ಬೆಂಗಳೂರು: ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು DC-CEO ಗಳ ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಸಂಗ ನಡೆಯಿತು.
ಅಲ್ಪಸಂಖ್ಯಾತ ಇಲಾಖೆ ಚರ್ಚೆ ನಡೆಯುವ ಸಂದರ್ಭದಲ್ಲಿ ಕಾರ್ಯದರ್ಶಿ ಮನೋಜ್ ಜೈನ್ ಅವರು “ಇಂಡೀಕರಣ” ಪದ ಬಳಸಿದರು.
ಈ ವೇಳೆ ಮುಖ್ಯಮಂತ್ರಿಗಳು ಕುವೆಂಪು ಅವರ ಮಾತನ್ನು ಪ್ರಸ್ತಾಪಿಸಿ, ಇಂಡೀಕರಣ ಎಂದರೆ ಹೆಚ್ಚಿನವರಿಗೆ ಅರ್ಥ ಆಗುವುದಿಲ್ಲ. ಹೀಗಾಗಿ Mutation ಪದವನ್ನೇ ಬಳಸಿ ಎನ್ನುತ್ತಾ, “ಯಾವುದಾದರೂ ಇಂಗ್ಲಿಷ್ ಪದಕ್ಕೆ ಕನ್ನಡದಲ್ಲಿ ಸೂಕ್ತ ಪದ ಇಲ್ಲದಿದ್ದರೆ ಅದನ್ನು ಇಂಗ್ಲಿಷ್ ನಲ್ಲೇ ಬಳಸಬೇಕು ಎಂದು ಕುವೆಂಪು ಹೇಳಿದಾರೆ ಗೊತ್ತಾ” ಎಂದು ಕಿರು ಪಾಠ ಮಾಡಿದರು. ಇಡೀ ಸಭೆ ಕುವೆಂಪು ಪಾಠವನ್ನು ಸಂಭ್ರಮಿಸಿತು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಜಿಲ್ಲಾಧಿಕಾರಿಗಳು ಚುರುಕುಗೊಳಿಸಬೇಕು: ಸಿಎಂ ಸೂಚನೆ
ರಾಜ್ಯದಲ್ಲಿ 217 ವಕ್ಫ್ ಆಸ್ತಿಗಳ ಒತ್ತುವರಿ ತೆರವು ಕಾರ್ಯ ಬಾಕಿಯಿದೆ
22581 ವಕ್ಫ್ ಖಾತೆ ಮ್ಯುಟೇಶನ್ ಬಾಕಿಯಿದ್ದು, ಇದನ್ನು ತ್ವರಿತಗೊಳಿಸಬೇಕು. ನ್ಯಾಯಾಲಯಗಳಲ್ಲಿ ತಡೆ ಇರುವ ಪ್ರಕರಣಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಬೇಕು ಎಂದರು.
ಅರಣ್ಯ ವಾಸಿಗಳಿಗೆ ಭೂಮಿ ಹಕ್ಕು ಕುರಿತು ನಿರ್ಣಯ

ರಾಜ್ಯದಲ್ಲಿ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಅಧಿನಿಯಮದಡಿ 298798 ಅರ್ಜಿ ಸ್ವೀಕೃತಗೊಂಡಿದ್ದು, 258086 ಅರ್ಜಿಗಳು ತಿರಸ್ಕೃತಗೊಂಡಿವೆ
24186 ಅರ್ಜಿಗಳು ಇತ್ಯರ್ಥವಾಗದೇ ಬಾಕಿಯಿವೆ. ಇದುವರೆಗೆ 16426 ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, 56479 ಎಕ್ರೆ ಭೂಮಿ ಮಂಜೂರು ಮಾಡಲಾಗಿದೆ. ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಖಾತ್ರಿಪಡಿಸಲು ಮುಂದಿನ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದರು
*ಬುಡಕಟ್ಟು ಸಮುದಾಯ ಅಭಿವೃದ್ಧಿ
ರಾಜ್ಯದ 5ಜಿಲ್ಲೆಗಳ ಹಾಡಿಗಳಲ್ಲಿ ವಾಸಿಸುತ್ತಿರುವ ಜೇನುಕುರುಬ ಹಾಗೂ ಕೊರಗ ಜನಾಂಗದವರಿಗೆ ಸೌಲಭ್ಯಗಳನ್ನು ಕಲ್ಪಿಸಲು ಪಿಎಂ ಜನಮನ್ ಯೋಜನೆ ಜಾರಿಯಲ್ಲಿದೆ.
ಮೈಸೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ 44040 ಜೇನುಕುರುಬ ಹಾಗೂ 13007 ಕೊರಗರು ಇದ್ದಾರೆ. ಈ ಜನಾಂಗದ 19 ಸಾವಿರ ಕುಟುಂಬಗಳಿದ್ದು, 6871 ಕುಟುಂಬಗಳಿಗೆ ಮಾತ್ರ ಮನೆಯಿದೆ. 12ಸಾವಿರ ಮನೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸ್ಥಳ ಗುರುತಿಸಿ ಮನೆಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು
ಗುರುತಿನ ಚೀಟಿ ಸಮಸ್ಯೆಯನ್ನು ಬಗೆಹರಿಸಬೇಕು. ಈ ಜನಾಂಗಗಳ ಅಭಿವೃದ್ಧಿಗೆ 9 ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಯೋಜನೆಗಳಿದ್ದು, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಅನುಷ್ಠಾನ ಮಾಡಬೇಕು ಎಂದು ಸೂಚನೆ ನೀಡಿದರು