 5 ದಿನಗಳ ಭೇಟಿ ನೀಡುತ್ತಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ರೋಡ್‌ಷೋನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಈ ರೋಡ್‌ಷೋನಲ್ಲಿ ದಕ್ಷಿಣ ಕೊರಿಯಾದ 45ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದವು. ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ಆಸಕ್ತಿ ಪ್ರದರ್ಶಿಸಿದವು.
ಒಪ್ಪಂದಗಳಿಗೆ ಅಂಕಿತ: ಮಷಿನ್‌ಟೂಲ್ಸ್ ಮತ್ತು ಕೈಗಾರಿಕಾ ಯಂತ್ರೋಪಕರಣ ತಯಾರಿಕಾ ಕಂಪನಿ ಡಿಎನ್ ಸೊಲುಷನ್ಸ್, ರಾಜ್ಯದಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸಲು ₹ 1,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ರಾಜ್ಯ ಸರ್ಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು. ಕಂಪನಿಯ ಅಧ್ಯಕ್ಷ ಸಂಘುನ್ ಕಿಮ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಬೆಂಗಳೂರು ಬಳಿಯ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶದಲ್ಲಿ (ಐಟಿಐಆರ್) ಈ ತಯಾರಿಕಾ ಘಟಕ ಅಸ್ತಿತ್ವಕ್ಕೆ ಬರಲಿದೆ.
ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಬಿಡಿಭಾಗಗಳನ್ನು ತಯಾರಿಸುವ ಇಎಂಎನ್‌ಐ ಕಂಪನಿಯು ಬ್ಯಾಟರಿಕೋಶಗಳ ದಾಸ್ತಾನು ಹಾಗೂ ಬ್ಯಾಟರಿಕೋಶಗಳ ಮರುಬಳಕೆ ಸಂಗ್ರಹಣಾ ಕೇಂದ್ರವನ್ನು ₹ 40 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಒಪ್ಪಂದಕ್ಕೆ ರಾಜ್ಯ ಸರ್ಕಾರದ ಜೊತೆ ಸಹಿ ಹಾಕಿತು.
ಕೊರಿಯಾ ವಾಣಿಜ್ಯೋದ್ಯಮ ಮಹಾಸಂಘದ (ಕೆಸಿಸಿಐ) ಪದಾಧಿಕಾರಿಗಳ ಜೊತೆಗೂ ನಿಯೋಗವು ಸಮಾಲೋಚನೆ ನಡೆಸಿತು.