Governor Notice To Siddaramaiah: ಸಿದ್ದರಾಮಯ್ಯಗೆ ರಾಜ್ಯಪಾಲರ ನೋಟಿಸ್‌, ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ವಕೀಲ ಟಿಜೆ ಅಬ್ರಹಾಂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್ ನೋಟಿಸ್‌ ನೀಡಿದ್ದು ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಮುಡಾ ಹಗರಣಕ್ಕೆ ಸಂಬಂಧಸಿದಂತೆ ಸಿಎಂ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖವಾಗಿರುವ ಅಂಶಗಳ ಕುರಿತಾಗಿ ವಿವರಣೆ ನೀಡುವಂತೆ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದಾರೆ. ರಾಜ್ಯಪಾಲರ ಈ ನಡೆ ರಾಜಕೀಯವಾಗಿಯೂ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ.

ಜುಲೈ 27 ರಂದೇ ಈ ನೋಟಿಸ್ ನೀಡಲಾಗಿದೆ. ಈ ನಡುವೆ ಇಂದು ಸಚಿವ ಸಂಪುಟ ಸಭೆಯೂ ನಡೆಯಲಿದೆ. ಸಂಪುಟ ಸಭೆಯಲ್ಲಿ ರಾಜ್ಯಪಾಲರ ನಡೆಯ ಬಗ್ಗೆ ಯಾವ ಹೆಜ್ಜೆಯನ್ನು ಸರ್ಕಾರ ಇಡಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯಪಾಲರ ನೋಟಿಸ್ ಕುರಿತಾಗಿ ಸರ್ಕಾರ ಕಾನೂನು ಮಾರ್ಗವನ್ನು ಅನುಸರಿಸಲಿದ್ಯಾ ಅಥವಾ ನೋಟಿಸ್‌ಗೆ ಉತ್ತರವನ್ನು ನೀಡಲಿದೆಯಾ? ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಟಿಜೆ ಅಬ್ರಹಾಂ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?

ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 55.80 ಕೋಟಿ ನಷ್ಟವಾಗಿದೆ. ಇದರ ಕುರಿತಾಗಿ ತನಿಖೆ ನಡೆಸಲಿ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯ 7,9,11,12 ಹಾಗೂ 13 ನೇ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಅಗತ್ಯ ಇದೆ ಎಂದು ಉಲ್ಲೇಖ ಮಾಡಲಾಗಿದೆ.

ಮಹತ್ವ ಪಡೆದುಕೊಂಡ ಸಂಪುಟ ಸಭೆ

ಈ ಬೆಳವಣಿಗೆಳ ನಡುವೆಯೇ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ 11 ಗಂಟೆಗೆ ಸಚಿವ ಸಂಪುಟ ಸಭೆಯೂ ನಡೆಯಲಿದೆ. ಈ ಸಭೆಯಲ್ಲಿ ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ನೋಟಿಸ್ ವಾಪಸ್ ಪಡೆಯಲು ರಾಜ್ಯಪಾಲರನ್ನು ಕೋರುವ ನಿರ್ಣಯ ಸಾಧ್ಯತೆ ಇದೆ.

ಒಂದು ವೇಳೆ ಉತ್ತರ ನೀಡುವುದು ಅನಿವಾರ್ಯವಾದಲ್ಲಿ, ಸಿಎಂ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ಯಾವ ರೀತಿಯಲ್ಲಿ ಸಮರ್ಥಿಸಿಕೊಳ್ಳಬೇಕು ಹಾಗೂ ಕಾನೂನಿನ ಆಯಾಮಗಳೇನು ಎಂಬ ನಿಟ್ಟಿನಲ್ಲಿಯೂ ಸಂಪುಟ ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ.

ರಾಜಭವನದ ದುರ್ಬಳಕೆ ಆರೋಪ

ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜಭವನವನ್ನು ಬಿಜೆಪಿ ಹಾಗೂ ಜೆಡಿಎಸ್‌ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ರಾಜಭವನ ದುರ್ಬಳಕೆ ಮಾಡುವ ಮೂಲಕ ಸರ್ಕಾರ ಪತನಗೊಳಿಸುವ ಸಂಚು ನಡೆಯುತ್ತಿದೆ ಎಂಬುವುದು ಅವರ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟದ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ.

More News

You cannot copy content of this page