FATHER KANNADA MOVIE: ಅರಮನೆ ನಗರದಲ್ಲಿ ಪ್ರಕಾಶ್‍ ರೈ ಮತ್ತು ‘ಡಾರ್ಲಿಂಗ್‍’ ಕೃಷ್ಣ ಅಭಿನಯದ ಫಾದರ್ ಶೂಟಿಂಗ್

ಬೆಂಗಳೂರು: ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ಮೂಲಕ ನಿರ್ಮಾಣವಾಗುತ್ತಿರುವ, ಪ್ರಕಾಶ್‍ ರೈ ಮತ್ತು ‘ಡಾರ್ಲಿಂಗ್‍’ ಕೃಷ್ಣ ತಂದೆ-ಮಗನಾಗಿ ಅಭಿನಯಿಸುತ್ತಿರುವ ‘ಫಾದರ್’ ಚಿತ್ರದ ಚಿತ್ರೀಕರಣ ಅರಮನೆ ನಗರ ಮೈಸೂರಿನಲ್ಲಿ ನಡೆಯುತ್ತಿದೆ. ೧೦೦ ವರ್ಷಗಳ ಹಳೆಯ ಮನೆಯಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಚಿತ್ರತಂಡದವರು ಚಿತ್ರದ ಕುರಿತು ಮಾಹಿತಿ ನೀಡಿದರು.

‘ಈ ಕಥೆ ಕೇಳಿದಾಗ ನನಗಿಂತ ಮೊದಲು ಇಷ್ಟವಾಗಿದ್ದು ನನ್ನ ಪತ್ನಿ ಮಿಲನಾ ಅವರಿಗೆ. ಕಥೆ ಚೆನ್ನಾಗಿದೆ. ನೀವು ಮಾಡಲೇಬೇಕೆಂದು ಮಿಲನ ಹೇಳಿದರು. ಪ್ರಕಾಶ್ ರೈ ಅವರ ಜೊತೆ ನಟಿಸುವ ಆಸೆಯಿತ್ತು. ಅವರ ಜೊತೆ ಅಭಿನಯಿಸುವಾಗ ಭಯ ಆಗುತ್ತಿತ್ತು. ಎಷ್ಟೋ ಬಾರಿ ಅವರು ಅಭಿನಯಿಸುವುದನ್ನು ನೋಡುತ್ತಾ, ಪ್ರತಿಕ್ರಿಯೆ ಕೊಡುವುದನ್ನೇ ಮರೆತುಬಿಟ್ಟಿರುತ್ತೇನೆ. ‘ಫಾದರ್’ ಜನರ ಮನಸಿನಲ್ಲಿ ಉಳಿಯುವಂತಹ ಚಿತ್ರವಾಗುತ್ತದೆ’ ಎಂದರು ನಾಯಕ ಡಾರ್ಲಿಂಗ್ ಕೃಷ್ಣ.

ಪ್ರಕಾಶ್ ರೈ ಮಾತನಾಡಿ, ‘ಚಂದ್ರು ಜೊತೆಗೆ ನಾನು ಮೊದಲು ‘ಕಬ್ಜ’ ಚಿತ್ರ ಮಾಡಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಈಗ “ಫಾದರ್” ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಇದೊಂದು ಮನಸ್ಸಿಗೆ ಹತ್ತಿರವಾಗುವ ಕಥೆ. ತಂದೆ-ಮಗನ ಪ್ರೀತಿಯ ಜೊತೆಗೆ, ಇವತ್ತಿನ ತಂದೆ ಮಕ್ಕಳ ಸಂಬಂಧದ ಬಗ್ಗೆ ಹೇಳಲಾಗಿದೆ. ಕಥೆ ಕೇಳಿದಾಗ ನನಗೆ ಇದು ಇಂದಿಗೆ ಮುಖ್ಯವಾಗಿ ಬೇಕಾಗಿರುವ ಸಿನಿಮಾ ಎಂದೆನಿಸಿತು. ಇದೊಂದು ಕಾಡುವಂತಹ ಚಿತ್ರ. ಆರ್ ಚಂದ್ರು ಆರ್ ಸಿ ಸ್ಟುಡಿಯೋಸ್ ಮೂಲಕ ಐದು ಚಿತ್ರಗಳನ್ನು ನಿರ್ಮಿಸುತ್ತಿರುವುದು ಖುಷಿಯ ವಿಚಾರ. ನಾನು ಕೂಡ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ. ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಹಾಗೂ ನಾನು ಬಹಳ ಇಷ್ಟೊಡುವ ಮೈಸೂರಿನಲ್ಲಿ ಚಿತ್ರೀಕರಣವಾಗುತ್ತಿರುವುದು ಖುಷಿಯಾಗಿದೆ ಎಂದರು. .

ಕೇವಲ ೧೦೦ ರೂಪಾಯಿ ತೆಗೆದುಕೊಂಡು ಗಾಂಧಿನಗರಕ್ಕೆ ಬಂದ ನಾನು, ಇಂದು ಐದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾತು ಆರಂಭಿಸಿದ ನಿರ್ಮಾಪಕ ಆರ್. ಚಂದ್ರು, ‘ಇದು ಆರ್.ಸಿ ಸ್ಟುಡಿಯೋಸ್ ಬ್ಯಾನರ್ ನಿರ್ಮಾಣದ ಮೊದಲ ಸಿನಿಮಾ. ಈ ಚಿತ್ರಕ್ಕೆ ಗ್ರಾಂಡ್ ಫಾದರ್ ಪ್ರಕಾಶ್ ರಾಜ್ ಎನ್ನಬಹುದು. ಕೃಷ್ಣ ಅವರ ಜೊತೆಗೆ ಈ ಮೊದಲೇ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಈಗ ಸಾಧ್ಯವಾಗುತ್ತಿದೆ. ಇದು ‘ತಾಜಮಹಲ್’ ತರಹ ಎಮೋಷನ್ ಇರುವಂತ ಚಿತ್ರ. ಇದರಲ್ಲಿ ತಂದೆ-ಮಗನ ಬಾಂಧವ್ಯ ತೋರಿಸಲಾಗುತ್ತಿದ್ದು, ‘ಫಾದರ್’ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ತಂದೆಯ ಪಾತ್ರದ ಬಗ್ಗೆ ಕೇಳುತ್ತಿದ್ದಂತೆಯೇ, ಈ ಪಾತ್ರವನ್ನು ಪ್ರಕಾಶ್‍ ರೈ ಮಾಡಿದರೆ ಚೆನ್ನಾಗಿರುತ್ತದೆ ಎಂದೆನಿಸಿತು. ಅವರು ಈ ಚಿತ್ರದಲ್ಲಿ ಅಭಿನಯಿಸಲು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ‌. ಚಿತ್ರವನ್ನು ಒಂದೇ ಹಂತದಲ್ಲಿ ಮೈಸೂರು, ವಾರಣಾಸಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಲಾಗಿದೆ’ ಎಂದರು.

ನಮ್ಮೂರಿರಲ್ಲಿ ಚಿತ್ರೀಕರಣ ನಡೆಯುತ್ತಿರುವುದು ಬಹಳ ಖುಷಿಯಾಗಿದೆ. ಪ್ರಕಾಶ್ ರೈ ಅವರ ಜೊತೆಗೆ ನಟಿಸುವ ಆಸೆ ಈಡೇರಿದೆ ಎಂದರು ಅಮೃತ ಅಯ್ಯಂಗಾರ್.

‘ಚಂದ್ರು ನನ್ನ ‘ಸಖ ಸಖಿ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ನಾನು ಕಾರ್ಯಕಾರಿ ನಿರ್ಮಾಪಕ ಎನ್ನುವುದಕ್ಕಿಂತ ಅವರ ಜೊತೆಗಿದ್ದೀನಿ ಎಂದರು ದಯಾಳ್ ಪದ್ಮನಾಭನ್.

‘ಫಾದರ್’ ಚಿತ್ರಕ್ಕೆ ರಾಜ್‍ ಮೋಹನ್‍ ಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುಜ್ಞಾನ್ ಛಾಯಾಗ್ರಹಣ, ‘ಹನುಮಾನ್’ ಖ್ಯಾತಿಯ ಗೌರಾ ಹರಿ ಸಂಗೀತ ನಿರ್ದೇಶನ, ರಘುನಾಥ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮದನ್ ಹರಿಣಿ, ಸಂತೋಷ್ ಅವರ ನೃತ್ಯ ನಿರ್ದೇಶನ ವಿರುವ ಈ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ.

More News

You cannot copy content of this page