ವಿಧಾನಪರಿಷತ್:- ಹುಬ್ಬಳ್ಳಿಯಲ್ಲಿ ನಡೆದ ಯುವತಿ ಅಂಜಲಿ ಅಂಬಿಗೇರ ಹತ್ಯೆ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ವಿಧಾನ ಪರಿಷತ್‌ನಲ್ಲಿ ಸದಸ್ಯ ತಿಪ್ಪಣ್ಣ ಕಮಕನೂರು ಅವರು ಕೇಳಿದ, ‘ಕೊಲೆಯಾದ ಯುವತಿ ಅಂಜಲಿ ಅಂಬಿಗೇರ ಕುಟುಂಬಕ್ಕೆ ಪರಿಹಾರ ಕಲ್ಪಿಸುವಲ್ಲಿ ವಿಳಂಬ ಮತ್ತು ಪ್ರಕರಣದ ವಿಚಾರಣಗೆ ಫಾಸ್ಟ್ರ್ಯಾಕ್ ಕೋರ್ಟ್’ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.
ಸಾಮಾನ್ಯವಾಗಿ ಕೊಲೆ ಪ್ರಕರಣಗಳಿಗೆ ಸರ್ಕಾರ ಪರಿಹಾರ ನೀಡುವುದಿಲ್ಲ. ಯುವತಿಯ ಕುಟುಂಬದ ಬಡತನವನ್ನು ನೋಡಿದಾಗ ಎಂಥವರಿಗಾದರೂ ಕನಿಕರ, ಅನುಕಂಪ ಬರುತ್ತದೆ. ಹೀಗಾಗಿ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿ ಅವರೊಂದಿಗೆ ಮಾತನಾಡಿ ಪರಿಹಾರ ಕಲ್ಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಘಟನೆ ನಡೆದ ಬಳಿಕ ಅವರ ನಿವಾಸಕ್ಕೆ ಭೇಟಿ ನೀಡಿ, ಯುವತಿಯ ಅಜ್ಜಿಯೊಂದಿಗೆ ಮಾತನಾಡಿದ್ದೇನೆ. ಅವರ ಬಡತನ ಮತ್ತು ಜೀವಮ ಶೈಲಿಯನ್ನು ಕಣ್ಣಾರೆ ನೋಡಿದಾಗ ಅನುಕಂಪವಷ್ಟೇ ಅಲ್ಲದೇ ದುಖವು ಆಗುತ್ತದೆ. ಸರ್ಕಾರವು ಗಂಭೀರವಾಗಿ ಪರಿಗಣಿಸಿ ಸಹಾಯ ಮಾಡುತ್ತೇವೆ ಎಂದರು.
ಸ್ಲಂ ಬೋರ್ಡ್ ಅಥವಾ ಆಶ್ರಯ ಯೋಜನೆಯಡಿ ಮನೆ ಕೊಡಿಸುವುದಾಗಿ ಯುವತಿಯ ಅಜ್ಜಿಗೆ ಭರವಸೆ ನೀಡಿದ್ದೆನು. ಈಗಾಗಲೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಆಶ್ರಯ ಯೋಜನೆಯಡಿ ಮನೆ ನೀಡಲು ಒಪ್ಪಿದ್ದಾರೆ. ತಕ್ಷಣ ಮನೆ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಪ್ರಕರಣದ ತನಿಖೆಯು ಚಾರ್ಜ್‌ಶೀಟ್ ಪಟ್ಟಿ ಸಲ್ಲಿಸುವ ಹಂತದಲ್ಲಿದೆ. ಈಗಾಗಲೇ ತ್ವರಿತಗತಿಯಲ್ಲಿ ಆರೋಪಿಯನ್ನು ಬಂಧಿಸಿ, ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದ್ದು ಫಾಸ್ಟ್ರ್ಯಾಕ್ ಕೋರ್ಟ್‌ನ ಅಗತ್ಯವಿಲ್ಲ ಎಂದು ಹೇಳಿದರು.