MB PATIL ON BJP PADAYATRA: ಕಳಂಕಿತ ಬಿಜೆಪಿಗೆ ನೈತಿಕತೆ ಇಲ್ಲ: ಎಂ‌ ಬಿ ಪಾಟೀಲ

ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ ಬಿಜೆಪಿಯವರು ಬೇಕಾದರೆ ಪಾದಯಾತ್ರೆ ಮಾಡಿಕೊಳ್ಳಲಿ. ತಮ್ಮ ಸರಕಾರವಿದ್ದಾಗ ನಡೆದ ಶೇ.40ರಷ್ಟು ಕಮೀಷನ್, ಕೋವಿಡ್ ಕಾಲದ ಹಗರಣ, ಮಾರಿಷಸ್ ನಲ್ಲಿ ಇಟ್ಟಿದ್ದಾರೆ ಎನ್ನಲಾಗುತ್ತಿರುವ ಹತ್ತು ಸಾವಿರ ಕೋಟಿ ರೂಪಾಯಿ ಹಗರಣಗಳ ಬಗ್ಗೆ ಅವರು ಜನತೆಗೆ ಸತ್ಯ ತಿಳಿಸಲಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಬುಧವಾರ ವ್ಯಂಗ್ಯವಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ವಿಜಯೇಂದ್ರ, ಅಶ್ವತ್ಥನಾರಾಯಣ, ಅಶೋಕ, ರಮೇಶ್ ಜಾರಕಿಹೊಳಿ, ಯತ್ನಾಳ ಹೀಗೆ ಇಪ್ಪತ್ತು ಗುಂಪುಗಳಿವೆ. ಪಾದಯಾತ್ರೆ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆಯೇ ಒಮ್ಮತವಿಲ್ಲ. ಬಿಜೆಪಿಯಲ್ಲೂ ಯತ್ನಾಳ ಮತ್ತು ರಮೇಶ ಜಾರಕಿಹೊಳಿ ಬೇರೆ ತರಹ ಮಾತನಾಡುತ್ತಿದ್ದಾರೆ,’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರಕಾರವಿದ್ದಾಗ ಸಾಲುಸಾಲು ಹಗರಣಗಳು ನಡೆದಿದ್ದವು. ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಮೈಸೂರು ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ. ಈಗಾಗಲೇ ಅವರು ಇದರ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ ಎಂದು ಅವರು ಪ್ರತಿಪಾದಿಸಿದರು.

ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯ ನೀತಿ ಮಾಡಿದ್ದೇ ಬಿಜೆಪಿಯವರು. ಸೈಟುಗಳನ್ನು ಹಂಚಿದ್ದೂ ಅವರೇ. ಈಗ ಜನರ ದಿಕ್ಕು ತಪ್ಪಿಸಲು ಪಾದಯಾತ್ರೆಯ ನಾಟಕ ಆಡಲು ಹೊರಟಿದ್ದಾರೆ ಎಂದು ಪಾಟೀಲ ಟೀಕಿಸಿದರು.

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಪಕ್ಷದ ಹಲವು ವಿಚಾರಗಳ ಬಗ್ಗೆ ಮಾತನಾಡಲು ದೆಹಲಿಗೆ ಹೋಗಿದ್ದಾರಷ್ಟೆ. ಸಂಪುಟ ಪುನಾರಚನೆ ಎಲ್ಲ ಏನೂ ಇಲ್ಲ. ಮಂತ್ರಿಸ್ಥಾನ ಬೇಕೆಂಬ ಆಸೆ ಇರುವವರು ಅದಕ್ಕಾಗಿ ಕೇಳುವುದು ಸ್ವಾಭಾವಿಕ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಸಚಿವ ಜಮೀರ್ ಅಹಮದ್ ಸಂಪುಟ ಪುನಾರಚನೆ ಬಗ್ಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಇದನ್ನೆಲ್ಲ ಹೈಕಮಾಂಡ್ ನೋಡಿಕೊಳ್ಳುತ್ತದೆ‌. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅವರು ನುಡಿದರು.

More News

You cannot copy content of this page