ಖ್ಯಾತ ನಿರೂಪಕಿ ಹಾಗೂ ನಟಿ ಅಪರ್ಣಾ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
1984ರಲ್ಲಿ ಖ್ಯಾತ ನಿರ್ದೇಶಕ ಪುಟ್ಟಣ ಕಣಗಾಲ್ ಅವರ ಮಸಣದ ಹೂ ಚಿತ್ರದ ಮೂಲಕ ಬೆಳ್ಳಿ ಪರದೆಗೆ ಪ್ರವೇಶ ಮಾಡಿದ್ದ ಅಪರ್ಣಾ ಅವರು ತಮ್ಮ ಅಚ್ಚ ಕನ್ನಡದ ಶೈಲಿಯ ನಿರೂಪಣೆ ಮೂಲಕ ರಾಜ್ಯದ ಜನತೆಯ ಮನ ಗೆದ್ದಿದ್ದರು. ಸರ್ಕಾರಿ ಕಾರ್ಯಕ್ರಮ ಅಥವಾ ಯಾವುದೇ ಪ್ರಮುಖ ಕಾರ್ಯಕ್ರಮವಾದರೆ ಅಲ್ಲಿ ಅಪರ್ಣಾ ಅವರೇ ನಿರೂಪಕಿಯಾಗಿರುತ್ತಿದ್ದರು.
ರೇಡಿಯೋ ಜಾಕಿಯಾಗಿ, ಧಾರವಾಹಿ, ಟಿ.ವಿ.ಶೋ ಗಳಲ್ಲಿ ಅಭಿನಯಿಸಿ ಖ್ಯಾತಿಗಳಿಸಿದ್ದ ಅಪರ್ಣಾ ಅವರು ಕಿರಿಯ ವಯಸ್ಸಿನಲ್ಲೇ ನಮ್ಮನ್ನು ಅಗಲಿರುವುದು ದುಃಖ ತರಿಸಿದೆ.
ಅಪರ್ಣ ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.